ಬೆಂಗಳೂರು: ಆಗಸ್ಟ್ 24ರಂದು ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನಡೆದ ಪೂರ್ವಭಾವಿ ಪರೀಕ್ಷೆಯಲ್ಲಿ ಎಷ್ಟು ಅಂಧ ಅಭ್ಯರ್ಥಿಗಳು ಭಾಗಿಯಾಗಿದ್ದರು. ಎಷ್ಟು ಮಂದಿಗೆ ಲಿಪಿಕಾರರನ್ನು (ಸ್ಕ್ರೈಬ್) ಒದಗಿಸಲಾಗಿತ್ತು ಹಾಗೂ ಆ ಲಿಪಿಕಾರರ ವಿದ್ಯಾರ್ಹತೆ ಏನು ಎಂಬ ವಿವರಗಳನ್ನು ಸಲ್ಲಿಸುವಂತೆ ಕೆಪಿಎಸ್‌ಸಿಗೆ ಹೈಕೋರ್ಟ್ ಸೂಚಿಸಿದೆ.
ಅಂಧ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ಕಡೆಯಿಂದ ಸ್ಕ್ರೈಬ್‌ಗಳನ್ನು ಒದಗಿಸದ ಕ್ರಮ ಪ್ರಶ್ನಿಸಿ ದಿ ನ್ಯಾಷನಲ್ ಫೆಡರೇಷನ್ ಆಫ್ ಬ್ಲೈಂಡ್ ಹೆಸರಿನ ಸರ್ಕಾರೇತರ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಕೆಪಿಎಸ್‌ಸಿ ಪರ ವಕೀಲರು ವಾದಿಸಿ, ಪೂರ್ವಭಾವಿ ಪರೀಕ್ಷೆ ಬರೆದ ಅಂಧ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಪ್ರತಿ ಗಂಟೆಗೆ 20 ನಿಮಿಷ ಹೆಚ್ಚುವರಿ ಕಾಲಾವಕಾಶ ನೀಡಲಾಗಿತ್ತು. ಜತೆಗೆ ಲಿಪಿಕಾರರು ಕೋರಿದ್ದ ಅಭ್ಯರ್ಥಿಗಳಿಗೆ ಆಯೋಗದ ವತಿಯಿಂದಲೇ ಸ್ಕ್ರೈಬ್‌ಗಳ ವ್ಯವಸ್ಥೆ ಮಾಡಲಾಗಿತ್ತು ಎಂದು ವಿವರಿಸಿದರು.
ಅರ್ಜಿದಾರರ ಪರ ಹಿರಿಯ ವಕೀಲೆ ಜಯ್ನಾ ಕೊಥಾರಿ ವಾದಿಸಿ, ಅಂದ ಅಭ್ಯರ್ಥಿಗಳಿಗೆ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ. ಆದರೆ ಕೆಪಿಎಸ್‌ಸಿ ಒದಗಿಸಿದ್ದ ಸ್ಕ್ರೈಬ್‌ಗಳ ವಿದ್ಯಾರ್ಹತೆ ಕೇಂದ್ರ ಸರ್ಕಾರದ ನಿಯಮಗಳಿಗೆ ಅನುಗುಣವಾಗಿರಲಿಲ್ಲ. ಅಂಧ ಅಭ್ಯರ್ಥಿಗಳು ಜನವರಿಯಲ್ಲಿ ಸ್ಕ್ರೈಬ್‌ಗಳನ್ನು ಹೊಂದಿಸಿಕೊಂಡಿದ್ದರು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಒಂದಿಷ್ಟು ಜನ ಪರೀಕ್ಷೆಗೆ ಲಭ್ಯವಾಗಿಲ್ಲ. ಇದರಿಂದ ಕೆಪಿಎಸ್‌ಸಿಗೆ ಲಿಪಿಕಾರರನ್ನು ಒದಗಿಸಲು ಮನವಿ ಮಾಡಲಾಗಿತ್ತು. ಕೇಂದ್ರದ ನಿಯಮದಲ್ಲಿ ಹೇಳಿರುವ ವಿದ್ಯಾರ್ಹತೆ ಇಲ್ಲದ ಕಾರಣ, ಕೆಲ ಅಭ್ಯರ್ಥಿಗಳು ತೊಂದರೆ ಅನುಭವಿಸುವಂತಾಯಿತು ಎಂದರು.
ವಾದ ಪ್ರತಿವಾದ ದಾಖಲಿಸಿಕೊಂಡ ಪೀಠ, ಪರೀಕ್ಷೆಯಲ್ಲಿ ಎಷ್ಟು ಮಂದಿ ಅಂಧ ಅಭ್ಯರ್ಥಿಗಳು ಭಾಗಿಯಾಗಿದ್ದರು. ಅವರಲ್ಲಿ ಎಷ್ಟು ಜನ ತಾವಾಗಿಯೇ ಸ್ಕ್ರೈಬ್‌ಗಳನ್ನು ಕರೆ ತಂದಿದ್ದರು. ಎಷ್ಟು ಅಭ್ಯರ್ಥಿಗಳು ಆಯೋಗದ ವತಿಯಿಂದ ಒದಗಿಸಿದ ಲಿಪಿಕಾರರನ್ನು ಬಳಸಿಕೊಂಡರು ಹಾಗೂ ಕೆಪಿಎಸ್ ಸಿ ಒದಗಿಸಿದ ಲಿಪಿಕಾರರ ವಿದ್ಯಾರ್ಹತೆ ಏನು ಎಂಬ ವಿವರಗಳನ್ನು ಸೆಪ್ಟೆಂಬರ್ 28ರೊಳಗೆ ಸಲ್ಲಿಸುವಂತೆ ಕೆಪಿಎಸ್‌ಸಿಗೆ ಸೂಚಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಿತು.