ಬೆಂಗಳೂರು: ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಮಲೆಮಹದೇಶ್ವರ ಬೆಟ್ಟದಲ್ಲಿ ಸೋಲಾರ್ ವಿದ್ಯುತ್ ದೀಪಗಳ ದುರಸ್ತಿಗೆ ಅಧಿಕಾರಿಗಳ ತಂಡವನ್ನು ಕಳುಹಿಸಿಕೊಡುವುದಾಗಿ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಬೆಳಗಿನ ಕಲಾಪದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಸಂದೇಶ ನಾಗರಾಜ್, ಮಲೆಮಹದೇಶ್ವರ ಬೆಟ್ಟದ ಸೋಲಾರ್ ದೀಪಗಳು ಹಾಳಾಗಿವೆ. ಶಿವರಾತ್ರಿ ಇದ್ದು, ಅಲ್ಲಿಗೆ ಬರುವ ಲಕ್ಷಾಂತರ ಭಕ್ತರಿಗೆ ತೊಂದರೆಯಾಗಲಿದೆ. ಹಾಗಾಗಿ ಕೂಡಲೇ ದೀಪಗಳ ದುರಸ್ತಿ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಇಂದೇ ಅಧಿಕಾರಿಗಳನ್ನು ಕಳಿಸಿ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡಲಿದ್ದೇನೆ. ಜೊತೆಗೆ ನಾನೂ ಮುತುವರ್ಜಿ ವಹಿಸಲಿದ್ದೇನೆ. ಸೋಲಾರ್ ದೀಪ ಟೆಂಡರ್ ಕೊಡುವಾಗ ಐದು ವರ್ಷ ನಿರ್ವಹಣೆ ಮಾಡಬೇಕು. ಆದರೆ ಕೆಲವೆಡೆ ಯೋಜನೆ ವ್ಯರ್ಥವಾಗಿದೆ. ರಾಜ್ಯದಲ್ಲಿ ಮೂರ್ನಾಲ್ಕು ಸಂಸ್ಥೆಗಳು ಮಾತ್ರ ಸರಿಯಾದ ನಿರ್ವಹಣೆ ಮಾಡುತ್ತಿವೆ. ಉಳಿದ ಕಂಪನಿಗಳು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಈ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಮಂಡ್ಯ ರೈತರು ಕಬ್ಬು ಕಟಾವು ಮಾಡಲು ಸಾದಸ್ಯವಾಗಿಲ್ಲ. ಕಾರ್ಖಾನೆ ಮುಚ್ಚಿದ ಕಾರಣ ತಮಿಳುನಾಡಿಗೆ ಕಳಿಸಬೇಕು. ಆದರೆ ತಮಿಳುನಾಡು ಸರ್ಕಾರ ನಮ್ಮ ರೈತರಿಗೆ ಅನುಮತಿ ನೀಡದೇ ದಲ್ಲಾಳಿಗಳನ್ನು ಕಳಿಸಿ ಕಡಿಮೆ ದರಕ್ಕೆ ಖರೀದಿ ಮಾಡಲಾಗುತ್ತಿದೆ. ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ಗಮನ ಸೆಳೆದರು.
ಇನ್ನು ಕಾಂಗ್ರೆಸ್ ಸದಸ್ಯೆ ಜಯಮಾಲಾ ಮಾತನಾಡಿ, ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ನೀಡದೇ ಇರುವುದು ಆತಂಕಕ್ಕೆ ಎಡೆಮಾಡಿದೆ. ಎರಡೂವರೆ ಲಕ್ಷ ನಾಯಿಗಳಿಗೆ ಎಬಿಸಿ ಲಸಿಕೆ ಬಾಕಿ ಇದೆ ಎಂದು ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಸದಸ್ಯ ಸಂಕನೂರು ಮಾತನಾಡಿ, ಕಾರವಾರ, ಶಿರಸಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಅಕ್ಷರ ದಾಸೋಹದ ಯೋಜನೆಯಡಿ ಏಫ್ರಾನ್ ಖರೀದಿಯಲ್ಲಿ ಅವ್ಯವಹಾರ ಆರೋಪ ಕೇಳಿಬಂದಿದೆ. ತನಿಖೆ ನಡೆಸಿ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರಿಂದ ಹೆಚ್ಚುವರಿ ಹಣ ವಾಪಸ್ ಪಡೆಯಲು ನಿರ್ಧರಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೆಚ್ಚುವರಿಯಾಗಿ ನೀಡಿದ ಹಣ ಮರುಪಾವತಿ ಮಾಡದಿದ್ದಲ್ಲಿ ಫೆಬ್ರವರಿ ವೇತನದಲ್ಲಿ ಕಡಿತ ಮಾಡುವ ನೋಟಿಸ್ ನೀಡಿದ್ದಾರೆ. ಆದರೆ ಮುಖ್ಯೋಪಾಧ್ಯಾಯರನ್ನು ಅವ್ಯವಹಾರದ ಆರೋಪದಲ್ಲಿ ಸಿಲಿಕಿಸಿರುವುದು ಸರಿಯಲ್ಲ. ಕೂಡಲೇ ಮುಖ್ಯೋಪಾಧ್ಯಾಯರ ವೇತನ ಕಡಿತ ಆದೇಶ ತಡೆಗೆ ಆದೇಶಿಸಬೇಕು. ಮರು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಧಾರವಾಡ ಜಿಲ್ಲಾಡಳಿತ ನೆರೆ ಸಂತ್ರಸ್ತರಿಗೆ ದಾಸ್ತಾನು ತಲುಪಿಸುವಲ್ಲಿ ವಿಫಲವಾಗಿದೆ. ದಾಸ್ತಾನು ಕೊಳೆಯುತ್ತಿದೆ. ಕೂಡಲೇ ಪರಿಹಾರ ಸಾಮಗ್ರಿ ತಲುಪಿಸಿ ಅಗತ್ಯ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಶೂನ್ಯ ವೇಳೆಯಲ್ಲಿ ಸದಸ್ಯರು ಮಾಡಿದ ಪ್ರಸ್ತಾಪಗಳಿಗೆ ಸಂಬಂಧಪಟ್ಟ ಸಚಿವರಿಂದ ಉತ್ತರ ಕೊಡಿಸುವುದಾಗಿ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.