ಬೆಂಗಳೂರು : ನಾವು ಧರ್ಮವನ್ನು ಪ್ರಚಾರಕ್ಕೆ ಬಳಸಿಕೊಂಡಿಲ್ಲ. ನಮ್ಮ ಕುಟುಂಬವೂ ಬಳಸಿಕೊಂಡಿಲ್ಲ. ಧರ್ಮ ಬಳಸಿಕೊಂಡು ರಾಜಕಾರಣ ಮಾಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ವಿಚಾರದಲ್ಲಿ ಮೊನ್ನೆ ಶಿವಮೊಗ್ಗದಲ್ಲಿ ನಾನು ದೇಣಿಗೆ ಬಗ್ಗೆ ಹೇಳಿಕೆ ನೀಡಿದ್ದೆ.
ನನ್ನ ಹೇಳಿಕೆ ಬಗ್ಗೆ ವಿಶ್ವ ಹಿಂದು ಪರಿಷತ್‌ನ ಕೆಲವರು ಮಾತನಾಡಿದ್ದಾರೆ. ಇನ್ನು, ಕೆಲವರು ಪಬ್ಲಿಸಿಟಿಗಾಗಿ ಈ ರೀತಿ ಹೇಳಿದ್ದಾರೆ ಅಂದಿದ್ದಾರೆ. ದೇಣಿಗೆ ಹೆಸರಲ್ಲಿ ಹಣ ದುರ್ಬಳಕೆಯಾಗ್ತಿದೆ. ಇದರ ಲೆಕ್ಕ ಇಡುವವರು ಯಾರು? ಎಂದು ಹೇಳಿದ್ದೆ. ನಾನು ಕೊಟ್ಟ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಹೇಳಿದರು.
ಕೆಲವರು ಸ್ಟಿಕ್ಕರ್ ಹಾಕ್ತೇವೆ ಅಂತಾ ಒಪ್ಪಿಕೊಂಡಿದ್ದಾರೆ. ಪ್ರೋತ್ಸಾಹ ತುಂಬುವವರು ಯಾಕೆ ಹಾಕಬೇಕು. ಮೊಳೆ ಹೊಡೆಯೋ ಕೆಲಸ ಜೆಡಿಎಸ್ ಮಾಡ್ತಿಲ್ಲ. ನೀವು (ಬಿಜೆಪಿ) ಈ ದೇಶಕ್ಕೆ ಮೊಳೆ ಹೊಡೆಯುತ್ತಿರುವುದು ಎಂದು ಬಿಜೆಪಿ ನಾಯಕರ ವಿರುದ್ಧ ಗುಡುಗಿದರು.
ಪಾರದರ್ಶಕವಾಗಿ ಹಣ ಸಂಗ್ರಹ ಮಾಡಲಿ, ಇದಕ್ಕೆ ನಮ್ಮ ಅಭ್ಯಂತರವೇನಿಲ್ಲ. ರಾಮನ ಹೆಸರನ್ನು ನಾವು ದುರ್ಬಳಕೆ ಮಾಡ್ತಿಲ್ಲ. ನಿಮ್ಮ ರಾಜಕೀಯಕ್ಕಾಗಿ ರಾಮನ ಹೆಸರು ಬಳಕೆ ಮಾಡಿಕೊಳ್ತಿದ್ದೀರಾ? ಎಂದ ಹೆಚ್‌ಡಿಕೆ, ಪುಂಡ-ಪೋಕರಿಗಳು ಹಣ ಸಂಗ್ರಹ ಮಾಡ್ತಿದ್ದಾರೆ. ವಿಹೆಚ್ಪಿಯವರು ಇದಕ್ಕೆ ಅವಕಾಶ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದರು.
