ಬೆಂಗಳೂರು: ಕಾಂಗ್ರೆಸ್ ಪಕ್ಷ ಅಂಬೇಡ್ಕರ್‌ಗೆ ಗೌರವ ಕೊಟ್ಟಿಲ್ಲ ಎಂದು ಹೇಳುವ ಮುನ್ನ ನಿಮ್ಮ ನಾಯಕರಿಗೆ ನೀವು ಮಾಡಿದ ಅಪಮಾನವನ್ನು ನೆನಪಿಸಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಕ್ಸಮರ ನಡೆಸಿದರು. ಅಂಬೇಡ್ಕರ್‌ಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿಂದು ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದೆ. ನಮ್ಮ ಸರ್ಕಾರದಲ್ಲಿ ಅವರು ಮಂತ್ರಿಯಾಗಿಯೂ ಕೆಲಸ ಮಾಡಿದ್ದಾರೆ. ಮೋದಿ ಅವರೇ, ನಿಮ್ಮ ನಾಯಕರಿಗೆ ನೀವು ಮಾಡಿದ ಅವಮಾನವನ್ನು ಮೊದಲು ಹೇಳಿ. ಅಡ್ವಾಣಿ ಏನಾದ್ರು, ಯಡಿಯೂರಪ್ಪ ಏನಾದ್ರು? ನಾವು ಅಂಬೇಡ್ಕರ್ ಫೋಟೋ ಇಟ್ಕೊಂಡಿದ್ದೇವೆ. ಬಿಜೆಪಿಯವರು ಅಂಬೇಡ್ಕರ್ ಫೋಟೋ ಇಟ್ಟಿಲ್ಲ ಎಂದು ಹೇಳಿದರು.
ಮಂಡ್ಯ, ಹಾಸನಕ್ಕೆ ನಾನು ಮತ್ತು ಖರ್ಗೆ ಹೋಗಿದ್ವಿ. ಅದು ಜೆಡಿಎಸ್ನ ತವರೂರು. ಅಲ್ಲಿನ ಜನರು ಕಾಂಗ್ರೆಸ್‌ಗೆ ಶಕ್ತಿ ಕೊಡಲಿದ್ದಾರೆ. ಪ್ರಧಾನಿ ಬಂದಿದ್ದಾರೆ ಬರಲಿ, ತುಂಬಾ ಖುಷಿ. ಮೋದಿ ಟೀಕೆಗಳ ಲೆಕ್ಕ ಹಾಕ್ತಿದ್ದಾರೆ, ಇದರ ಬದಲು ಅಭಿವೃದ್ಧಿ ಬಗ್ಗೆ ಮಾತಾಡಬೇಕು. ಕೋವಿಡ್ ಸಮಯದಲ್ಲಿ 20 ಲಕ್ಷ ಕೋಟಿ ಹಣದ ಬಗ್ಗೆ ಮಾತಾಡಿದ್ರೆ ಅದಕ್ಕೆ ಒಂದು ಅರ್ಥ ಇರುತ್ತಿತ್ತು. ಆದ್ರೆ ಈ ಬಗ್ಗೆ ಮಾತಾಡ್ತಿಲ್ಲ. ಕೋವಿಡ್ನಲ್ಲಿ ಸತ್ತವರಿಗೆ ಇನ್ನೂ ಹಣ ಸಿಕ್ಕಿಲ್ಲ ಎಂದರು.
ಬಿಜೆಪಿಗೆ ಆಡಳಿತ ಅನುಭವ ಇಲ್ಲ: ಪ್ರಧಾನಿ ಮೋದಿ ನಂಗೆ ವೋಟ್ ಕೊಡಿ ಅಂತಿದ್ದಾರೆ. ಅವರಿಗೂ ಕರ್ನಾಟಕಕ್ಕೂ ಏನು ಸಂಬಂಧ? ರಾಜ್ಯ ಬಿಜೆಪಿಯಲ್ಲಿ ಲೀಡರ್ಶಿಪ್ ಇಲ್ವಾ? ಸಿಎಂ ಬೊಮ್ಮಾಯಿಗೆ ನಾಯಕತ್ವ ಕೊಡಲಿಲ್ಲ. ಯಡಿಯೂರಪ್ಪ ಅವ್ರಿಗೂ ನಾಯಕತ್ವ ನೀಡಿಲ್ಲ. ನಮ್ಮ ಗ್ಯಾರಂಟಿಗಳ ಬಗ್ಗೆ ಮೋದಿ ಮಾತಾಡ್ತಿದ್ದಾರೆ. ನಡ್ಡಾ ಕೂಡ ಮಾತಾಡ್ತಿದ್ದಾರೆ. ಇಡೀ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ಪಾಸ್ ಕೊಡ್ತೀವಿ. ನಮ್ಮ 5 ಗ್ಯಾರಂಟಿಯನ್ನು ನಮ್ಮ ಮೊದಲನೆಯ ಕ್ಯಾಬಿನೆಟ್ನಲ್ಲಿ ಪಾಸ್ ಮಾಡ್ತೀವಿ. ಇದಕ್ಕೆ ಹಣ ಎಲ್ಲಿಂದ ಬರುತ್ತೆ? ಎಂದು ಟೀಕೆ ಮಾಡ್ತಿದ್ದಾರೆ. ನಾವು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ಬಿಜೆಪಿಗೆ ಆಡಳಿತ ಮಾಡಿರುವ ಅನುಭವ ಇಲ್ಲ ಎಂದು ಟೀಕಿಸಿದರು.
ಪರಮೇಶ್ವರ್ ಮೇಲೆ ಕಲ್ಲು ತೂರಾಟ ನಾಟಕ ಎಂಬ ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು, ಪರಮೇಶ್ವರ್ ಸಿನಿಮಾ ಪ್ರೊಡ್ಯುಸರ್ಗಳಲ್ಲ, ನಿರ್ದೇಶಕರಲ್ಲ. ನಾವು ದಿನಾ ಬಣ್ಣ ಹಚ್ಚಿಕೊಂಡು ಡ್ರಾಮ ಮಾಡ್ತಿಲ್ಲ. ಅದೆಲ್ಲ ಬೇರೆಯವರಿಗೆ ಬಿಟ್ಟಿದ್ದೇವೆ. ಕುಮಾರಣ್ಣನಿಗೆ ಒಳ್ಳೆಯದಾಗಲಿ. ಪರಮೇಶ್ವರ್ ಬಹಳ ಸರಳ ಮನುಷ್ಯ ಎಂದು ತಿರುಗೇಟು ನೀಡಿದರು.
ಪಕ್ಷ ಸೇರ್ಪಡೆ: ಅನ್ಯಪಕ್ಷಗಳ ಮುಖಂಡರು ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಸದಾಶಿವನಗರದ ಅವರ ಗೃಹ ಕಚೇರಿಯಲ್ಲಿಂದು ಕಾಂಗ್ರೆಸ್ ಸೇರ್ಪಡೆಯಾದರು.
ಇದನ್ನೂ ಓದಿ : ಕಾಂಗ್ರೆಸ್ನಿಂದ ನನಗೆ ಧಮ್ಕಿ.. ಶಿವನ ಕೊರಳಿಗೆ ನಾಗಸರ್ಪವೇ ಶೋಭೆ.. ಜನತೆಯೇ ಈಶ್ವರ ಸ್ವರೂಪಿ: ಮೋದಿ