ಬೆಂಗಳೂರು: ನಮ್ಮ ಸರ್ಕಾರ ನೂರು ದಿನ ಪೂರೈಸಿದೆ. ನಾವು ನುಡಿದಂತೆ ನಡೆದಿದ್ದೇವೆ ಎಂದು ವಿಧಾನ ಪರಿಷತ್ನ ಸರ್ಕಾರಿ ಮುಖ್ಯ ಸಚೇತಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐದು ಗ್ಯಾರೆಂಟಿಗಳನ್ನು ಜಾರಿಗೆ ತಂದಿದ್ದೇವೆ. ಅದರಲ್ಲಿ ಮೂರು ಗ್ಯಾರಂಟಿಗಳು ಅನುಷ್ಠಾನ ಆಗಿವೆ. ಶಕ್ತಿ ಯೋಜನೆ ಸಾಕಷ್ಟು ಪ್ರಶಂಸೆ ಪಡೆದಿದೆ. ಇಲ್ಲಿಯವರೆಗೆ 50ಕೋಟಿ ಬಾರಿ ಲಾಭ ಪಡೆದಿದ್ದಾರೆ ಎಂದರು.
ಬಿಜೆಪಿ ಹಗರಣಗಳನ್ನು ತನಿಖೆಗೆ ಕೊಟ್ಟಿದ್ದೇವೆ. 40 % ವಿರುದ್ಧ ಹೋರಾಟ ಮಾಡಿದ್ದೆವು. ಈಗ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಕೊಟ್ಟಿದ್ದೇವೆ. ಕೋವಿಡ್ ಹಗರಣವನ್ನೂ ತನಿಖೆಗೆ ಕೊಟ್ಟಿದ್ದೇವೆ. ನಿವೃತ್ತ ನ್ಯಾ. ಮೈಕಲ್ ಡಿ ಕುನ್ಹಾ ನೇತೃತ್ವದಲ್ಲಿ ತನಿಖೆಯಾಗಲಿದೆ. ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ತಪ್ಪು ಮಾಡಿಲ್ಲ ಅಂದ್ರೆ ಹೆದರುವುದೇಕೆ?. ನಮ್ಮದು ಜಿರೋ ಟಾಲರೆನ್ಸ್ ಸರ್ಕಾರ. ಸದನದಲ್ಲಿ ಚರ್ಚೆ ಮಾಡದೆ ಬಿಜೆಪಿಯವರು ಪಲಾಯನ ಮಾಡಿದ್ರು. ಸದನದ ಸಮಯವನ್ನೂ ಹಾಳು ಮಾಡಿದ್ರು. ಪ್ರತಿಪಕ್ಷನಾಯಕನಿಲ್ಲದೆ ಸದನ ನಡೆಯಿತು. ಇದನ್ನು 40 ವರ್ಷದ ನನ್ನ ರಾಜಕೀಯ ಜೀವನದಲ್ಲಿ ಹಿಂದೆಂದು ನೋಡಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭೆ ಚುನಾವಣೆಗೆ ಬಿಜೆಪಿಯವರಿಗೆ ಭಯ ಶುರುವಾಗಿದೆ. ರಾಜ್ಯದಲ್ಲಿ 20 ಸೀಟುಗಳನ್ನು ಗೆಲ್ಲುತ್ತೇವೆ ಎಂದ ಅವರು, ಸರ್ಕಾರ ಬರದ ಬಗ್ಗೆ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳುತ್ತಿದೆ ಎಂದರು. ಕಾವೇರಿ ವಿಚಾರದ ಬಗ್ಗೆ ರೈತರ ಹೋರಾಟದ ಕುರಿತು ಪ್ರತಿಕ್ರಿಯಿಸಿ, ನಾವು ಕಾವೇರಿ ಸಭೆ ಕರೆದಿದ್ದೆವು. ಅ.1 ರಂದು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಇದೆ. ಅದರ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಆಪರೇಷನ್ ಹಸ್ತ ಬಗ್ಗೆ ಮಾತನಾಡಿ, ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ. ಹಿಂದೆ ನಮ್ಮವರನ್ನು ಬಾಂಬೆಗೆ ಕರೆದೋಯ್ದಿದ್ರು. ಈಗ ಜನ ನಮಗೆ ಅಧಿಕಾರ ಕೊಟ್ಟಿದ್ದಾರೆ. ನಾವಾಗಿಯೇ ಆಪರೇಷನ್ ಮಾಡಲ್ಲ. ಅಲ್ಲಿ ಉಸಿರುಕಟ್ಟುವ ವಾತಾವರಣ ಇದ್ದರೆ ಬರಲಿ. ಕೆಲವು ಮುಖಂಡರು ಮಾತುಕತೆ ನಡೆಸಿದ್ದಾರೆ. ನಮ್ಮ ನಾಯಕರ ಜೊತೆ ಮಾತನಾಡಿದ್ದಾರೆ, ಅಂತಿಮ ತೀರ್ಮಾನ ವರಿಷ್ಠರು ತೆಗೆದುಕೊಳ್ಳುತ್ತಾರೆ. ಇಲ್ಲಿಯವರೆಗೆ ನಾವು ಯಾರನ್ನೂ ಸೇರಿಸಿಕೊಂಡಿಲ್ಲ ಎಂದರು.
