ಬೆಂಗಳೂರು : ದೇಶದ ಸರ್ಕಾರಿ ಸ್ವಾಮ್ಯದ ರಸ್ತೆ ಸಾರಿಗೆ ಸಂಸ್ಥೆಗಳ ನಿರ್ವಹಣೆಯಲ್ಲಿ ಪ್ರಶಸ್ತಿಗಳ ಬೇಟೆಯನ್ನು ಮುಂದುವರೆಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಪ್ರತಿಷ್ಠಿತ ಸಪ್ಲೈ ಚೈನ್ ಲೀಡರ್ ಶಿಪ್ ಪ್ರಶಸ್ತಿ ಲಭಿಸಿದೆ. ಇದರ ಜೊತೆಗೆ ಎಕ್ಸ್ ಪ್ರೆಸ್ ಲಾಜಿಸ್ಟಿಕ್ ಪ್ರಶಸ್ತಿಯೂ ಲಭಿಸಿದೆ.
ಕಾಮಿಕಾಜೆ ಬಿ2ಬಿ ಮೀಡಿಯಾ ಪ್ರತಿಷ್ಠಾಪಿಸಿರುವ 15ನೇ ಆವೃತ್ತಿಯ ಎಕ್ಸ್ ಪ್ರೆಸ್ ಲಾಜಿಸ್ಟಿಕ್ ಮತ್ತು ಸಪ್ಲೈ ಚೈನ್ ಲೀಡರ್ ಶಿಪ್ ಪ್ರಶಸ್ತಿ ಕೆಎಸ್ಆರ್ಟಿಸಿ ಮುಡಿಗೇರಿದ್ದು, ಸೆಪ್ಟೆಂಬರ್ 14ರಂದು ಮುಂಬೈನಲ್ಲಿರುವ ತಾಜ್ ಲ್ಯಾಂಡ್ಸ್ ಎಂಡ್ನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಕೆಎಸ್ಆರ್ಟಿಸಿಗೆ ಪ್ರದಾನ ಮಾಡಲಾಗುತ್ತದೆ ಎಂದು ಕಾಮಿಕಾಜೆ ಬಿ2ಬಿ ಮೀಡಿಯಾ ತಿಳಿಸಿದೆ.
ಇತ್ತೀಚೆಗಷ್ಟೇ ವಿ ಕನೆಕ್ಟ್ ಇಂಡಿಯಾ ಮೀಡಿಯಾ ಅಂಡ್ ರಿಸರ್ಚ್ ಸಂಸ್ಥೆಯಿಂದ ಕೊಡಲಾಗುವ ಏಷ್ಯಾದ ಬ್ಯುಸಿನೆಸ್ ಕ್ವಾಲಿಟಿ ಪ್ರಶಸ್ತಿಗಳಲ್ಲಿ ನಾಲ್ಕು ವರ್ಗದಲ್ಲಿ ಕೆಎಸ್ಆರ್ಟಿಸಿಗೆ ಪ್ರಶಸ್ತಿಗಳು ಲಭಿಸಿದ್ದವು. ಬ್ಯ್ರಾಂಡಿಂಗ್ ಮತ್ತು ಮಾರ್ಕೆಟಿಂಗ್, ಸಾರಿಗೆ ಸುರಕ್ಷತೆ, ಕಾರ್ಮಿಕ ಸ್ನೇಹಿ ಉಪಕ್ರಮಗಳು ಹಾಗೂ ಮಾಹಿತಿ ತಂತ್ರಜ್ಞಾನ ವರ್ಗಗಳಲ್ಲಿ ನಿಗಮವು ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 29ರಂದು ದೆಹಲಿಯ ರಾಡಿಸನ್ ಬ್ಲೂ ಪ್ಲಾಜಾದಲ್ಲಿ ನಡೆಯಲಿದೆ. ಇದರ ಬೆನ್ನಲ್ಲೇ ಮತ್ತೆರಡು ಪ್ರಶಸ್ತಿಗಳು ಕೆಎಸ್ಆರ್ಟಿಸಿಯನ್ನು ಹುಡುಕಿಕೊಂಡು ಬಂದಿವೆ.
