ಬೆಂಗಳೂರು: ಕಳೆದ 5 ದಿನಗಳಿಂದ ಸಿಲಿಕಾನ್ ಸಿಟಿ ಸೇರಿದಂತೆ ಕರ್ನಾಟಕದ ಅಲ್ಲಲ್ಲಿ ಮಳೆಯಾಗುತ್ತಿದೆ. ಇಂದಿನಿಂದ ಆ.31ರವರೆಗೆ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಾಳೆಯವರೆಗೂ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಮೀನುಗಾರರಿಗೆ ಎಚ್ಚರಿಕೆ: ಕರಾವಳಿ ಜಿಲ್ಲೆಯ ಸಮುದ್ರ ಭಾಗದಲ್ಲಿ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಇದರಿಂದ ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸಿಲಿಕಾನ್ ಸಿಟಿಯಲ್ಲಿ ಮಳೆ: ನಗರದಲ್ಲಿ ಸತತ ಜಿಟಿ ಜಿಟಿ ಮಳೆಯಾಗುತ್ತಿದೆ. ಕೆ.ಆರ್ ಮಾರ್ಕೆಟ್, ಕಾರ್ಪೊರೇಷನ್, ಶಾಂತಿ ನಗರ, ಜಯನಗರ, ವಿಜಯನಗರ, ಮಲ್ಲೇಶ್ವರಂ, ಯಶವಂತಪುರ, ರಾಜಾಜಿ ನಗರ, ಎಂ.ಜಿ ರಸ್ತೆ, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವೆಡೆ ಮಳೆ ಸುರಿಯುತ್ತಿದೆ.
ವಾಹನ ಸವಾರರ ಪರದಾಟ: ಇಂದು ಮುಂಜಾನೆಯಿಂದಲೇ ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಆರಂಭವಾಗಿದೆ. ಕೆಲ ದಿನಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದಾಗಿ ಕಚೇರಿ, ಅಂಗಡಿಗಳಿಗೆ ಹೊರಟ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮುಗಿಯದ ರಸ್ತೆ ಗುಂಡಿ ಸಮಸ್ಯೆ.. ಹೊಸದಾಗಿ 4545 ರಸ್ತೆ ಗುಂಡಿಗಳು ಪತ್ತೆ