ಬೆಂಗಳೂರು: ಬೆಂಗಳೂರಿನ ಹೃದಯದಂತಿರುವ ಕೆಂಪೇಗೌಡ ಬಸ್ ನಿಲ್ದಾಣವಿರುವ ಜಾಗ ಈ ಹಿಂದೆ ಧರ್ಮಾಂಬುಧಿ ಕೆರೆಯಾಗಿತ್ತು. ಕಾಲಕ್ಕೆ ತಕ್ಕಂತೆ ಮೈದಾನ, ಬಸ್ ನಿಲ್ದಾಣವಾಗಿ ರೂಪಾಂತರವಾಗುತ್ತ ಬಂದ ಈ ಸ್ಥಳಕ್ಕೆ ತನ್ನದೇ ಆದ ಇತಿಹಾಸವಿದೆ. ಆಗಿನ ಧರ್ಮಾಂಬುಧಿ ಕೆರೆಯೇ ಸದ್ಯ ಕೆಂಪೇಗೌಡ ಬಸ್ ನಿಲ್ದಾಣವಾಗಿದ್ದು, ಈ ಬಸ್ ನಿಲ್ದಾಣ ಈಗ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ.
ಒಂದಾನೊಂದು ಕಾಲದಲ್ಲಿ ಕೆರೆಯ ಜಾಗವಾಗಿದ್ದ ಕೆಂಪೇಗೌಡ ಬಸ್ ನಿಲ್ದಾಣವನ್ನು ಮೊದಲಿಗೆ ಮೈಸೂರು ರಾಜ್ಯ ರಸ್ತೆ ಸಾರಿಗೆ ನಿಗಮ (ಎಂಎಸ್ಆರ್ಟಿಸಿ) ಎಂದು ಕರೆಯಲಾಗುತ್ತಿತ್ತು. ನಂತರ ಅದನ್ನೇ ಕೆಂಪೇಗೌಡ ಬಸ್ ನಿಲ್ದಾಣ ಎಂದು ಬದಲಾಯಿಸಲಾಯಿತು. ಕೆರೆಯ ಜಾಗವಾಗಿದ್ದ ಈ ಸ್ಥಳ ನಂತರ ಆಟದ ಮೈದಾನವಾಗಿಯೂ ಮಾರ್ಪಾಡಾಗಿತ್ತು ಎಂಬ ಮಾತುಗಳು ಕೇಳಿ ಬಂದಿದೆ.
ಧರ್ಮಾಂಬುಧಿ ಕೆರೆಗೆ ವಿವೇಕಾನಂದರು:
ಸುಮಾರು 4 ತಿಂಗಳಿಗೂ ಹೆಚ್ಚು ಕಾಲ ಬೆಂಗಳೂರಿನಲ್ಲಿ ನೆಲೆಸಿದ್ದ ಸ್ವಾಮಿ ವಿವೇಕಾನಂದರು ಪ್ರತಿನಿತ್ಯ ಬಂದು ಧರ್ಮಾಂಬುಧಿ ಕೆರೆಯಲ್ಲಿ ಮಿಂದೆಳುತ್ತಿದ್ದರಂತೆ. ತುಳುಸಿ ತೋಟದಲ್ಲಿ ಧಾನ್ಯ ಮಾಡಿ, ಲಾಲ್ದಾಸ್ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದರಂತೆ ಎಂದು ಚಿಕ್ಕಪೇಟೆಯ ಮಾಜಿ ಪಾಲಿಕೆ ಸದಸ್ಯ ಶಿವಕುಮಾರ್ ಮಾಹಿತಿ ನೀಡಿದರು.
ಧರ್ಮಾಂಬುಧಿ ಕೆರೆಯು ಬತ್ತಿ ಹೋದ ನಂತರ ಅದು ಸುಭಾಷ್ ಮೈದಾನವಾಗಿ ಸಾಕಷ್ಟು ಕಾರ್ಯಕ್ರಮಗಳು ನಡೆದಿದೆಯಂತೆ. ಸಮಾವೇಶ, ವಸ್ತು ಪ್ರದರ್ಶನ, ನಾಟಕ ಪ್ರದರ್ಶನ ಸೇರಿದಂತೆ ಇತರೆ ಕಾರ್ಯಕ್ರಮಗಳು ಇಲ್ಲಿ ನಡೆದಿದೆ ಎನ್ನುತ್ತಾರೆ ಶಿವಕುಮಾರ್.