ಬೆಂಗಳೂರು: ಐದು ಗ್ಯಾರಂಟಿಗಳಿಗೆ ಕ್ಯಾಬಿನೆಟ್ನಲ್ಲೇ ಒಪ್ಪಿಗೆ ಸಿಕ್ಕಿದ್ದು, ಅದನ್ನು ಜಾರಿ ಮಾಡುತ್ತೇವೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂಧನ ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿ ಡೀಟೇಲ್ಸ್ ತೆಗೆದುಕೊಂಡಿದ್ದೇನೆ. ಇಂದು ಮುಖ್ಯಮಂತ್ರಿಗಳು ಸಭೆ ಮಾಡುತ್ತಿದ್ದಾರೆ. ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿ ನಿರ್ಧಾರ ಮಾಡಲಾಗುತ್ತದೆ. ಸಿಎಂ ಹಾಗೂ ಸಚಿವ ಸಂಪುಟ ಸಭೆ ತೀರ್ಮಾನ ಮಾಡಲಿದೆ ಎಂದು ತಿಳಿಸಿದರು.
ಬಿಜೆಪಿಯವರು ಎಲ್ಲಾ ಭರವಸೆ ಈಡೇರಿಸಿದ್ದರಾ?. 2018 ರಲ್ಲಿ ಯಾವ, ಯಾವ ಭರವಸೆ ಈಡೇರಿಸಿದ್ದಾರೆ. 15 ಲಕ್ಷ ಹಣ ಅಕೌಂಟ್ಗೆ ಹಾಕ್ತೀವಿ ಅಂದ್ರು, ಕೊಟ್ಟಿದ್ದಾರಾ?. ಉಜ್ವಲ ಸ್ಕೀಂನಲ್ಲಿ ಗ್ಯಾಸ್ ಉಚಿತವಾಗಿ ಕೊಡ್ತೀವಿ ಅಂದ್ರು. ಕೊಟ್ಟಿದ್ದಾರಾ?.. 400 ಗ್ಯಾಸ್ ಬದಲಿಗೆ 1200 ಗ್ಯಾಸ್ ಸಿಲಿಂಡರ್ ಕೊಡ್ತಾ ಇದ್ದೀವಿ ಅದಕ್ಕೆ ಮೊದಲು ಉತ್ತರ ಕೊಡಲಿ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಅವರದ್ದೇ ಅಲ್ಲವೇ?. ಏನು ಈಡೇರಿಸಿದ್ದಾರೆ ಎಂದು ಪ್ರಶ್ನಿಸಿದರು. ಎಲ್ಲವನ್ನೂ ಮಾಡುವ ಬಗ್ಗೆ ನಮಗೆ ಇಚ್ಚೆ ಇದೆ. ನಾವು ಕೊಟ್ಟ ಭರವಸೆ ಇದು. ಹಾಗಾಗಿ ನಾವು ಈಡೇರಿಸುತ್ತೇವೆ. ಇದು ಬಿಜೆಪಿ ಕೊಟ್ಟ ಕಾರ್ಯಕ್ರಮ ಅಲ್ಲ. ಷರತ್ತು ಅನ್ವಯ ಮಾಡುವ ಬಗ್ಗೆ ನಾನು ಹೇಳುವುದಕ್ಕೆ ಆಗಲ್ಲ. ನನ್ನ ಅಭಿಪ್ರಾಯ ಕ್ಯಾಬಿನೆಟ್ನಲ್ಲಿ ತಿಳಿಸುತ್ತೇನೆ ಎಂದು ಹೇಳಿದರು.
ಸಚಿವ ಸಂಪುಟ ಸಭೆ ಶುಕ್ರವಾರಕ್ಕೆ ಮುಂದೂಡಿಕೆ: ಈ ನಡುವೆ ಗುರುವಾರ ನಿಗದಿಯಾಗಿದ್ದ ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿದೆ. ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ನಡೆಸಲು ಸಿಎಂ ತೀರ್ಮಾನ ಕೈಗೊಂಡಿದ್ದಾರೆ. ಹಾಗಾಗಿ ನಾಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಘೋಷಣೆಯಾಗುವುದಿಲ್ಲ. ಐದು ಗ್ಯಾರಂಟಿ ಯೋಜನೆಗಳ ಜಾರಿ ಹಿನ್ನೆಲೆಯಲ್ಲಿ ಇಂದು ಎಲ್ಲಾ ಸಚಿವರುಗಳು ಮತ್ತು ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಹಿತಿ ಸಂಗ್ರಹಿಸಿದ್ದಾರೆ.
ಈ ನಡುವೆ ಗ್ಯಾರಂಟಿಗಳ ಬಗ್ಗೆ ಪ್ರತಿಪಕ್ಷಗಳ ಟೀಕೆ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ ಕೆ ಶಿವಕುಮಾರ್ ''ಅವರು ಏನಾದರೂ ಹೇಳಿಕೊಳ್ಳಲಿ. ಸಲಹೆಯಾದರೂ ನೀಡಲಿ, ಒತ್ತಡ ಬೇಕಾದರೂ ಹಾಕಲಿ, ಹೋರಾಟ ಬೇಕಾದರೂ ಮಾಡಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತನಾಡುವವರನ್ನು ತಡೆಯಲು ಸಾಧ್ಯವಿಲ್ಲ. ಬಿಜೆಪಿ ಈ ಹಿಂದೆ ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿದ್ದರು. ಆಗ ಮಾತನಾಡಲಿಲ್ಲ. ರೈತರಿಗೆ 10 ಗಂಟೆ ವಿದ್ಯುತ್ ಉಚಿತ ನೀಡುವುದಾಗಿ ಹೇಳಿದ್ದರು. ಆ ಬಗ್ಗೆಯೂ ಮಾತನಾಡಲಿಲ್ಲ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 600 ಭರವಸೆಗಳ ಪೈಕಿ ಕೇವಲ 50 ಭರವಸೆ ಈಡೇರಿಸಿದ್ದಾರೆ. ಆಗಲೂ ಮಾತನಾಡಲಿಲ್ಲ. ನಾವು ನಮ್ಮ ಯಾಜನೆಗಳನ್ನು ಕ್ರಮಬದ್ಧವಾಗಿ, ನ್ಯಾಯಬದ್ಧವಾಗಿ ಜಾರಿ ಮಾಡಿ ನ್ಯಾಯ ಒದಗಿಸಬೇಕು. ರಾಜ್ಯ ಹಾಗೂ ಮತದಾರ ಉಳಿಯಬೇಕು ಅದು ನಮ್ಮ ಗುರಿ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನನಗೆ ಜನರು 123 ಕ್ಷೇತ್ರ ಕೊಡಲಿಲ್ಲ, ಪಕ್ಷ ವಿಸರ್ಜನೆ ಮಾಡುವುದಿಲ್ಲ: ಟೀಕಾಕಾರರಿಗೆ ಹೆಚ್‌ಡಿಕೆ ತಿರುಗೇಟು