ಬೆಂಗಳೂರು: ಕಳೆದ ವಾರ ಕರ್ತವ್ಯಲೋಪದಡಿಯಲ್ಲಿ ಅಮಾನತುಗೊಂಡಿದ್ದ ಕೆ.ಆರ್.ಪುರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ನಂದೀಶ್ ತೀವ್ರ ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ಮೂಲದ ನಂದೀಶ್, ಇತ್ತೀಚೆಗೆ ಪಬ್ವೊಂದಕ್ಕೆ ಅವಧಿ ಮೀರಿ ನಡೆಸಲು ಸಹಕಾರ ನೀಡುತ್ತಿದ್ದರೆಂಬ ಆರೋಪದ ಮೇಲೆ ಅಮಾನತುಗೊಂಡಿದ್ದರು.
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 2019ರಿಂದ 2020ರವರೆಗೆ ಕಾರ್ಯ ನಿರ್ವಹಿಸಿದ್ದರು. ಕಳೆದ ಎಂಟು ತಿಂಗಳ ಹಿಂದೆ ಕೆ.ಆರ್.ಪುರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಆಗಿ ವರ್ಗಾವಣೆ ಆಗಿ ಬಂದಿದ್ದರು. ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಇವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ನಂತರ ಕೆಆರ್ ಪುರಂನ ಲಕ್ಷ್ಮೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ಹೃದಯಾಘಾತದಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ವಾರದ ಹಿಂದೆ ಅಮಾನತುಗೊಂಡಿದ್ದ ಇನ್ಸ್ಪೆಸ್ಪೆಕ್ಟರ್: ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ರಾತ್ರಿ 1 ಗಂಟೆಯವರೆಗೆ ವಹಿವಾಟು ನಡೆಸಲು ಅವಕಾಶವಿದೆ. ಆದರೆ, ಈ ಬಾರ್ ನಿತ್ಯವೂ ತಡರಾತ್ರಿಯವರೆಗೂ ವಹಿವಾಟು ನಡೆಸುತ್ತಿತ್ತು. ಇದು ಗೊತ್ತಿದ್ದರೂ ನಂದೀಶ್ ಕ್ರಮ ಕೈಗೊಂಡಿರಲಿಲ್ಲ ಎಂದು ಸಿಸಿಬಿ ಪೊಲೀಸರು, ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದರು. ಈ ಕಾರಣದಿಂದಾಗಿ ವಾರದ ಹಿಂದೆ ಇವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು.
(ಓದಿ: ಕಪಾಳಮೋಕ್ಷ ಮಾಡಿದ ತಾಯಿ ವಿರುದ್ಧ ದೂರು ನೀಡಲು ಠಾಣೆಗೆ ಬಂದ ಮಗು..! )