ಬಿಜೆಪಿ ಚಾರ್ಜ್ ಶೀಟ್ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಮೊದಲು ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲಿ. ಆಮೇಲೆ ಅದನ್ನು ಬಿಡುಗಡೆ ಮಾಡಲಿ ಎಂದು ವ್ಯಂಗ್ಯವಾಡಿದರು. ಕೇಂದ್ರ ಸರ್ಕಾರ ಬಂದು 9 ವರ್ಷವಾಯ್ತಲ್ಲ, ಪ್ರಧಾನಿ ಕೊಟ್ಟ ಮಾತು ಉಳಿಸಿದ್ದಾರಾ?. 15 ಲಕ್ಷ ಹಣ ಯಾರ ಅಕೌಂಟಿಗೆ ಹಾಕಿದ್ದಾರೆ. ವಿದೇಶದಲ್ಲಿರುವ ಬ್ಲ್ಯಾಕ್ ಮನಿ ತಂದ್ರಾ?. ಸುಳ್ಳಿಗೆ ಆಸ್ಕರ್ ಅವಾರ್ಡ್ ಕೊಟ್ರೆ ಮೋದಿಗೆ ಕೊಡಬೇಕು. ಬಿಜೆಪಿ ಯಾವ ಘನ ಕಾರ್ಯ ಮಾಡಿದೆ. ನಿಮ್ಮ ಸುಳ್ಳಿಗೆ ಜನ ವೋಟ್ ಹಾಕಬೇಕಾ?. ಆರು ತಿಂಗಳು ಮುಗಿದ್ರೆ ಹತ್ತು ವರ್ಷ ಆಗುತ್ತದೆ. ಒಂದು ಮಾಧ್ಯಮಗೋಷ್ಟಿ ಮಾಡೋಕೆ ಪ್ರಧಾನಿಗೆ ಆಗಿಲ್ಲ. ಬರೀ ಮನ್ ಕಿ ಬಾತ್ ಅಂತಿದ್ದಾರೆ. ಯಾವ ಕಾರಣಕ್ಕೆ ಇವರಿಗೆ ಮತ ಹಾಕ್ಬೇಕು ಎಂದು ಪ್ರಶ್ನಿಸಿದರು.
ನಿಗಮ ಮಂಡಳಿ ನೇಮಕ ವಿಚಾರವಾಗಿ ಮಾತನಾಡಿ, ಪ್ರಕ್ರಿಯೆಗೆ ಚಾಲನೆ ಶುರುವಾಗಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸುರ್ಜೇವಾಲಾ ಶುರುಮಾಡಿದ್ದಾರೆ. ಕಾರ್ಯಕರ್ತರು, ಮುಖಂಡರಿಗೆ ಅವಕಾಶ ಸಿಗಲಿದೆ ಎಂದು ಹೇಳಿದರು. ನಾಯಕರ ಮಕ್ಕಳಿಗೆ ಸೀಟು ಕೊಡುವ ವಿಚಾರ, ದೆಹಲಿಯಲ್ಲಿ ಮೊನ್ನೆ ಸಭೆ ನಡೆಸಿದ್ರು. 36 ಮುಖಂಡರನ್ನು ಸಭೆ ಕರೆದಿದ್ದರು. ಪ್ರತಿಯೊಂದು ಕ್ಷೇತ್ರಕ್ಕೆ ಓರ್ವ ಸಚಿವರನ್ನ ನೇಮಿಸಿದ್ದಾರೆ. ಆ ಸಚಿವರು, ಮುಖಂಡರು ಕ್ಷೇತ್ರದಲ್ಲಿ ಸಭೆ ನಡೆಸಿ ಅವರು ಪಟ್ಟಿಯನ್ನ ಕೊಡ್ತಾರೆ ಆ ಪಟ್ಟಿ ಆಧಾರದ ಮೇಲೆ ಸೀಟು ಕೊಡುತ್ತೇವೆ ಎಂದರು.