ಬೆಂಗಳೂರು: ಕೋವಿಡ್ ಹಿನ್ನೆಲೆ ನಾಡಪ್ರಭು ಕೆಂಪೇಗೌಡ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಈ ಸಂದರ್ಭ 31 ಜನರ ಸೇವೆ ಗುರುತಿಸಿ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮೇಯರ್ ಗೌತಮ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಬಳಿಕ ಲಾಲ್ಬಾಗ್ನಲ್ಲಿರುವ ಗಡಿ ಗೋಪುರಕ್ಕೆ ಪೂಜೆ ಸಲ್ಲಿಸಲಾಯಿತು. ಪೂಜೆಯಲ್ಲಿ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್, ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್, ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ಅಧಿಕಾರಿಗಳು, ಸ್ಥಳೀಯ ಕಾರ್ಪೋರೇಟರ್ಗಳು ಭಾಗಿಯಾಗಿದ್ರು. ನಂತರ ಕೋರಮಂಗಲದಲ್ಲಿರುವ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಉಳಿದಂತೆ ಮೇಕ್ರಿ ಸರ್ಕಲ್, ಕೆಂಪಾಂಬುಧಿ ಕೆರೆ, ಮಾಗಡಿ ರಸ್ತೆಯ ಗಡಿಗೋಪುರಗಳಿಗೆ ಪೂಜೆ ಸಲ್ಲಿಸಲಾಯಿತು.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಇದು ಪಾಲಿಕೆಯ ಹಬ್ಬವಾದ ಕಾರಣ ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿದ್ದೆವು. ಆದ್ರೆ ಸದ್ಯ ಕೊರೊನಾ ಹಿನ್ನೆಲೆ ಏಪ್ರಿಲ್ನಲ್ಲಿ ನಡೆಯಬೇಕಿದ್ದ ಹಬ್ಬವನ್ನು ಮುಂದೂಡುತ್ತಾ ಬಂದಿದ್ದು, ಇಂದು ಸರಳವಾಗಿ ನಾಡಪ್ರಭು ದಿನಾಚರಣೆಯನ್ನು ಆಚರಿಸಲಾಯಿತು ಎಂದು ತಿಳಿಸಿದರು.
ಮೇಯರ್ ಗೌತಮ್ ಕುಮಾರ್ ಮಾತನಾಡಿ, ಕೆಂಪೇಗೌಡ ದಿನಾಚರಣೆ ಮಾಡಲು ಸಿಎಂ ಬೆಂಬಲ ಸೂಚಿಸಿದ್ದರಿಂದ ಇಂದು ಸರಳವಾಗಿ ಹಬ್ಬ ಆಚರಿಸಲಾಯಿತು. ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರನ್ನು ನಿರ್ಮಾಣ ಮಾಡಿದವರು ನಾಡಪ್ರಭು ಕೆಂಪೇಗೌಡರು. ಹಾಗಾಗಿ ಬೆಂಗಳೂರನ್ನು ಉಳಿಸುವ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ 31 ಜನ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.