ಬೆಂಗಳೂರು: ನನಗೆ ಯಾವ ಪಕ್ಷದಿಂದಲೂ ಆಹ್ವಾನ ಬಂದಿಲ್ಲ, ಯಾರೂ ಕೂಡ ನನ್ನನ್ನು ಸಂಪರ್ಕಿಸಿಲ್ಲ ಎಂದು ಜೆಡಿಎಸ್ ನ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ವಿಧಾನಪರಿಷತ್ ನ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ನಡೆಯುತ್ತಿರುವ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ಸೇರ್ಪಡೆ ವದಂತಿಯನ್ನು ಅಲ್ಲಗಳೆದರು. ಜೆಡಿಎಸ್ ಪಕ್ಷದಲ್ಲಿ ಅವಿಶ್ವಾಸ ಯಾವುದೂ ಇಲ್ಲ. ಪಕ್ಷ ತ್ಯಜಿಸುವ ಪ್ರಸ್ತಾಪವೂ ಇಲ್ಲ. ವದಂತಿ ಎಲ್ಲಿಂದ ಹರಡುತ್ತಿದೆ ಅನ್ನೋದೆ ಗೊತ್ತಿಲ್ಲ. ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಒಡನಾಟದಲ್ಲಿಯೇ ಮುಂದುವರಿಯುತ್ತೇನೆ. ಅಧಿಕಾರದ ಆಮಿಷಕ್ಕೆ ಒಳಗಾಗುವುದಿಲ್ಲ. ಕಾಂಗ್ರೆಸ್ ಅಥವಾ ಬಿಜೆಪಿ ಜೊತೆ ಹೋಗುವ ಪ್ರಶ್ನೆಯೇ ಇಲ್ಲ. ರಾಜ್ಯಸಭಾ ಸದಸ್ಯ ಕೆ. ಸಿ. ರಾಮಮೂರ್ತಿ ರಾಜೀನಾಮೆ ನಂತರ ನಾನು ರಾಜೀನಾಮೆ ಕೊಡುತ್ತೇನೆಂದು ಕೆಲವರು ಹೇಳುತ್ತಿದ್ದಾರೆ. ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಪಕ್ಷ ತ್ಯಜಿಸುವ ಅವಶ್ಯಕತೆನೂ ತನಗಿಲ್ಲ ಎಂದು ಕುಪೇಂದ್ರ ರೆಡ್ಡಿ ಹೇಳಿದರು.
ಇನ್ನು, ಕೆ. ಸಿ. ರಾಮಮೂರ್ತಿ ಅವರು ನಮ್ಮ ಸಂಬಂಧಿಕರು. ಸಂಸತ್ನ ಇಬ್ಬರದ್ದು ಅಕ್ಕಪಕ್ಕದ ಸೀಟೇ. ಅಲ್ಲಿ ಬಿಟ್ಟು ಬೇರೆ ಕಡೆ ಎಲ್ಲೂ ಕೂತ್ಕೊಂಡಿಲ್ಲ. ನನ್ನ ಜೀವನದಲ್ಲಿ ಯಾರಿಗೂ ಭಯ ಬಿದ್ದವನಲ್ಲ. ಐಟಿ, ಇಡಿಯ ಯಾವ ಭಯಯೂ ಇಲ್ಲ. ಈ ಹಿಂದೆ ಎರಡು ಸಲ ದೊಡ್ಡ ಪ್ರಮಾಣದಲ್ಲಿ ದಾಳಿ ಮಾಡಿದಾಗ ಏನು ಆಗಲಿಲ್ಲ. ಎಲ್ಲಾ ದಾಖಲೆಗಳು ಸರಿಯಾಗಿಯೇ ಇವೆ. ನಾನು ತೆಗೆದುಕೊಳ್ಳುವ ಸಂಬಳಕ್ಕೂ ತೆರಿಗೆ ಕಟ್ಟುತ್ತೇನೆ. ಯಾವುದಕ್ಕೂ ಭಯ ಬೀಳುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.