ಬೆಂಗಳೂರು : ಆನೆ ಕಾರಿಡಾರ್ಗಳ ಸಂರಕ್ಷಣೆಯ ಕಾರಣದಿಂದಾಗಿ ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಹುಲಿಗಳ ಸಂರಕ್ಷಣೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಕಳೆದ ಮೂರು ವರ್ಷಗಳಲ್ಲಿ ಹುಲಿ ಮತ್ತು ಆನೆ ಯೋಜನೆಗೆ 1,259 ಕೋಟಿ ರೂಗಳನ್ನು ವ್ಯಯ ಮಾಡಲಾಗಿದೆ. ಸದ್ಯ ರಾಜ್ಯದಲ್ಲಿ ಬರೋಬ್ಬರಿ 6,394 ಆನೆಗಳಿದ್ದು, 563 ಹುಲಿಗಳಿವೆ. ಹುಲಿ ಮತ್ತು ಆನೆಗಳ ರಕ್ಷಣೆಗೆ ಸರ್ಕಾರ ಮಾಡುತ್ತಿರುವ ಯೋಜನೆಗಳ ಕುರಿತ ವರದಿ ಇಲ್ಲಿದೆ.
ಆನೆ ಸಂರಕ್ಷಣೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ : ಆನೆಗಳ ಸಂರಕ್ಷಣೆ ವಿಚಾರದಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 1,116 ಆನೆಗಳಿದ್ದರೆ, ನಾಗರಹೊಳೆಯಲ್ಲಿ 831, ಮಲೆ ಮಹದೇಶ್ವರ ವನ್ಯಜೀವಿ ರಕ್ಷಿತಾರಣ್ಯದಲ್ಲಿ 706, ಬಿಆರ್ಟಿ ಹುಲಿ ರಕ್ಷಿತಾರಣ್ಯದಲ್ಲಿ 619, ಭದ್ರಾ ಹುಲಿ ಸಂಕ್ಷಿತಾರಣ್ಯದಲ್ಲಿ 445, ಕಾವೇರಿ ವನ್ಯಜೀವಿ ರಕ್ಷಿತಾರಣ್ಯದಲ್ಲಿ 236, ಮಡಿಕೇರಿ ವಿಭಾಗದಲ್ಲಿ 214, ಬನ್ನೇರುಘಟ್ಟ ಹಾಗು ಶಿವಮೊಗ್ಗದಲ್ಲಿ ತಲಾ 127, ಮಡಿಕೇರಿ ವನ್ಯಜೀವಿ ರಕ್ಷಿತಾರಣ್ಯದಲ್ಲಿ 113 ಆನೆಗಳಿವೆ. ಮೈಸೂರು ಆನೆ ಮೀಸಲು ಪ್ರದೇಶ 14,757 ಚದರ ಕಿಲೋಮೀಟರ್ ಇದ್ದು, ಇಲ್ಲಿಯೇ ಬಹುತೇಕ ಆನೆಗಳು ಕಂಡು ಬರುತ್ತವೆ. ದಾಂಡೇಲಿ ಆನೆ ಮೀಸಲು ಪ್ರದೇಶ 1,231 ಚದರ ಕಿಲೋಮೀಟರ್ ವಿಸ್ತಾರವಾಗಿದ್ದು, ಇಲ್ಲಿ 36 ಆನೆಗಳಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹುಲಿ ಸಂರಕ್ಷಣೆಯಲ್ಲಿ ಎರಡನೇ ಸ್ಥಾನ : ರಾಷ್ಟ್ರೀಯ ಹುಲಿ ಗಣತಿ -2022ರ ವರದಿಯ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 563 ಹುಲಿಗಳಿವೆ, 2023ನೇ ಸಾಲಿನಲ್ಲಿ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ನೇರ ವೀಕ್ಷಣೆಯಿಂದ ನಡೆದ ಆನೆ ಗಣತಿಯ ವರದಿಯಂತೆ, ಕರ್ನಾಟಕದಲ್ಲಿ ಅಂದಾಜು 6,395 ಆನೆಗಳಿವೆ. ಈ ವರದಿಯ ಅನುಸಾರ ಆನೆಗಳ ಸಂಖ್ಯೆ ಇಡಿ ದೇಶದಲ್ಲಿ ಕರ್ನಾಟಕದಲ್ಲಿಯೇ ಹೆಚ್ಚಾಗಿದ್ದು, ಮೊದಲ ಸ್ಥಾನದಲ್ಲಿದೆ. ಹುಲಿಗಳ ವಿಚಾರದಲ್ಲಿಯೂ ರಾಜ್ಯ ಹಿಂದೆ ಬಿದ್ದಿಲ್ಲ. ಮಧ್ಯಪ್ರದೇಶ ರಾಜ್ಯ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಕರ್ನಾಟಕವಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ.
