ಬೆಂಗಳೂರು: ಚಂಬಲ್ ಕಣಿವೆಯ ದರೋಡೆಕೋರರು ವಿಧಾನಸೌಧದಲ್ಲಿ ಸೇರಿಕೊಂಡಿದ್ದಾರೆ. ಅವರನ್ನು ಓಡಿಸುವ ಕೆಲಸ ಮಾಡಬೇಕಿದೆ. ಹಾಗಾಗಿ, ಪ್ರಾದೇಶಿಕ ಪಕ್ಷಕ್ಕೆ ಒಂದು ಅವಕಾಶ ಕೊಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.
ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಜನತಾ ಮಿತ್ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರು ನಗರವನ್ನು ವಿಶ್ವ ಮಟ್ಟಕ್ಕೆ ಹಾಳು ಮಾಡಿದ್ದಾರೆ. ಅದನ್ನು ಸರಿ ಮಾಡಲು ನಮಗೆ ಅಧಿಕಾರ ನೀಡಿ ಎಂದು ಜನತೆಯನ್ನು ಕೈ ಮುಗಿದು ಬೇಡಿಕೊಂಡರು.
ದೇವೇಗೌಡರು ಆರೋಗ್ಯ ಸಮಸ್ಯೆ ಇದ್ದರೂ ಸಮಾವೇಶಕ್ಕೆ ಬಂದಿದ್ದಾರೆ; ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಬಡವರಿಗೆ ನೆರವಾಗಬೇಕೆಂಬ ಹಂಬಲದಿಂದ ದೇವೇಗೌಡರು ಆರೋಗ್ಯ ಸಮಸ್ಯೆ ಇದ್ದರೂ ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಹೀಗಾಗಿ ನೀವು ಬೆಂಬಲ ನೀಡಿ, ನಿಮ್ಮನ್ನು ನಂಬಿದ್ದೇವೆ ನಾವು ಎಂದರು. ಕನ್ನಡ, ಕನ್ನಡಿಗರಿಗೆ ಸ್ವಾಭಿಮಾನ ತಂದುಕೊಟ್ಟವರು ಹೆಚ್.ಡಿ.ದೇವೇಗೌಡರು, ಹಲವು ತಿಂಗಳ ಬಳಿಕ ಮೊದಲ ಬಾರಿಗೆ ಈ ಸಮಾವೇಶ ಮೂಲಕ ಹೋರಾಟಕ್ಕೆ ಸ್ಪೂರ್ತಿ ತಂದುಕೊಟ್ಟಿದ್ದಾರೆ.
ಬೆಂಗಳೂರಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ತರಲು ಜೆಡಿಎಸ್ ಅಧಿಕಾರಕ್ಕೆ ಬರಬೇಕಿದೆ. ನಾಡಿನ ಆರೂವರೆ ಕೋಟಿ ಜನರ ಆಶೀರ್ವಾದದೊಂದಿಗೆ ಅಧಿಕಾರಕ್ಕೆ ಬರಬೇಕೆಂಬುದು ನಮ್ಮ ಅಪೇಕ್ಷೆ. ಅದರಂತೆ ಜನತಾ ಜಲಧಾರೆ, ಜನತಾ ಮಿತ್ರ ಕಾರ್ಯಕ್ರಮ ರೂಪಿಸಿದ್ದೆವು.
ಜನತಾ ಮಿತ್ರಕ್ಕೆ ವ್ಯಾಪಕ ಬೆಂಬಲ: ಜನತಾ ಮಿತ್ರ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಒಂದು ಲಕ್ಷ ಜನರ ಪತ್ರಗಳು ಬಂದಿದ್ದು, ಆನ್ಲೈನ್ ಮೂಲಕವೂ ಸಮಸ್ಯೆಗಳು ಹಾಗೂ ಪರಿಹಾರಗಳ ಬಗ್ಗೆ ಅಭಿಪ್ರಾಯ ಕಳುಹಿಸಿದ್ದಾರೆ ಎಂದು ಹೇಳಿದರು. ಜೆಡಿಎಸ್ ಅಧಿಕಾರದಲ್ಲಿದ್ದಾಗ ಮಾತ್ರ ಬೆಂಗಳೂರಿಗೆ ಶಾಶ್ವತ ಯೋಜನೆಗಳು. ದೇವೇಗೌಡರು ಅಧಿಕಾರದಲ್ಲಿದ್ದಾಗ ಕೆರೆ ಕಟ್ಟೆಗಳ ರಕ್ಷಣೆಗೆ ಕ್ರಮ ಕೈಗೊಂಡಿದ್ದರು.