ಪ್ರವಾಹದ ವೇಳೆಯೂ ಕೆಲವರು ಹಣ ಸಂಗ್ರಹಿಸಿದ್ದರು. ಹಣ ವಿನಿಯೋಗಿಸದೆ ದುರ್ಬಳಕೆ ಮಾಡಿಕೊಂಡರು. ಅದೇ ರೀತಿ ಈಗಲೂ ಮಾಡಿದರೆ ಸರಿಯೇ? ನಾವು ಚಿಲ್ಲರೆ ರಾಜಕಾರಣ ಮಾಡಿದವರಲ್ಲ. ದೇವೇಗೌಡರು ರಾಜಕಾರಣ ಮಾಡಿದವರು. ಅದಕ್ಕೆ ಧಾರ್ಮಿಕ ರಾಜಕಾರಣ ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಸಿಎಂ ಅಶ್ವತ್ಥ್ ನಾರಾಯಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಮಲ್ಲೇಶ್ವರಂನಲ್ಲಿ ಜಾಬ್ ಕೋಡ್‌ನಲ್ಲಿ ಕೋಟ್ಯಂತರ ರೂ. ಹಣ ಹೊಡೆದವರು ಯಾರು?. ಮೊದಲು ಅದನ್ನು ಒಪ್ಪಿಕೊಳ್ಳಲಿ ಎಂದರು.'ನಾಜಿ' ಸಂಸ್ಕೃತಿ ಬಗ್ಗೆ ನಾನು ಮಾತನಾಡಿಲ್ಲ. ಆರ್ಎಸ್ಎಸ್ ನಾಜಿ ಬಗ್ಗೆ ಇತಿಹಾಸಜ್ಞರು ಉಲ್ಲೇಖಿಸಿದ್ದಾರೆ. ಅದನ್ನಷ್ಟೇ ನಾನು ವಿವರಿಸಿದ್ದೇನೆ. ದೇಶಕ್ಕೆ ಇವರ ಕೊಡುಗೆಯೇನು? ಎಂದು ಪ್ರಶ್ನಿಸಿದರು.
ಏಳು ವರ್ಷದಲ್ಲಿ ಕೇಂದ್ರ ಸರ್ಕಾರ ಮಾಡ್ತಿರೋದೇನು?. ಬಡವರು ಗ್ಯಾಸ್ ತೆಗೆದುಕೊಳ್ಳೋಕೆ ಆಗುತ್ತಿಲ್ಲ. ಕೋವಿಡ್‌ನಿಂದ ಜನ ಕೆಲಸ ಕಳೆದುಕೊಂಡು ಮನೆಯಲ್ಲಿದ್ದಾರೆ. ನಾನು ಲಘುವಾಗಿ ಮಾತನಾಡುವವನಲ್ಲ. ಸಮಸ್ಯೆ ಸರಿಪಡಿಸಿಕೊಳ್ಳಿ ಅಂತಾ ಹೇಳಿದ್ದೇನೆ. ನಾನೇನು ರಾಮನ ವಿರುದ್ಧವಾಗಿ ಮಾತನಾಡಿದ್ದೇನಾ?. ಧರ್ಮದ ಹೆಸರಿನಲ್ಲಿ ಮುಗ್ಧರ ಹೆಸರು ಹಾಳು ಮಾಡಬೇಡಿ ಎಂದು ಮನವಿ ಮಾಡಿದರು.
ನನಗೆ ಬೆದರಿಕೆ : ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಕೊಡಿ ಅಂತಾ ನನಗೆ ಬೆದರಿಕೆ ಹಾಕ್ತಿದ್ದಾರೆ. ಇನ್ನು, ಸಾಮಾನ್ಯ ಜನರ ಪಾಡೇನು? ಎಂದ್ರು. ನನ್ನ ಮನೆಗೆ ದೇಣಿಗೆ ಸಂಗ್ರಹಕ್ಕೆ ಮಹಿಳೆ ಸೇರಿ ಮೂವರು ಬಂದಿದ್ರು. ನಾನು ಪ್ರಶ್ನಿಸಿದಕ್ಕೆ ಆ ಹೆಣ್ಣುಮಗಳು ಮೈಮೇಲೆ ಬೀಳಲು ಬಂದರು. ದೇಶ ನಿರ್ಮಾಣ ಮಾಡಬೇಕು ಅಂದರು.
