ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಸಿಹಿ ಸುದ್ದಿ ನೀಡಿದ್ದು, ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸಿಬ್ಬಂದಿಗೆ 1 ಕೋಟಿ ರೂ. ಮೊತ್ತದ ಅಪಘಾತ ವಿಮಾ ಯೋಜನೆಯ ಸೌಲಭ್ಯ ಜಾರಿಗೊಳಿಸಿದೆ.
ನಿಗಮದ ಸಿಬ್ಬಂದಿ ಕರ್ತವ್ಯದ ಮೇಲೆ ಅಥವಾ ಕರ್ತವ್ಯದಲ್ಲಿ ಇಲ್ಲದಿರುವಾಗಲೂ ಅಪಘಾತವಾಗಿ ಮೃತಪಟ್ಟರೆ ಅಥವಾ ಶಾಶ್ವತ/ತಾತ್ಕಾಲಿಕ ಅಂಗವೈಕಲ್ಯಕ್ಕೆ ತುತ್ತಾದರೆ ಅವರಿಗೆ ರೂ. 50 ಲಕ್ಷಗಳ ಪರಿಹಾರ ನೀಡುವ ಪ್ರೀಮಿಯಂ ರಹಿತ ಅಪಘಾತ ಪರಿಹಾರ ವಿಮಾ ಯೋಜನೆಯನ್ನು ನಿಗಮವು ಭಾರತೀಯ ಸ್ಟೇಟ್ ಬ್ಯಾಂಕ್ ಜೊತೆಯಲ್ಲಿ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಈ ಮೊದಲು ಜಾರಿಗೆ ತಂದಿತ್ತು.
ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಜೊತೆ ಹೊಸ ಒಡಂಬಡಿಕೆ: ಮುಂದುವರಿದ ಭಾಗವಾಗಿ ಸೋಮವಾರ ನಿಗಮ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಅದರಂತೆ ಸಿಬ್ಬಂದಿಗೆ ಮತ್ತೆ 50 ಲಕ್ಷದವರೆಗೆ ಅಪಘಾತ ಪರಿಹಾರ ವಿಮಾ ಯೋಜನೆಯನ್ನು ಹೆಚ್ಚಿಸಿ ಈಗಾಗಲೇ ಜಾರಿಗೆ ತಂದಿರುವ ವಿಮಾ ಯೋಜನೆಯೊಂದಿಗೆ ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ ಸಿಬ್ಬಂದಿ ವಾರ್ಷಿಕ 885 ರುಪಾಯಿ ಪ್ರೀಮಿಯಂ ಮೊತ್ತ ಪಾವತಿಸಬೇಕಾಗುತ್ತದೆ ಎಂದು ನಿಗಮ ತಿಳಿಸಿದೆ. ಎರಡೂ ಸೇರಿ ಒಟ್ಟು ರೂ.1 ಕೋಟಿ ಅಪಘಾತ ವಿಮೆಯನ್ನು ಸಿಬ್ಬಂದಿಗಾಗಿ ಜಾರಿಗೊಳಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ಕಾರ್ಮಿಕರು ಮತ್ತು ಅವರ ಕುಟುಂಬದ ಹಿತದೃಷ್ಟಿಯಿಂದ ಜಾರಿ: ಈ ಕುರಿತು ಮಾತನಾಡಿದ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ, ಈ ವಿಮಾ ಯೋಜನೆಯು ಕಾರ್ಮಿಕರು ಮತ್ತು ಅವರ ಕುಟುಂಬದವರ ಹಿತದೃಷ್ಟಿಯಿಂದ ಜಾರಿಗೊಳಿಸುತ್ತಿರುವ ಅತ್ಯುತ್ತಮವಾದ ಯೋಜನೆಯಾಗಿದೆ. ಇದು ಕರ್ತವ್ಯದ ಮೇಲೆ ಅಥವಾ ಕರ್ತವ್ಯದಲ್ಲಿ ಇಲ್ಲದಿರುವಾಗಲೂ ಕವರ್ ಮಾಡುವ ಅಪಘಾತ ವಿಮಾ ಯೋಜನೆಯಾಗಿರುವುದು ಸಿಬ್ಬಂದಿಗೆ ಮತ್ತಷ್ಟು ಅನುಕೂಲವಾಗಲಿದೆಯೆಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ಕೆಎಸ್ಆರ್ಟಿಸಿ ಬಸ್ನಲ್ಲಿ ಸಾಕು ಪ್ರಾಣಿಗಳಿಗೆ ಅರ್ಧ ಟಿಕೆಟ್ ದರ)