ಬೆಂಗಳೂರು: ಕಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ 15 ವರ್ಷದ ಬಾಲಕಿಯೋರ್ವಳು ಬಲಿಯಾಗಿದ್ದು, ವೈದ್ಯರ ನಿರ್ಲಕ್ಷ್ಯದ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಿನರ್ವ್ ಸರ್ಕಲ್ ಬಳಿ ನಡೆದುಕೊಂಡು ಹೋಗುವಾಗ ಹಿಂಬಂದಿಯಿಂದ ಟ್ಯಾಂಕರ್ ಗುದ್ದಿ ಐಶ್ವರ್ಯ ಅಪಘಾತಕ್ಕೊಳಗಾಗಿದ್ದಳು. ತಕ್ಷಣವೇ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಯಿತು.
ಆದರೆ ವೈದ್ಯರು ಹಣ ಕೊಟ್ಟರೆ ಮಾತ್ರ ಚಿಕಿತ್ಸೆ ನೀಡಲಾಗುವುದು ಎಂದು ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಗಾಯಗೊಂಡಿದ್ದ ಬಾಲಕಿಯನ್ನ ತುರ್ತು ನಿಗಾ ಘಟಕದ ಹಾಸಿಗೆ ಮೇಲೆ ಮಲಗಿಸಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದರು. ಸತತ ಮೂರು ಗಂಟೆಗಳ ಕಾಲ ಚಿಕಿತ್ಸೆ ನೀಡದೇ ಸತಾಯಿಸಿದ್ದಾರೆ. ಪೋಷಕರು ಕೈ ಕಾಲು ಹಿಡಿದು ಚಿಕಿತ್ಸೆ ನೀಡುವಂತೆ ಕೇಳಿಕೊಂಡ್ರೂ ಚಿಕಿತ್ಸೆ ನೀಡಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ಕಡೆಗೂ ಚಿಕಿತ್ಸೆ ವಿಳಂಬವಾಗಿ ಐಶ್ವರ್ಯ ಕೊನೆಯುಸಿರೆಳಿದಿದ್ದಾಳೆ. ಇದರಿಂದಾಗಿ ಆಸ್ಪತ್ರೆ ಮುಂಭಾಗ ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.