ಬೆಂಗಳೂರು: ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ರಚಿಸಲಾದ ಕೆಪಿಸಿಸಿ ಸತ್ಯಶೋಧನಾ ಸಮಿತಿಯ ಎರಡನೇ ಸಭೆ ಇಂದು ನಡೆಯಿತು. ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಇಂದು ಸಭೆ ನಡೆಸಲಾಯಿತು.
ಘಟನೆಯ ವಾಸ್ತವಾಂಶವನ್ನು ತಿಳಿಯಲು ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹಿಸಲಾಯಿತು. ಈ ಸಭೆಯಲ್ಲಿ ಪುಲಿಕೇಶಿ ನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಬಿಬಿಎಂಪಿ ಸದಸ್ಯರು ಹಾಗೂ ಕ್ಷೇತ್ರದ ಹಿರಿಯ ನಾಯಕರು ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹಾಗೂ ಸಮಿತಿಯ ಸದಸ್ಯರಾದ ರಾಮಲಿಂಗ ರೆಡ್ಡಿ, ಕೆ.ಜೆ.ಜಾರ್ಜ್, ಬಿ.ಕೆ.ಹರಿಪ್ರಸಾದ್, ಕೃಷ್ಣ ಭೈರೇಗೌಡ, ನಸೀರ್ ಅಹ್ಮದ್ ಸೇರಿದಂತೆ ಶಾಸಕ ರಿಜ್ವಾನ್ ಅರ್ಷದ್ ಸಭೆಯಲ್ಲಿ ಭಾಗಿಯಾಗಿದ್ದರು.
ಅಖಂಡ ಶ್ರೀನಿವಾಸ್ ಮೂರ್ತಿ ಭಾಗಿ: ಇದೇ ವೇಳೆ ಸಮಿತಿ ಸಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಹ ಭಾಗಿಯಾಗಿದ್ದರು. ಕೆಪಿಸಿಸಿ ಅಧ್ಯಕ್ಷರು, ಸತ್ಯ ಶೋಧನಾ ಸಮಿತಿ ಸದಸ್ಯರನ್ನು ಭೇಟಿ ಮಾಡಿದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ತಮ್ಮ ವಿವರಣೆಯನ್ನು ನೀಡಿದ್ದಾರೆ.
ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಕಚೇರಿಗೆ ಬರುವಂತೆ ಸೂಚನೆ ನೀಡಿದ್ದಾರೆ. ಈ ವೇಳೆ ಸತ್ಯಶೋಧನಾ ಸಮಿತಿ ಸದಸ್ಯರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಘಟನೆ ಸಂಬಂಧ ವಿವರಣೆ ನೀಡಿದರು.
ದೂರು ಕೊಡದಂತೆ ಒತ್ತಾಯ?: ಈ ವೇಳೆ ಅವರಿಗೆ ಘಟನೆ ಸಂಬಂಧ ಪೊಲೀಸ್ ದೂರು ನೀಡದಂತೆ ಕೆಪಿಸಿಸಿ ನಾಯಕರು ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ದೂರು ನೀಡಿದರೆ ತನಿಖೆ ಹೆಸರಲ್ಲಿ ಪೊಲೀಸರು ಸ್ಥಳೀಯ ಕಾಂಗ್ರೆಸ್ ನಾಯಕರು, ಶಾಸಕರನ್ನು ಕರೆಸಲಿದ್ದಾರೆ. ಇದರಿಂದ ಪಕ್ಷ ಮುಜುಗರಕ್ಕೊಳಗಾಗುವ ಸಾಧ್ಯತೆ ಇದೆ. ಪಾಲಿಕೆ ಚುನಾವಣೆ ವೇಳೆ ಕಾಂಗ್ರೆಸ್ಗೆ ಇದರಿಂದ ಹಿನ್ನಡೆಯಾಗಲಿದೆ. ಹೀಗಾಗಿ ದೂರು ನೀಡುವುದು ಬೇಡ ಎಂದು ಅಖಂಡ ಶ್ರೀನಿವಾಸಮೂರ್ತಿಯವರ ಮನವೊಲಿಕೆಗೆ ಯತ್ನಿಸಿದರು ಎನ್ನಲಾಗಿದೆ.