ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಹಕ್ಕಬುಕ್ಕರಂತೆ ಗುರುತಿಸಿಕೊಂಡವರು ಯಡಿಯೂರಪ್ಪ ಮತ್ತು ಈಶ್ವರಪ್ಪ. ಇಬ್ಬರೂ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟಿಗೆ ಪಕ್ಷ ಕಟ್ಟುವಲ್ಲಿ ಶ್ರಮಿಸಿ ರಾಜ್ಯದಲ್ಲಿ ಪಕ್ಷಕ್ಕೆ ನೆಲೆ ಕಲ್ಪಿಸಿಕೊಡುವಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡವರು. ಯಡಿಯೂರಪ್ಪ ಜೊತೆ ಜೊತೆಯಲ್ಲಿಯೇ ಹೆಜ್ಜೆ ಹಾಕಿ ಬೆಳೆದು ಬಂದ ಈಶ್ವರಪ್ಪ ಇದೀಗ ಯಡಿಯೂರಪ್ಪ ಜೊತೆಯಲ್ಲಿಯೇ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ. ಹಾಗಾಗಿ ಇಬ್ಬರು ನಾಯಕರ ನಡುವೆಯೂ ಸಾಕಷ್ಟು ಸಾಮ್ಯತೆ ಇದೆ.
ರಾಜ್ಯ ರಾಜಕೀಯದಲ್ಲಿ ಬಿಜೆಪಿ ಹೆಸರು ಬಂದಲ್ಲೆಲ್ಲಾ ಯಡಿಯೂರಪ್ಪ ಈಶ್ವರಪ್ಪ ಎನ್ನುವ ಹೆಸರುಗಳು ಸಾಮಾನ್ಯ. ಅನಂತ್ ಕುಮಾರ್, ಜಗದೀಶ್ ಶೆಟ್ಟರ್, ಶಂಕರಮೂರ್ತಿ ಹೆಸರು ಕೇಳಿದರೂ ಯಡಿಯೂರಪ್ಪ, ಈಶ್ವರಪ್ಪ ಜೋಡಿ ಹೆಸರುವಾಸಿ. ಅದರಲ್ಲಿಯೂ ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ಈಶ್ವರಪ್ಪ ಪಕ್ಷದ ವಿರುದ್ಧ ಎಂದೂ ದನಿ ಎತ್ತದ ರಾಜಕಾರಣಿ. ಯಡಿಯೂರಪ್ಪ 1983ರ ಚುನಾವಣೆ ಮೂಲಕ ಶಾಸಕಸಭೆ ಪ್ರವೇಶಿಸಿದರೆ ಈಶ್ವರಪ್ಪ 1989ರ ಚುನಾವಣೆ ಮೂಲಕ ಶಾಸನಸಭೆಗೆ ಪ್ರವೇಶಿಸಿದರು. ಯಡಿಯೂರಪ್ಪ ನಂತರ 1993ರಲ್ಲಿ ಈಶ್ವರಪ್ಪ ಪಕ್ಷದ ರಾಜ್ಯಾಧ್ಯಕ್ಷರಾದರು. ಯಡಿಯೂರಪ್ಪ 1988, 1998, 2016ಸೇರಿ ಮೂರು ಬಾರಿ ರಾಜ್ಯಾಧ್ಯಕ್ಷರಾದರೆ, ಈಶ್ವರಪ್ಪ 1993 ಮತ್ತು 2010ರಲ್ಲಿ ಒಟ್ಟು ಎರಡು ಬಾರಿ ರಾಜ್ಯಾಧ್ಯಕ್ಷರಾದರು. ಇಬ್ಬರು ನಾಯಕರೂ 1989, 1994ರಲ್ಲಿ ಗೆದ್ದರೆ ಇಬ್ಬರು ನಾಯಕರೂ 1999ರಲ್ಲಿ ಸೋತರು. ಸೋತಿದ್ದ ಇಬ್ಬರು ನಾಯಕನ್ನೂ ಪಕ್ಷದ ವರಿಷ್ಠರು ಕಡೆಗಣಿಸಲಿಲ್ಲ, ಯಡಿಯೂರಪ್ಪರನ್ನು ಮೇಲ್ಮನೆಗೆ ಆಯ್ಕೆ ಮಾಡಿದರೆ ಈಶ್ವರಪ್ಪಗೆ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಯಿತು.
