ಬೆಂಗಳೂರು: ವಿಧಾನ ಪರಿಷತ್ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ಇದರ ಫಲಿತಾಂಶ ಏನೇ ಇರಲಿ, ನಮ್ಮ ರಾಜಕೀಯ ಬದ್ಧತೆಯನ್ನು ಯಾವುದೇ ಕಾರಣಕ್ಕೂ ಬದಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಹಿರಿಯ ಮುಖಂಡರು, ಮಾಜಿ ಸಚಿವರು, ಹಾಲಿ ಮತ್ತು ಮಾಜಿ ಸಂಸದರು, ಹಾಲಿ ಮತ್ತು ಮಾಜಿ ಶಾಸಕರು, ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭಾಪತಿ ಬದಲಿಸಲು ಹೊರಟಿರುವ ಸರ್ಕಾರದ ವಿರುದ್ಧದ ಹೋರಾಟವನ್ನು ನಾವು ಹೇಗೆ ನಡೆಸಬೇಕು ಎಂಬುದನ್ನು ಮುಂದೆ ನಿರ್ಧರಿಸುತ್ತೇವೆ. ನಾವು ನಮ್ಮದೇ ಆದ ನಿಟ್ಟಿನಲ್ಲಿ ಜನಪರ ಹೋರಾಟ ನಡೆಸಿದ್ದಕ್ಕೆ, ಪಕ್ಷದ ನಿಲುವು ಎತ್ತಿ ಹಿಡಿದದ್ದಕ್ಕೆ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ಏನೇ ಆಗಲಿ, ನಮ್ಮ ರಾಜಕೀಯ ನಿಲುವು, ಬದ್ಧತೆ ಯಾವುದೇ ಕಾರಣಕ್ಕೂ ಬದಲಾಗಲ್ಲ. ಅಧಿಕಾರ ಇರಲಿ, ಇಲ್ಲದಿರಲಿ ನಾವು ನಮ್ಮತನ ಬದಲಿಸಿಕೊಳ್ಳುವುದಿಲ್ಲ ಎಂದರು.

ಜೆಡಿಎಸ್ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ವಿಧಾನಸಭೆಯಲ್ಲಿ ಒಂದು ಹಾಗೂ ವಿಧಾನ ಪರಿಷತ್ನಲ್ಲಿ ಒಂದು ನಿಲುವು ಕೈಗೊಂಡಿತ್ತು. ಆದರೆ ಇದರ ಬಗ್ಗೆ ನಾನು ಏನನ್ನೂ ಹೇಳಲ್ಲ. ಇಷ್ಟು ದಿನ ಒಂದು ನಿಲುವನ್ನು ಜೆಡಿಎಸ್ ತಾಳಿತ್ತು. ಈಗ ಯಾವ ನಿರ್ಧಾರ ಕೈಗೊಳ್ಳುತ್ತಾರೆ ನೋಡೋಣ. ಆದರೆ ಭೂ ಸುಧಾರಣೆ, ಕಾರ್ಮಿಕ ಕಾನೂನು ಹಾಗೂ ಎಪಿಎಂಸಿ ಕಾಯ್ದೆ ವಿಚಾರದಲ್ಲಿ ನಮ್ಮ ನಿಲುವು ಬದಲಾಗುವುದಿಲ್ಲ ಎಂದು ತಿಳಿಸಿದರು.
ಓದಿ: ರಾಜ್ಯದಲ್ಲಿಂದು 1,321 ಮಂದಿಗೆ ಸೋಂಕು ದೃಢ: 10 ಮಂದಿ ಬಲಿ
ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷದ ವತಿಯಿಂದ ನಡೆಸಿದ ಹೋರಾಟದ ಫಲವಾಗಿ ಲಭಿಸಿದೆ. ಚುನಾವಣೆ ಮುಂದೂಡುವಂತೆ ಒಂದು ಸಲಹೆ ನೀಡಿ ಎಂದು ಸರ್ಕಾರ ನಮಗೆ ಒತ್ತಾಯ ಮಾಡಿತ್ತು. ಆದರೆ ನಾವು ಒಪ್ಪಿಲ್ಲ. ನಮ್ಮಲ್ಲಿ ಸಾಕಷ್ಟು ಒತ್ತಡ ಇದ್ದರೂ ನಾವು ಒಪ್ಪದೇ ಚುನಾವಣೆ ನಡೆಸುವಂತೆ ಮನವಿ ಮಾಡಿದೆವು. ಈ ನಡುವೆ ಸಾಕಷ್ಟು ಬದಲಾವಣೆ ಆಗಿದ್ದನ್ನು ಗಮನಿಸುತ್ತಿದ್ದೀರಿ ಎಂದು ಡಿಕೆಶಿ ಹೇಳಿದರು.
