ಬೆಂಗಳೂರು : ಹಿಂದೂ ಕಾರ್ಯಕರ್ತರ ಹತ್ಯೆ ಸರಿಯಲ್ಲ. ಹಾಗೆಯೇ ಮಾನವ ಮಾನವರ ನಡುವೆ ಹತ್ಯೆ ಸರಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೂ ಇದನ್ನು ಪ್ರೇರೇಪಣೆ ಮಾಡಬಾರದು. ಸರ್ಕಾರ ಕೂಡ ಈ ಬಗ್ಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಯಾರು ಇಂತಹ ಕೃತ್ಯಕ್ಕೆ ಕೈ ಹಾಕುತ್ತಾರೋ ಅಂತವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು. ಹರ್ಷ ಕೊಲೆ ಆದಾಗ ಅದಕ್ಕೆ ತೀಕ್ಷ್ಣವಾದ ಕ್ರಮ ಆಗದಿರುವುದೇ ಇದಕ್ಕೆಲ್ಲ ಕಾರಣ ಎಂದು ಹೇಳಿದರು.
ದಿನೇಶ್ ಗುಂಡೂರಾವ್ ಅವಿವೇಕಿ ರಾಜಕಾರಣಿ : ಶಾಸಕ ದಿನೇಶ್ ಗುಂಡೂರಾವ್ ಅವರ ಹೇಳಿಕೆ ಗಮನಿಸಿದೆ. ಹೆಣಗಳ ಮೇಲೆ ಬಿಜೆಪಿ ರಾಜಕೀಯ ಮಾಡ್ತಿದೆ ಅಂದಿದ್ದಾರೆ. ಅವರು ಅವಿವೇಕಿ, ರಾಜಕಾರಣ ಮಾಡಲು ಯೋಗ್ಯನಲ್ಲ ಎಂದು ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.
ಇವರು ಇಂತಹ ಘಟನೆಗಳಿಗೆ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿದ್ದಾರೆ. ಕನ್ನಯ್ಯ ಲಾಲ್ ಹತ್ಯೆಗೂ ಇಂತವರೇ ಕಾರಣ. ಇಂತವರಿಗೆ ಜನ ಬುದ್ದಿ ಕಲಿಸಬೇಕು. ನಿಮ್ಮಂತವರ ಓಲೈಕೆ ರಾಜಕಾರಣಿಗಳಿಂದಲೇ ಇಂತಹ ಕೃತ್ಯ ಆಗುತ್ತಿದೆ. ಇದೆಲ್ಲದರ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಇದನ್ನು ಮುಚ್ಚಿಕೊಳ್ಳಲು ಬಿಜೆಪಿಯನ್ನು ಟೀಕಿಸುತ್ತಿರುವುದಾಗಿ ಆರೋಪಿಸಿದರು.
ಓದಿ : ಪ್ರವೀಣ್ ಕೊಲೆಯನ್ನು ಬಿಜೆಪಿಯವರು ಗಲಭೆಗೆ ಬಳಸಿಕೊಂಡಿಲ್ಲ, ಇದು ಪುಣ್ಯ : ಸತೀಶ ಜಾರಕಿಹೊಳಿ