ಕಾಕತಾಳೀಯ ಎಂದರೆ 2013ರಲ್ಲಿ ಈಶ್ವರಪ್ಪ ಸೋತಾಗ ಹಿಂದೆ ಯಡಿಯೂರಪ್ಪಗೆ ನೀಡಿದ ಅವಕಾಶದಂತೆ ಪರಿಷತ್ ಸದಸ್ಯ ಸ್ಥಾನ ನೀಡಲಾಯಿತು. ಪರಿಷತ್ ಪ್ರತಿಪಕ್ಷ ನಾಯಕರಾಗಿಯೂ ಈಶ್ವರಪ್ಪ ಕೆಲಸ ಮಾಡಿದರು. ಆ ಮೂಲಕ ರಾಜ್ಯಾಧ್ಯಕ್ಷ ಸ್ಥಾನ, ಶಾಸಕ ಮತ್ತು ಪರಿಷತ್ ಸ್ಥಾನವನ್ನು ಉಭಯ ನಾಯಕರೂ ಅಲಂಕರಿಸಿದ್ದಾರೆ. ಯಡಿಯೂರಪ್ಪ ವಿಧಾನಸಭೆ ಪ್ರತಿಪಕ್ಷ ನಾಯಕರಾದರೆ ಈಶ್ವರಪ್ಪ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದಾರೆ. ಆದರೆ ಯಡಿಯೂರಪ್ಪ ಒಮ್ಮೆ ಸಂಸತ್ ಸದಸ್ಯರಾದರೆ ಈಶ್ವರಪ್ಪ ಸಂಸತ್ ಕಡೆ ಮುಖ ಮಾಡಿಲ್ಲ. ಇಬ್ಬರು ನಾಯಕರೂ ಒಟ್ಟಿಗೆ ಅಧಿಕಾರದ ರುಚಿ ನೋಡಿದರು.
2006ರಲ್ಲಿ ರಚನೆಯಾದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಮೊದಲ ಬಾರಿಗೆ ಯಡಿಯೂರಪ್ಪ ಮತ್ತು ಈಶ್ವರಪ್ಪ ಸರ್ಕಾರದ ಭಾಗವಾದರು. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾದರೆ ಈಶ್ವರಪ್ಪ ಜಲಸಂಪನ್ಮೂಲ ಸಚಿವರಾದರು. ನಂತರ ಯಡಿಯೂರಪ್ಪ 2008ರಲ್ಲಿ ಮುಖ್ಯಮಂತ್ರಿಯಾದರೆ ಈಶ್ವರಪ್ಪ ಎರಡನೇ ಬಾರಿ ಮಂತ್ರಿಯಾದರು. ಬದಲಾದ ರಾಜಕೀಯ ವಿದ್ಯಮಾನದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾಜಿಯಾದರೆ ಈಶ್ವರಪ್ಪ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾದರು. 2018ರಲ್ಲಿ ಮತ್ತೆ ಇಬ್ಬರು ನಾಯಕರು ವಿಧಾನಸಭೆಗೆ ಆಯ್ಕೆಯಾಗಿ ಯಡಿಯೂರಪ್ಪ ಪ್ರತಿಪಕ್ಷ ನಾಯಕರಾದರು. ಆದರೆ ಮೈತ್ರಿ ಸರ್ಕಾರ ಪತನಗೊಂಡ ನಂತರ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಈಶ್ವರಪ್ಪ ಮತ್ತೆ ಮಂತ್ರಿಯಾದರು.
ಯಡಿಯೂರಪ್ಪ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಸ್ಥಾನ, ಕೋರ್ ಕಮಿಟಿ, ರಾಜ್ಯ ಕಾರ್ಯಕಾರಿಣಿ, ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾಗಿದ್ದಂತೆ ಈಶ್ವರಪ್ಪ ಕೂಡ ರಾಜ್ಯಾಧ್ಯಕ್ಷ, ಕೋರ್ ಕಮಿಟಿ, ರಾಜ್ಯ ಕಾರ್ಯಕಾರಿಣಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ. ಆದರೆ ಇತ್ತೀಚೆಗೆ ಯಡಿಯೂರಪ್ಪಗೆ ಹೈಕಮಾಂಡ್ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಯಲ್ಲಿ ಸ್ಥಾನ ನೀಡಿದೆ. ಈಶ್ವರಪ್ಪ ಹೆಚ್ಚಿನ ಜವಾಬ್ದಾರಿ ನಿರೀಕ್ಷೆಯಲ್ಲಿದ್ದಾರೆ.
ಸರ್ಕಾರದ ಭಾಗವಾಗಿ ನೋಡುವುದಾದರೆ ಯಡಿಯೂರಪ್ಪ ಮೂರು ಬಾರಿ ವಿಧಾನಸಭೆ ಪ್ರತಿಪಕ್ಷ ನಾಯಕ, ಒಂದು ಬಾರಿ ಉಪ ಮುಖ್ಯಮಂತ್ರಿ, ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದು, ಈಶ್ವರಪ್ಪ ಒಮ್ಮೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ, ಒಂದು ಬಾರಿ ಉಪ ಮುಖ್ಯಮಂತ್ರಿ, ನಾಲ್ಕು ಬಾರಿ ಮಂತ್ರಿಯಾಗಿದ್ದಾರೆ. ಬೊಮ್ಮಾಯಿ ಮಂತ್ರಿ ಮಂಡಲದಲ್ಲಿ ಐದನೇ ಬಾರಿ ಮಂತ್ರಿಯಾಗಬೇಕು ಎನ್ನುವ ಅವಕಾಶ ಸಿಗಲೇ ಇಲ್ಲ.
