ಬೆಂಗಳೂರು : ದೆಹಲಿಯಲ್ಲಿ ಸಿಎಎ ಪರ-ವಿರೋಧಿ ಹಿಂಸಾಚಾರ ಪ್ರಕರಣದಲ್ಲಿ ಅಮಾಯಕರ ಸಾವು ನೋವಿಗೆ ಬಿಜೆಪಿ ಸರ್ಕಾರ ನೇರ ಹೊಣೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವರ ವ್ಯಾಪ್ತಿಯಲ್ಲಿ ದೆಹಲಿಯ ಕಾನೂನು ಸುವ್ಯವಸ್ಥೆ ಬರುತ್ತದೆ. ಗಲಭೆ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಈ ನಿಟ್ಟಿನಲ್ಲಿ ಅಮಿತ್ ಶಾ ಅವರನ್ನು ವಜಾ ಮಾಡಬೇಕು. ಗಲಭೆಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಜರಗಿಸಬೇಕು. ಪ್ರಚೋದನಕಾರಿ ಹೇಳಿಕೆ ಕೊಟ್ಟ ಬಿಜೆಪಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರಕ್ಕೆ ಚಾಟಿ ಬೀಸಿದ ನ್ಯಾಯಾಧೀಶರನ್ನು ರಾತ್ರೋರಾತ್ರಿ ವರ್ಗಾವಣೆ ಮಾಡಿರುವುದು ಅಘಾತಕಾರಿ. ನ್ಯಾಯಮೂರ್ತಿಗಳನ್ನ ಹೆದರಿಸುವಂತಹ ಕೆಲಸ ದೇಶದಲ್ಲಿ ನಡೆಯುತ್ತಿದೆ. ಗೃಹ ಮಂತ್ರಿ ರಾಜೀನಾಮೆ ಕೊಡದಿದ್ದರೆ ರಾಷ್ಟ್ರಪತಿಗಳು ಅವರನ್ನು ವಜಾ ಮಾಡಬೇಕು. ಗಲಭೆಗೆ ಯಾವುದೇ ಪಕ್ಷದವರು ಕಾರಣವಾಗಿರಲಿ. ಕಾನೂನು ಕೈಗೆತ್ತಿಕೊಂಡಿರುವವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.
ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ವಿರುದ್ಧದ ಯತ್ನಾಳ್ ವಿವಾದಾತ್ಮಕ ಹೇಳಿಕೆ ಆಘಾತಕಾರಿ ವಿಷಯ ಎಂದರು. ಅಲ್ಲದೇ ಇಂದು ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇದೆ ಅಂದರೆ ಅದಕ್ಕೆ ದೇಶದ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯೂ ಇದೆ. ಅವರ ಪರಿಶ್ರಮದ ಫಲವಾಗಿ ದಾಸ್ಯದಿಂದ ನಾವು ಬಿಡುಗಡೆಗೊಂಡಿದ್ದೇವೆ. ದೇಶಪ್ರೇಮಿಗಳು ಅಂತ ಹೇಳುವ ಬಿಜೆಪಿ ಸ್ವಾತಂತ್ರ್ಯ ಹೋರಾಟಗಾರ ವಿರುದ್ಧ ಕೆಟ್ಟದಾಗಿ ಮಾತನಾಡುವುದು ಎಷ್ಟರಮಟ್ಟಿಗೆ ಸರಿ?. ಯಾರನ್ನು ತೃಪ್ತಿ ಪಡಿಸಲು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಯತ್ನಾಳ್‌ರನ್ನು ಶಾಸಕ ಸ್ಥಾನದಿಂದ ಉಚ್ಛಾಟನೆ ಮಾಡಬೇಕು. ಯತ್ನಾಳ್ ಕ್ಷಮೆಯಾಚಿಸದಿದ್ದರೆ ವಿಧಾನಸಭೆ ಕಲಾಪ ನಡೆಯಲು ಬಿಡಲ್ಲ. ಯತ್ನಾಳ್ ವಿರುದ್ಧ ಬಿಜೆಪಿ ಕೂಡಲೇ ಶಿಸ್ತುಕ್ರಮ ಜರುಗಿಸಲಿ. ಈ ಮೂಲಕ ತಮ್ಮ ರಾಷ್ಟ್ರ ಪ್ರೇಮ ಪ್ರಕಟಿಸಲಿ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಯತ್ನಾಳ್ ವಿರುದ್ಧ ಪ್ರತಿಭಟನೆಗೆ ಕಾಂಗ್ರೆಸ್ ಮುಂದಾಗಲಿದೆ ಎಂದರು.