ಆದರೆ, ಇಂದು ಅಭಿವೃದ್ಧಿ ನೆಪದಲ್ಲಿ ಕೆರೆಕಟ್ಟೆಗಳನ್ನು ಮುಚ್ಚಿದ್ದಾರೆ. ಪರಿಣಾಮ ಇಂದು ಅನೇಕ ಬಡಾವಣೆಗಳು ಜಲಾವೃತವಾಗಿ ಜನ ಪರಿತಪಿಸಿದ್ದರು. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳ ಕೈನಲ್ಲಿ ಬಿಬಿಎಂಪಿ ಇತ್ತು. ಅಭಿವೃದ್ಧಿಗಿಂತ ತೆರಿಗೆ ಹಣ ಲೂಟಿ ಮಾಡಿದ್ದರ ಬಗ್ಗೆ ಜನ ಚರ್ಚೆ ಮಾಡ್ತಿದ್ದಾರೆ ಎಂದು ರಾಷ್ಟ್ರೀಯ ಪಕ್ಷಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಮತ್ತೊಮ್ಮೆ ಅಧಿಕಾರ ನೀಡಿ: ನಾನು ಹದಿನಾಲ್ಕು ತಿಂಗಳು ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮಾಡಲು ಅವಕಾಶ ಸಿಗಲಿಲ್ಲ. ಭ್ರಷ್ಟಾರಹಿತ ಸರ್ಕಾರ ಕೊಡುವ ಹೋರಾಟ ನಡೆಸಿದ್ದೇವೆ. ನಾವು ಅಧಿಕಾರದಲ್ಲಿ ಇದ್ದಾಗ ಅನೇಕ ಅಭಿವೃದ್ಧಿ ಕಾರ್ಯಕ್ರಮ ಕೊಟ್ಟಿದ್ದೇವೆ. ದೇವೇಗೌಡರು ಸಿಎಂ ಆಗಿದ್ಧಾಗ ಫ್ಲೈ ಓವರ್ ಕೊಟ್ಟಿದ್ದಾರೆ. ಕಾವೇರಿ ನದಿ ನೀರು ಪಡೆಯಲು ಕೇಂದ್ರ ಸರ್ಕಾರದ ಮುಂದೆ ಅರ್ಜಿ ಹಾಕಿದ್ದೆವು.
ಆದರೆ, ತಮಿಳುನಾಡಿಗೆ ಮಣಿದು ಕೇಂದ್ರದಲ್ಲಿ ಇದ್ದ ಕಾಂಗ್ರೆಸ್ ಸರ್ಕಾರ ಇದಕ್ಕೆ ಒಪ್ಪಲಿಲ್ಲ. ಆದರೆ, ದೇವೇಗೌಡರು ಪ್ರಧಾನಿಯಾಗಿ ಅಧಿಕಾರಕ್ಕೆ ಬಂದಾಗ ಬೆಂಗಳೂರಿಗೆ ಕುಡಿಯುವ ನೀರು ಕೊಟ್ಟರು.
ರಾಜ್ಯಕ್ಕೆ ಗೌಡರು ಅನೇಕ ಯೋಜನೆ ನೀಡಿದ್ದಾರೆ: 90 ಎಕರೆ ರಕ್ಷಣಾ ಇಲಾಖೆಯ ಜಾಗವನ್ನು ಬೆಂಗಳೂರು ಅಭಿವೃದ್ಧಿಗೆ ಕೊಟ್ಟರು. ಅವರು ಪ್ರಧಾನಿಯಾಗಿದ್ದಾಗ ಅನೇಕ ಯೋಜನೆಗಳನ್ನು ದೇವೇಗೌಡರು ನೀಡಿದ್ದಾರೆ ಬೆಂಗಳೂರಿನಲ್ಲಿ ರೆವಿನ್ಯೂ ನಿವಾಸಿಗಳಿಗೆ ಹಕ್ಕು ಪತ್ರ ಕೊಟ್ಟಿದ್ದು ದೇವೇಗೌಡರು. ಕೆಂಪೇಗೌಡರು ಕಟ್ಟಿದ ನಗರಕ್ಕೆ ಹೆಸರು ತಂದಿದ್ದು ಯಾರು ಅಂತ ಯೋಚಿಸಬೇಕಿದೆ.
ನಾಗರಿಕರು ಸೌಕರ್ಯಕ್ಕಾಗಿ ನಮ್ಮ ಮೆಟ್ರೋ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದು, ನಮ್ಮ ಕಾಲದಲ್ಲಿ. ಕೇಂದ್ರದ ಯೋಜನೆಯಡಿ 25 ಸಾವಿರ ಕೋಟಿ ರೂ. ಬೆಂಗಳೂರು ಹಾಗೂ ಮೈಸೂರು ನಗರದ ಅಭಿವೃದ್ಧಿಗೆ ಕೊಡಲಾಗಿತ್ತು. ಹೊರವರ್ತುಲ ರಿಂಗ್ ರಸ್ತೆಗೆ ಒಪ್ಪಿಗೆ ನೀಡಲಾಗಿತ್ತು ಎಂದು ತಮ್ಮ ಮತ್ತು ದೇವೇಗೌಡರ ಕಾಲದ ಯೋಜನೆಗಳ ಬಗ್ಗೆ ಕುಮಾರಸ್ವಾಮಿ ಅವರು ಎಳೆ ಎಳೆಯಾಗಿ ಬಿಚ್ಚಿಟ್ಟರು.
ರಾಜಕಾಲುವೆ ಮೂಲ ಪುರುಷರು ರಾಷ್ಟ್ರೀಯ ಪಕ್ಷಗಳು: ಬೆಂಗಳೂರಿನ ರಾಜಕಾಲುವೆ ಒತ್ತುವರಿಗೆ ಮೂಲ ಪುರುಷರು ಈ ಎರಡು ರಾಷ್ಟ್ರೀಯ ಪಕ್ಷದವರು. ಮೊನ್ನೆ ಬುಲ್ಡೋಜರ್ ಬಿಟ್ಟು ಬಡವರ ಮನೆ ಹಾಗೂ ಅಲ್ಲೊಂದು ಇಲ್ಲೊಂದು ಮನೆ, ಕಟ್ಟಡ ಒಡೆದರು. ಶ್ರೀಮಂತರಿಗೆ ನೋಟಿಸ್ ಕೊಟ್ಟು ಸುಮ್ಮನಾದರು.
ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಯೋಜನೆ ಮಾಡದೇ ರಸ್ತೆ ಮಾಡದೇ ಹಣ ದೊಚುತ್ತಿದ್ದಾರೆ. ಒಂದು ಕಡೆ ನಿರುದ್ಯೋಗ, ಜಾತಿ ವೈಮನಸ್ಯನ್ನು ತರುತ್ತಿದ್ದಾರೆ. ಇದರಿಂದ ನೀವು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ನೀವು ಕೊಟ್ಟ ಹಣದಿಂದ ನಿಮಗೆ ಆ ಹಣ ಕೊಟ್ಟು ವೋಟ್ ಪಡೆದು ಅಧಿಕಾರಕ್ಕೆ ಬರುತ್ತಾರೆ.