ಗ್ರೀನ್ ಟೆಕ್ ಪ್ರಶಸ್ತಿ: ಕಾರ್ಮಿಕರ ಕಲ್ಯಾಣಕ್ಕಾಗಿ ಕೈಗೊಂಡಿರುವ ಪರಿವರ್ತಿತ ಕಾರ್ಯಸಾಧನೆಗೆ ಗ್ರೀನ್ ಟೆಕ್ ಫೌಂಡೇಷನ್ ಅವರು ಕೊಡಮಾಡುವ ಗ್ರೀನ್ ಟೆಕ್ ಹೆಚ್. ಆರ್ ಪ್ರಶಸ್ತಿಗೆ ಕೆಎಸ್ಆರ್ಟಿಸಿ ಭಾಜನವಾಗಿತ್ತು. ಆಗಸ್ಟ್ 21ರಂದು ನವದೆಹಲಿಯ ರಾಡಿಸನ್ ಬ್ಲೂ ಪ್ಲಾಜಾದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಅಸ್ಸೋಂ ಮಾಜಿ ರಾಜ್ಯಪಾಲ ಪ್ರೊ. ಜಗದೀಶ್ ಮುಖಿ ಹಾಗೂ ಗ್ರೀನ್ ಟೆಕ್ ಫೌಂಡೇಷನ್ ಅಧ್ಯಕ್ಷ ಮತ್ತು ಸಿಇಒ ಕಮಲೇಶ್ವರ್ ಶರಣ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದರು.
ಇತ್ತೀಚಿನ ದಿನಗಳಲ್ಲಿ ದೇಶದ ಸಾರಿಗೆ ಸಂಸ್ಥೆಗಳಲ್ಲಿ ಅತಿ ಹೆಚ್ಚು ಪ್ರಶಸ್ತಿಗಳು ಕೆಎಸ್ಆರ್ಟಿಸಿ ಲಭಿಸುತ್ತಿವೆ. ಅತ್ಯುತ್ತಮ ಸೇವೆಗೆ ಕೆಎಸ್ಆರ್ಟಿಸಿ ದೇಶದಲ್ಲೇ ಹೆಸರು ಮಾಡಿದೆ. ಹೀಗಾಗಿ ಉತ್ತರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ತಂಡವು ಕೆಎಸ್ಆರ್ಟಿಸಿಯಲ್ಲಿ ಅನುಷ್ಠಾನಗೊಳಿಸಿರುವ ಉಪಕ್ರಮಗಳ ಬಗ್ಗೆ ಅಧ್ಯಯನ ನಡೆಸಲು ಎರಡು ದಿನಗಳ ಭೇಟಿ ನೀಡಿತ್ತು.
ಅಧಿಕಾರಿಗಳ ತಂಡವು ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-4, ಪ್ರಾದೇಶಿಕ ಕಾರ್ಯಾಗಾರ, ಕೆಂಗೇರಿ, ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದ ನಿಯಂತ್ರಣ ಕೊಠಡಿಗಳಿಗೆ ಭೇಟಿ ನೀಡಿ ವಾಹನಗಳ ತಾಂತ್ರಿಕ ನಿರ್ವಹಣೆ ಮತ್ತು ಕಾರ್ಯಾಚರಣೆ, ಡ್ಯೂಟಿ ರೋಟಾ ವ್ಯವಸ್ಥೆ, ಮುಂಗಡ ಆಸನ ಕಾಯ್ದಿರಿಸುವಿಕೆ, ಕಾರ್ಮಿಕರ ಕಲ್ಯಾಣಕ್ಕಾಗಿ ಕೈಗೊಂಡಿರುವ ವಿನೂತನ ಕ್ರಮಗಳು, ಮಾಹಿತಿ ತಂತ್ರಜ್ಞಾನ ಉಪಕ್ರಮಗಳು, ಬಸ್ ನಿಲ್ದಾಣ/ ಘಟಕಗಳ ಕಾಮಗಾರಿ ಪದ್ಧತಿ, ಬಸ್ಸುಗಳ ಬ್ರ್ಯಾಂಡಿಂಗ್, ಬಸ್ಸುಗಳ ಪುನಶ್ವೇತನ ಕಾರ್ಯ, ಬಸ್ ನಿಲ್ದಾಣದ ಸ್ವಚ್ಛತೆ ಬಗ್ಗೆ ಮಾಹಿತಿ ಪಡೆದಿದ್ದವು.
ಇದನ್ನೂ ಓದಿ : ಕೆಎಸ್ಆರ್ಟಿಸಿ ಮುಡಿಗೆ ಮತ್ತೆ ನಾಲ್ಕು ಪ್ರಶಸ್ತಿ : ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಪ್ರಶಸ್ತಿ ಸಮರ್ಪಿಸಿದ ಸಾರಿಗೆ ನಿಗಮ