ತಡಿಯಮ್ಮ ಎಂದು ಸಮಾಧಾನ ಮಾಡಿದೆ. ನೋಡಮ್ಮ ಇಲ್ಲಿ ಈ ಹೆಣ್ಣು ಮಗಳಿಗೆ ಕಾಲೇಜು ಶುಲ್ಕ ಕಟ್ಟಬೇಕು. ಇನ್ನೊಬ್ಬರಿಗೆ ಆಸ್ಪತ್ರೆ ಶುಲ್ಕ ಕಟ್ಟಬೇಕು. ಇದೇ ನಮ್ಮ ಧರ್ಮ ಅಂದೆ. ನಾನು ಇವರಲ್ಲಿ ರಾಮ ಸೀತೆ ಕಾಣುತ್ತೇನೆ. ಬಡವರಲ್ಲಿ ರಾಮ ಸೀತೆ ಕಾಣುತ್ತೇನೆ. ಹೀಗೆ ಹೇಳಿದ್ದಕ್ಕೆ ಆ ಯಮ್ಮ ಮೈಮೇಲೆ ಬೀಳಲು ಬಂದರು ಎಂದ್ರು.
ಇವತ್ತು ಮುಕ್ತವಾಗಿ ಮಾತನಾಡುವ ಹಕ್ಕು ಕಿತ್ತು ಹಾಕುತ್ತಿದ್ದಾರೆ. ದೇಶವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದೀರಾ?. ನನ್ನ ಹೇಳಿಕೆ ಬಗ್ಗೆ ನಾನು ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು. 1989ರಲ್ಲಿ ಕಲೆಕ್ಷನ್ ಮಾಡಲಾಗಿತ್ತು.
ಅದರ ಲೆಕ್ಕ ಯಾರಿಗಾದರೂ ಕೊಟ್ಟಿದ್ದಾರಾ?. ರಾಮನ ಹೆಸರಿನಲ್ಲಿ ಇಟ್ಟಿಗೆ ಸೇರಿ ಬೇರೆ ಕಲೆಕ್ಟ್ ಮಾಡಿರುವುದು. ಇದರ ಲೆಕ್ಕ ಮೊದಲು ಕೊಡಿ. ಯಾರ್ಯಾರೋ ಸಂಗ್ರಹ ಮಾಡ್ತಿದ್ದಾರೆ. ಆ ಹಣದ ಲೆಕ್ಕ ಎಲ್ಲಿಗೆ ಹೋಗುತ್ತದೆ. ರಶೀದಿ ಬುಕ್ ಸರ್ಕಾರ ಪ್ರಿಂಟ್ ಮಾಡಿಕೊಟ್ಟಿದ್ಯಾ? ಎಂದು ಪ್ರಶ್ನಿಸಿದರು.
ದೇಣಿಗೆ ಸಂಗ್ರಹಕ್ಕೆ ನನ್ನ ವಿರೋಧ ಇಲ್ಲ: ದೇಣಿಗೆ ಸಂಗ್ರಹಕ್ಕೆ ನನ್ನ ವಿರೋಧವಿಲ್ಲ. ನನ್ನ ಪಕ್ಷದ ಮುಖಂಡರು ದೇಣಿಗೆ ಕೊಟ್ಟಿದ್ದಾರೆ. ದಾಸರಹಳ್ಳಿ ಶಾಸಕ ಮಂಜು ₹25 ಲಕ್ಷ ಕೊಟ್ಟಿದ್ದಾರೆ. ಚನ್ನರಾಯಪಟ್ಟಣದ ಬಾಲಕೃಷ್ಣ ದೇಣಿಗೆ ಕೊಟ್ಟಿದ್ದಾರಂತೆ. ದೇಣಿಗೆಗೆ ನನ್ನ ವಿರೋಧ ಇಲ್ಲ.