ದಾಸರಹಳ್ಳಿ ಶಾಸಕ ಮಂಜುನಾಥ್ ಅವರು ಮಳೆ ಸಂದರ್ಭದಲ್ಲಿ ವಾರ್ ರೂಂ ನಲ್ಲಿ ಇದ್ದು ಜನರ ಸಮಸ್ಯೆ ಆಲಿಸಿದರು. ಬೇರೆ ಯಾವ ಪಕ್ಷದ ಶಾಸಕರು ಈ ಕೆಲಸ ಮಾಡಿದ್ರೂ ನೀವೇ ಯೋಚನೆ ಮಾಡಿ. ಬೇರೆ ಜಿಲ್ಲೆಗಳಿಂದ ಬಂದಿರುವ ಕೂಲಿ ಕಾರ್ಮಿಕರಿಗೆ ಮನೆ ಇಲ್ಲ ಎಂದು ಕಿಡಿಕಾರಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಒಂದು ಬಡವರ ವರ್ಗ ಮತ್ತು ಶ್ರೀಮಂತರ ವರ್ಗ ಇದೆ ಎಂದು ಭಾರತ್ ಜೋಡೋ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. 45 ವರ್ಷ ಆಳ್ವಿಕೆ ಮಾಡಿದವರು ಎಲ್ಲರನ್ನು ಒಂದೇ ರೀತಿ ನೋಡಿದ್ದೀರಾ?. ಈಗ ಎರಡು ವರ್ಗಗಳು ನೆನಪಿಗೆ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಎರಡು ರಾಷ್ಟ್ರೀಯ ಪಕ್ಷಗಳ ಭ್ರಷ್ಟಾಚಾರದ ಬಗ್ಗೆ ಈಗ ಚರ್ಚೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಬಿಜೆಪಿಯ ಶೇ 40ರಷ್ಟು ಕಮಿಷನ್ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಇಂಧನ ಇಲಾಖೆ ಭ್ರಷ್ಟಾಚಾರ ಬಗ್ಗೆ ಈಗ ತನಿಖೆ ಮಾಡುತ್ತೇವೆ ಎಂದು ಬಿಜೆಪಿ ಸರ್ಕಾರ ಹೇಳುತ್ತಿದೆ.
ಈ ಹಿಂದೆಯೇ ನಾನು ಸದನದಲ್ಲಿ ಮಾತನಾಡಿದ್ದೆ. ಬೆಂಗಳೂರನ್ನು ಲೂಟಿ ಮಾಡುವ ಪಕ್ಷಕ್ಕೆ ಇನ್ನು ಎಷ್ಟು ದಿನ ಆಶೀರ್ವಾದ ಕೊಡುತ್ತೀರಾ? ಎಂದು ಪ್ರಶ್ನೆ ಮಾಡಿದ ಹೆಚ್ ಡಿಕೆ, ತೆಲಂಗಾಣದಲ್ಲಿ ರೈತರ ಹೊಲಕ್ಕೆ 24 ಗಂಟೆ ಉಚಿತ ವಿದ್ಯುತ್ ಕೊಡುತ್ತಾರೆ. ಆದರೆ ಇಲ್ಲಿ 7 ಗಂಟೆ ಕೊಡುತ್ತೇವೆ ಎಂದು ಹೇಳುತ್ತೀರಾ, 3 ಗಂಟೆಗೆ ಮಾತ್ರ ಸೀಮಿತವಾಗಿದೆ.
ರಾಜ ಕಾಲುವೆ ಮೇಲೆ ಮನೆ ಕಟ್ಟಿದ ಬಡವರ ಮನೆ ಮೇಲೆ ಬಲ್ಡೋಜರ್ ನುಗ್ಗಿಸುತ್ತೀರಾ. ಶ್ರೀಮಂತರಿಗೆ ನೋಟಿಸ್ ಕೊಟ್ಟು ಕೋರ್ಟ್ ಹೋಗಿ ಸ್ಟೇ ತೆಗೆದುಕೊಳ್ಳಿ ಎಂದು ಬಿಡುತ್ತೀರಾ. ಇದು ಬಿಜೆಪಿ ಸರ್ಕಾರ ನೀಡುತ್ತಿರುವ ಆಳ್ವಿಕೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕೇಂದ್ರ ಸಚಿವ ಜೋಶಿ ಮಾನಹಾನಿ ಕೇಸ್.. ಸಾಮಾಜಿಕ ಹೋರಾಟಗಾರ ಹಿರೇಮಠಗೆ ಹಿನ್ನಡೆ