ಕೊರೊನಾ ವಿಚಾರದಲ್ಲಿ ನಾವು ಸಾಕಷ್ಟು ದೊಡ್ಡ ಹೋರಾಟ ನಡೆಸಿದ್ದೇವೆ. ಕೊರೊನಾ ಭ್ರಷ್ಟಾಚಾರದ ವಿರುದ್ಧವೂ ಹೋರಾಟ ನಡೆಸಿದ್ದೇವೆ. ನಮಗೆ ಈ ಸಂಬಂಧ ಎಐಸಿಸಿ ನಿರ್ದೇಶನ ನೀಡಿತ್ತು. ಸದನದ ಒಳಗೆ, ಹೊರಗೆ ನಡೆಸಿದ್ದೇವೆ. ಸದನದಲ್ಲಿ 1618 ಪ್ರಶ್ನೆಯನ್ನು ಕೇಳಿದ್ದೆವು. ಆದರೆ ಎಲ್ಲಕ್ಕೂ ಉತ್ತರ ನೀಡಿಲ್ಲ. ನಾವು ಈಗ ಮತ್ತೆ ಇದೇ ಪ್ರಶ್ನೆ ಕೇಳುವ ಕಾರ್ಯ ಮಾಡಿದ್ದೇವೆ ಎಂದರು.
ಓದಿ: ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಹಿಂದೆ ರಾಜಕೀಯ ಕಾರಣ : ಎಸ್ ಆರ್ ಪಾಟೀಲ್
ಸರ್ಕಾರದ ವಿವಿಧ ಬಿಲ್ಗಳನ್ನು ಖಂಡಿಸಿ ನಾವು ಹೋರಾಡಿದ್ದೇವೆ. ದಾಖಲೆ ರೀತಿಯಲ್ಲಿ ಸದನದಲ್ಲಿ ನಮ್ಮ ಸದಸ್ಯರು ಜನ ವಿರೋಧಿ ಬಿಲ್ನ್ನು ಸೋಲಿಸಿದ್ದೇವೆ. ವಿಧಾನಸಭೆ ಉಪಚುನಾವಣೆ ಈ ಮಧ್ಯೆ ಘೋಷಣೆ ಆದರೆ ಈ ಸಂದರ್ಭ ಚರ್ಚಿಸುತ್ತೇವೆ. ಈ ಮಧ್ಯೆ ಪಂಚಾಯಿತಿ ಚುನಾವಣೆ ಘೋಷಣೆ ಆಗಿದೆ. ಹೀಗಾಗಿ ಮತ್ತೆ ಶ್ರಮಿಸಿ, ನಮ್ಮ ಹೆಚ್ಚಿನ ಸದಸ್ಯರನ್ನು ಗೆಲ್ಲಿಸಿಕೊಳ್ಳಬೇಕು. ಅದಕ್ಕಾಗಿ ಹಲವರಿಗೆ ಜವಾಬ್ದಾರಿ ವಹಿಸಿದ್ದೇವೆ. ಜವಾಬ್ದಾರಿ ವಹಿಸುವ ಮುನ್ನ ಪ್ರತಿಯೊಬ್ಬ ನಾಯಕರ ಜತೆ ಚರ್ಚಿಸಿ ಸೂಕ್ತ ವ್ಯಕ್ತಿಗಳನ್ನೇ ಆಯ್ಕೆ ಮಾಡಿದ್ದೇನೆ. ಇನ್ನು ಮೂರು ತಿಂಗಳಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆ, ಬಿಬಿಎಂಪಿ ಚುನಾವಣೆ ಕೂಡ ಬರಲಿದೆ. ಅದಕ್ಕೆಲ್ಲಾ ನಾವು ಸಜ್ಜಾಗಬೇಕು. ಮಾರ್ಚ್, ಏಪ್ರಿಲ್ ಒಳಗೆ ಚುನಾವಣೆ ಬರಲಿದೆ. ಸರ್ಕಾರ ಎಷ್ಟೇ ವಾರ್ಡ್ಗೆ ಚುನಾವಣೆ ನಡೆಸಲಿ, ಅದಕ್ಕೆ ನಾವು ಸಜ್ಜಾಗಬೇಕು. ಗ್ರಾಮ ಪಂಚಾಯಿತಿ ಚುನಾವಣೆ ಗೆಲುವು ನಮಗೆ ಬಹುಮುಖ್ಯ. ತಳಮಟ್ಟದಲ್ಲಿ ನಾವು ನಮ್ಮವರನ್ನು ಗೆಲ್ಲಿಸಿಕೊಂಡರೆ ಮುಂದೆ ದೊಡ್ಡ ಚುನಾವಣೆ ಗೆಲುವು ಸಾಧ್ಯ. ಪ್ರತಿಯೊಬ್ಬರೂ ಜವಾಬ್ದಾರಿ ವಹಿಸಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಓದಿ: ಪರಿಷತ್ ಸಭಾಪತಿ ವಿರುದ್ಧ ಬಿಜೆಪಿಯಿಂದ ಅವಿಶ್ವಾಸ ನಿರ್ಣಯ ಮಂಡನೆಗೆ ನಿರ್ಧಾರ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಸಿಡಬ್ಲೂಸಿ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ ಮತ್ತಿತರರು ಉಪಸ್ಥಿತರಿದ್ದರು.