ಆದರೆ, ದೇಣಿಗೆ ಸಂಗ್ರಹಕ್ಕೆ ಯಾರು ಅನುಮತಿ ಕೊಟ್ಟಿದ್ದು ಎಂದರು. ದೇವರ ಹೆಸರನ್ನು ದುರ್ಬಳಕೆ ಮಾಡೋದು ಸರಿಯಲ್ಲ. ನಾವು ಯಾವತ್ತು ದೇವರ ಹೆಸರನ್ನು ದುರ್ಬಳಕೆ ಮಾಡಿಲ್ಲ, ರಾಮನ ಹೆಸರಿನಲ್ಲಿ ಹಣ ಸಂಗ್ರಹಿಸುವುದು ತಪ್ಪು. ಪಾರದರ್ಶಕವಾಗಿ ಸಂಗ್ರಹಿಸದಿರುವುದು ಸರಿಯಲ್ಲ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅಹಿಂದ ಸಮಾವೇಶ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಿಂದೆಯೂ ಅವರು ಸಂಘಟನೆ ಕಟ್ಟಿದ್ದರಲ್ಲ. ಐದು ವರ್ಷ ಅಧಿಕಾರದಲ್ಲಿದ್ದರು. ಆಗ ಆ ಸಮುದಾಯದ ಸಮಸ್ಯೆ ಬಗೆಹರಿಸಬೇಕಿತ್ತಲ್ಲ?. ಯಾಕೆ ಅಹಿಂದ ಸಮುದಾಯ ಸಮಸ್ಯೆ ಪರಿಹರಿಸಲಿಲ್ಲ. ಮುಖ್ಯಮಂತ್ರಿಯಾಗುವ ಗೋಲ್ ಅವರಿಗಿದೆ ಎಂದು ಟಾಂಗ್ ನೀಡಿದರು.
ದಿಶಾ ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ಹಲವು ಸಮಸ್ಯೆಗಳ ಬಗ್ಗೆ ಆ ಹೆಣ್ಣುಮಗಳು ಹೋರಾಟ ಮಾಡಿದ್ದಾಳೆ. ಅಂತಹ ಹೆಣ್ಣುಮಗಳು ದೇಶದ ಭದ್ರತೆಗೆ ಧಕ್ಕೆ ತರ್ತಾರಾ?. ಆ ಹೆಣ್ಣುಮಗಳ ಬಗ್ಗೆ ಹೆಚ್ಚು ತಿಳಿದಿಲ್ಲ. ಯಾರಾದ್ರೂ ಮಾತನಾಡಿದರೆ ದೇಶದ್ರೋಹಿ ಪಟ್ಟ ಕಟ್ಟುತ್ತಾರೆ. ಆ ಟೂಲ್ ಕಿಟ್ ಅನ್ನೋದನ್ನ ತೆಗೆದು ಹಾಕಲಿ ಎಂದು ಒತ್ತಾಯಿಸಿದರು.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕೊಲ್ಲುತ್ತಿದ್ದಾರೆ : ಬಿಜೆಪಿಯವರು ಅನ್ ಡಿಕ್ಲೇರ್ ಎಮರ್ಜೆನ್ಸಿ ತಂದಿದ್ದಾರೆ. ಇಂದಿರಾಗಾಂಧಿ ಅವರು ಅಧಿಕೃತ ತಂದಿದ್ದರಷ್ಟೇ.. ಇದಕ್ಕೆ ಜನರೇ ಹೋರಾಟ ಆರಂಭಿಸಬೇಕು. ಪ್ರತಿ ನಾಗರಿಕ ಇದರ ಬಗ್ಗೆ ಚಿಂತೆ ಮಾಡಬೇಕು. ಇದಕ್ಕೆಲ್ಲ ಅಂತಿಮ ದಿನಗಳು ಬರುತ್ತವೆ ಎಂದರು. ಪೆಟ್ರೋಲ್, ಡೀಸೆಲ್ ಬೆಲೆ ಏರುತ್ತಲೇ ಇದೆ. ಇದರ ಬಗ್ಗೆ ಯಾರು ಮಾತನಾಡ್ತಿಲ್ಲ. ಜನರ ಅರಿವಿಗೇ ಇದು ಬರಬೇಕು ಎಂದು ಹೇಳಿದರು.