ಕಳೆದ ಕೆಲ ತಿಂಗಳ ಹಿಂದಷ್ಟೇ ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದರು. ಪುತ್ರನಿಗೆ ಕ್ಷೇತ್ರ ತ್ಯಾಗ ಮಾಡುವ ಘೋಷಣೆ ಮಾಡಿದ್ದರು. ಇದೀಗ ಈಶ್ವರಪ್ಪ ಕೂಡ ಯಡಿಯೂರಪ್ಪ ಹಾದಿಯನ್ನೇ ಹಿಡಿದಿದ್ದಾರೆ. 75 ವರ್ಷದ ವಯಸ್ಸು ದಾಟಿದವರಿಗೆ ಅವಕಾಶ ನೀಡದಿರುವ ಅಲಿಖಿತ ನಿಯಮದಂತೆ ಟಿಕೆಟ್ ಕೈ ತಪ್ಪುವುದು ಖಚಿತವಾದಂತೆ ಈಶ್ವರಪ್ಪ ಕೂಡ ಚುನಾವಣಾ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದು, ಪುತ್ರನ ರಾಜಕೀಯ ಹಾದಿ ಸುಗಮಕ್ಕೆ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.
2019ರಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗ ಅವಧಿ ಮುಗಿಯುವ ಮೊದಲೇ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಈಶ್ವರಪ್ಪ ಕೂಡ ಅವಧಿಗೂ ಮುನ್ನವೇ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಆ ಮೂಲಕ ಒಟ್ಟಿಗೆ ಸರ್ಕಾರದ ಭಾಗವಾಗಿ ಆಡಳಿತ ಪಕ್ಷದಲ್ಲಿ ಅಧಿಕಾರದ ಗದ್ದುಗೆ ಏರಿದ್ದ ಉಭಯ ನಾಯಕರು ಒಟ್ಟಿಗೆ ಅವಧಿಗೂ ಮೊದಲೇ ಅಧಿಕಾರದ ಗದ್ದುಗೆಯಿಂದ ಕೆಳಗಿಳಿದರು. ಕಾಕತಾಳೀಯ ಎನ್ನುವಂತೆ ಒಟ್ಟಿಗೆ ಚುನಾವಣಾ ರಾಜಕೀಯಕ್ಕೆ ವಿದಾಯ ಘೋಷಿಸಿದ್ದಾರೆ.
ಪಕ್ಷ ನಿಷ್ಠೆ: ಆರೋಪ ಬಂದಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಮತ್ತೆ ಅಧಿಕಾರದ ಬೇಡಿಕೆ ಇಟ್ಟಾಗ ಅದಕ್ಕೆ ಸೊಪ್ಪು ಹಾಕದ ಹೈಕಮಾಂಡ್ ವಿರುದ್ಧ ಮುನಿಸಿಕೊಂಡ ಯಡಿಯೂರಪ್ಪ ಪಕ್ಷವನ್ನು ತೊರೆದರು. ಪ್ರಾದೇಶಿಕ ಪಕ್ಷ ಕಟ್ಟಿ ಆಡಳಿತಾರೂಢ ಪಕ್ಷವಾಗಿದ್ದ ಬಿಜೆಪಿಗೆ ಪ್ರತಿಪಕ್ಷದ ಸ್ಥಾನಮಾನ ಸಿಗದಂತೆ ಮಾಡಿದ್ದರು. ಆದರೆ ಈಶ್ವರಪ್ಪ ಪಕ್ಷನಿಷ್ಠೆ ಅಬಾಧಿತ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಾಧ್ಯಕ್ಷರಾಗುವಂತೆ ಸೂಚಿಸಿದಾಗ ಅದನ್ನು ಒಪ್ಪಿ ರಾಜ್ಯಾಧ್ಯಕ್ಷರಾಗಿದ್ದ ಈಶ್ವರಪ್ಪ, ನಂತರ 2022ರಲ್ಲಿ ಕಮಿಷನ್ ಆರೋಪ ಬಂದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆರೋಪ ಮುಕ್ತರಾದಾಗ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟರೂ ಅವರ ಬೇಡಿಕೆ ಈಡೇರಲೇ ಇಲ್ಲ. ಆದರೂ ಈಶ್ವರಪ್ಪ ಪಕ್ಷದ ವಿರುದ್ಧ ದನಿ ಎತ್ತಲಿಲ್ಲ.
ಇದನ್ನೂ ಓದಿ : ಈಶ್ವರಪ್ಪ ನಿರ್ಧಾರ ಸ್ವಾಗತಾರ್ಹ: ಶಾಸಕ ಬೆಲ್ಲದ್, ರೇಣುಕಾಚಾರ್ಯ, ರಾಘವೇಂದ್ರ ಪ್ರತಿಕ್ರಿಯೆ