ಬೆಂಗಳೂರು : ಮುಂದಿನ ವರ್ಷ ಕೆಂಪೇಗೌಡರ 514ನೇ ಜಯಂತಿ ಆಚರಿಸುವ ವೇಳೆಗೆ ವಿಧಾನಸೌಧದಲ್ಲಿನ ಸೂಕ್ತ ಸ್ಥಳದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸೋಮವಾರ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಅವರ 513ನೇ ಜಯಂತಿ ಕಾರ್ಯಕ್ರಮ ನಡೆಯಿತು. ಈ ವೇಳೆ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಸಿಎಂ, ಇದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಟೆಂಡರ್ ಕರೆದು ಅಗತ್ಯ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು.

ನಾಡಪ್ರಭು ಕೆಂಪೇಗೌಡರು ಒಬ್ಬ ದೂರದೃಷ್ಟಿಯುಳ್ಳ ನಾಯಕರಾಗಿದ್ದರು. ವಿಧಾನಸೌಧದಲ್ಲಿ ಅನೇಕ ವರ್ಷಗಳ ಹಿಂದೆಯೇ ಪ್ರತಿಮೆ ನಿರ್ಮಾಣವಾಗಬೇಕಿತ್ತು. ಆದರೆ, ಯಾವ ಕಾರಣದಿಂದ ವಿಳಂಬವಾಗಿದೆ ಎಂಬುದು ನನಗೆ ಗೊತ್ತಿಲ್ಲ. ಹಿಂದೆ ರಾಜರು ಸಾಮ್ರಾಜ್ಯವನ್ನು ವಿಸ್ತರಣೆ ಮಾಡುತ್ತಿದ್ದರು. ಆದರೆ, ಕೆಂಪೇಗೌಡರು ನಾಡನ್ನು ಕಟ್ಟುವುದರ ಜೊತೆಗೆ ಬೆಂಗಳೂರನ್ನು ನಿರ್ಮಿಸಿದರು. ಹೀಗಾಗಿ, ಅವರ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಬೇಕು ಎಂದರು.
ಕೆಂಪೇಗೌಡ ಪ್ರತಿಮೆ ಉದ್ಘಾಟನೆಗೆ ಪ್ರಧಾನಿ ಮೋದಿ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಿಸುತ್ತಿರುವ ಕೆಂಪೇಗೌಡರ ಭವ್ಯ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದಲ್ಲೇ ಉದ್ಘಾಟಿಸಲಾಗುವುದು ಎಂದು ತಿಳಿಸಿದ ಸಿಎಂ, 85 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡರ 108 ಅಡಿಯ ಪ್ರತಿಮೆ ಸ್ಥಾಪನೆ ಮಾಡಲಾಗುವುದು. ಜೊತೆಗೆ 25 ಕೋಟಿ ರೂ. ವೆಚ್ಚದಲ್ಲಿ ಇನ್ನಿತರ ಮೂಲಸೌಕರ್ಯ ಕಲ್ಪಿಸಲಾಗುವುದು. ಈ ಪ್ರತಿಮೆ ದೇಶದಲ್ಲೇ ಅತ್ಯಂತ ಭವ್ಯವಾಗಿ ಇರಲಿದೆ ಎಂದು ಹೇಳಿದರು.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ನಡೆದಿಲ್ಲ.. ಸಚಿವ ಮುರುಗೇಶ್ ನಿರಾಣಿ