ಬೆಂಗಳೂರು: ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ರನ್ನು ರಾಷ್ಟ್ರೀಯ ತನಿಖಾ ದಳ ಬೆಂಗಳೂರಿನಲ್ಲಿ ಬಂಧಿಸಿದೆ. ಇನ್ನೊಬ್ಬ ಆರೋಪಿ ಸಂದೀಪ್ ನಾಯರ್ನನ್ನು ಕೂಡ ಎನ್ಐಎ ಅರೆಸ್ಟ್ ಮಾಡಿದೆ. ಸ್ವಪ್ನಾ ಸುರೇಶ್ ಜತೆಗೆ ಆಕೆಯ ಕುಟುಂಬ ಸದಸ್ಯರನ್ನೂ ಎನ್ಐಎ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ನಾಳೆ ಸ್ವಪ್ನಾರನ್ನು ಕೊಚ್ಚಿಯಲ್ಲಿರುವ ಎನ್ಐಎ ಕಚೇರಿಗೆ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ.
ಯುಎಇ ದೂತಾವಾಸ ಕಚೇರಿಯ ಮಾಜಿ ಉದ್ಯೋಗಿ, ಕೇರಳದ ಐಟಿ ಇಲಾಖೆಯ ಎಂಜಿನಿಯರ್ ಆಗಿದ್ದ ಸ್ವಪ್ನಾ ಸುರೇಶ್ ತಲೆಮರೆಸಿಕೊಂಡಿದ್ದರು. ಇವರನ್ನು ಸೇವೆಯಿಂದಲೂ ಅಮಾನತು ಮಾಡಲಾಗಿತ್ತು. ಇದು ಬಹಳ ಸೂಕ್ಷ್ಮ ಪ್ರಕರಣವಾಗಿದ್ದರಿಂದ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ, ಎನ್ಐಎಗೆ ಸೂಚನೆ ನೀಡಿತ್ತು. ಸ್ವಪ್ನಾ ಸೇರಿ ಮೂವರ ವಿರುದ್ಧ ಎನ್ಐಎ, ಎಫ್ಐಆರ್ ದಾಖಲು ಮಾಡಿತ್ತು.
ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಸುಮಾರು 15 ಕೋಟಿ ರೂಪಾಯಿ ಮೌಲ್ಯದ 30 ಕೆ.ಜಿ. ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜುಲೈ 5ರಂದು ವಶಪಡಿಸಿಕೊಂಡಿದ್ದರು. ಆ ಬಳಿಕ ಸ್ವಪ್ನಾ ಸುರೇಶ್ ತಲೆಮರೆಸಿಕೊಂಡಿದ್ದರು. ಆದ್ರೂ ಅಜ್ಞಾತ ಸ್ಥಳದಿಂದ ಮಾಧ್ಯಮಗಳಿಗೆ ಧ್ವನಿ ಸಂದೇಶ ಕಳುಹಿಸುತ್ತಲೇ ಇದ್ದರು. ನಾನು ನಿರಪರಾಧಿ, ನನ್ನನ್ನು ಸುಖಾಸುಮ್ಮನೆ ಈ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ಆರೋಪಿಸುತ್ತಿದ್ದರು. ರಾಜಕೀಯ ನಾಯಕರ ಜೊತೆ ಒಳ್ಳೆಯ ಸಂಬಂಧವಿದೆ. ಆದ್ರೆ ಅದನ್ನು ದುರಪಯೋಗ ಪಡಿಸಿಕೊಂಡಿಲ್ಲ ಎಂದು ಹೇಳಿದ್ದರು.
ಈ ಪ್ರಕರಣದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಪಾತ್ರವಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯದ ಹಲವೆಡೆ ಪ್ರತಿಭಟನೆಯನ್ನು ನಡೆಸಿದ್ದರು.