ಬೆಂಗಳೂರು: ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಎಂ.ಡಿ. ಲಕ್ಷ್ಮಿನಾರಾಯಣ (ಅಣ್ಣಯ್ಯ) ರಾಜೀನಾಮೆ ಸಲ್ಲಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, ಕೊರೊನಾ ಹಿನ್ನೆಲೆ ರಾಜ್ಯಾದ್ಯಂತ ಓಡಾಡಿ ಕಾರ್ಯನಿರ್ವಹಿಸುವುದು ಕಷ್ಟ ಸಾಧ್ಯವಾಗಿರುವ ಹಿನ್ನೆಲೆ ತಮ್ಮ ಮನವಿಯನ್ನು ಪುರಸ್ಕರಿಸುವಂತೆ ಕೇಳಿಕೊಂಡಿದ್ದಾರೆ
ಡಿಕೆಶಿಗೆ ಬರೆದ ಪತ್ರದಲ್ಲಿ, ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಅಧ್ಯಕ್ಷನಾಗಿ ಕಳೆದ ಮೂರುವರೆ ವರ್ಷಗಳ ಕಾಲ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯಾದ್ಯಂತ ಸಂಚಾರಿಸಿ ಹಿಂದುಳಿದ ಸಮುದಾಯಗಳ ಸಂಘಟನೆಗೆ ಒತ್ತು ಕೊಡಲಾಗಿತ್ತು. ಕೊರೊನಾ ನಿಮಿತ್ತ ರಾಜ್ಯಾದ್ಯಂತ ಸಂಚರಿಸಲು ಸಾಧ್ಯವಿಲ್ಲದ ಕಾರಣ ನಾನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೊಬ್ಬರಿಗೆ ಅವಕಾಶ ನೀಡಬೇಕೆಂದು ಕೋರುವೆ ಎಂದು ವಿವರಿಸಿದ್ದಾರೆ.
ದಿಲ್ಲಿಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಸಮಾಲೋಚಿಸಿ ವಾಪಸಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರದೇಶ ಕಾಂಗ್ರೆಸ್ ಸಮಿತಿ ಪುನರ್ರಚನೆಗೆ ಮುಂದಾಗಿದ್ದಾರೆ. ದೀರ್ಘಾವಧಿ ಒಂದೇ ಸ್ಥಾನದಲ್ಲಿರುವ ಅಧ್ಯಕ್ಷರನ್ನು ಬದಲಿಸುವ ಹಾಗೂ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ಚಿಂತನೆ ನಡೆಸಿದ್ದಾರೆ. ನಿನ್ನೆ ದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಇದೀಗ ಶಿವಕುಮಾರ್ ವಾಪಸಾಗುತ್ತಿದ್ದಂತೆ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುವ ಮೂಲಕ ಲಕ್ಷ್ಮೀನಾರಾಯಣ ಜಾಣ ನಡೆ ಇಟ್ಟಿದ್ದಾರೆ.
ಸುದೀರ್ಘ ಅವಧಿಯಿಂದ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಇದೀಗ ಯುವಕರಿಗೆ ಆದ್ಯತೆ ನೀಡುವ ಮಾಹಿತಿ ಸಿಗುತ್ತಿದ್ದಂತೆ ತಮ್ಮ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಅಲ್ಲದೇ ಇವರು ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆ ಆದ ಸಂದರ್ಭದಿಂದಲೂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ರಾಜೀನಾಮೆ ನೀಡಿ ಬೇರೊಬ್ಬರಿಗೆ ಅವಕಾಶದ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.