ಹುಲಿ ಮತ್ತು ಆನೆ ಯೋಜನೆಗೆ ಮಾಡಿರುವ ಖರ್ಚು : ಇನ್ನು, ಹುಲಿ ಮತ್ತು ಆನೆಗಳ ರಕ್ಷಣೆಗಾಗಿ ಪ್ರತಿ ವರ್ಷ ನೂರಾರು ಕೋಟಿ.ರೂಗಳನ್ನು ವ್ಯಯ ಮಾಡಲಾಗುತ್ತಿದೆ. ಕೇಂದ್ರ ಪುರಸ್ಕೃತ ಯೋಜನೆಗಳ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳೆರಡೂ ಅನುದಾನವನ್ನು ವಿನಿಯೋಗಿಸುತ್ತಿವೆ. 2020-21ರಲ್ಲಿ ಹುಲಿ ಯೋಜನೆಗೆ ಮಾಡಿರುವ ವೆಚ್ಚ 445.5 ಕೋಟಿ, ಆನೆ ಯೋಜನೆಗೆ 71.1 ಕೋಟಿ ಸೇರಿ ಒಟ್ಟು 516.5 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. 2021-22ರಲ್ಲಿ ಹುಲಿ ಯೋಜನೆಗೆ 379.1 ಕೋಟಿ, ಆನೆ ಯೋಜನೆಗೆ 43.1 ಕೋಟಿ ಸೇರಿ 422.3 ಕೋಟಿ ವ್ಯಯಿಸಲಾಗಿದೆ. 2022-23 ರಲ್ಲಿ ಹುಲಿ ಯೋಜನೆಗೆ 300.1 ಕೋಟಿ ಆನೆ ಯೋಜನೆಗೆ 17.1 ಕೋಟಿ ಸೇರಿ 317.2 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. 2023-24ರಲ್ಲಿ ಈವರೆಗೆ ಹುಲಿ ಮತ್ತು ಆನೆ ಯೋಜನೆಗೆ 169.6 ಕೋಟಿ ರೂವನ್ನು ವ್ಯಯ ಮಾಡಲಾಗಿದೆ. ಕಳೆದ ಮೂರು ವರ್ಷದಲ್ಲಿ 1259.43 ಕೋಟಿ. ರೂ.ಗಳನ್ನು ವ್ಯಯ ಮಾಡಲಾಗಿದೆ. ಇದರಲ್ಲಿ ಕೇಂದ್ರದ ಪಾಲು 777.3 ಕೋಟಿ ಆಗಿದ್ದರೆ ರಾಜ್ಯದ ಪಾಲು 481.8 ಕೋಟಿ ರೂ.ಗಳಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಮೂರು ವರ್ಷದ ಅಂಕಿ ಅಂಶಗಳನ್ನು ನೋಡಿದರೆ ಅನುದಾನದ ಪ್ರಮಾಣದಲ್ಲಿ ಇಳಿಕೆಯಾಗುತ್ತಾ ಬರುತ್ತಿದೆ. ಇದು ಸ್ವಲ್ಪ ಆತಂಕಕ್ಕೆ ಕಾರಣವಾದರೂ ಅಗತ್ಯಕ್ಕೆ ತಕ್ಕ ರೀತಿಯಲ್ಲಿ ಅನುದಾನ ಹೆಚ್ಚಿಸುವ ನಿರೀಕ್ಷೆ ಅರಣ್ಯ ಇಲಾಖೆಗಿದೆ.
ಮೂರು ವರ್ಷದಲ್ಲಿ ಮೃತಪಟ್ಟ ಆನೆ, ಹುಲಿಗಳು ಸಂಖ್ಯೆ : 2020-21ರಲ್ಲಿ 14 ಹುಲಿ, 74 ಆನೆ ಮೃತಪಟ್ಟಿವೆ. 2021-22 ರಲ್ಲಿ 19 ಹುಲಿ, 90 ಆನೆ ಮತ್ತು 2022-23ನೇ ಸಾಲಿನಲ್ಲಿ 16 ಹುಲಿ, 73 ಆನೆಗಳು ಮೃತಪಟ್ಟಿವೆ. ಮೂರು ವರ್ಷದಲ್ಲಿ ಒಟ್ಟಾರೆ 49 ಹುಲಿ ಮತ್ತು 237 ಆನೆಗಳು ಮೃತಪಟ್ಟಿರುವುದಾಗಿ ವರದಿ ಲಭ್ಯವಾಗಿದೆ. ಇನ್ನು ಈ ವರ್ಷದಲ್ಲಿ ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟ ಅರ್ಜುನ ಸೇರಿದಂತೆ 238 ಆನೆಗಳು ಮೃತಪಟ್ಟಂತಾಗಲಿದೆ.
ಹುಲಿ, ಆನೆ ದಾಳಿಯಲ್ಲಿ ಮೃತರ ಸಂಖ್ಯೆ ಮತ್ತು ಪರಿಹಾರ ಮೊತ್ತ : ಅದೇ ರೀತಿ 2020-21 ರಲ್ಲಿ 4 ಜನರು ಹುಲಿ ದಾಳಿಯಿಂದ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡಲಾಗಿದೆ. 2021-22 ರಲ್ಲಿ ಇಬ್ಬರು ಮೃತಪಟ್ಟಿದ್ದು 15 ಲಕ್ಷ ಪರಿಹಾರ ನೀಡಲಾಗಿದೆ. 2022-23ರಲ್ಲಿ 5 ಮಂದಿ ಮೃತಪಟ್ಟಿದ್ದು, 60 ಲಕ್ಷ ಪರಿಹಾರ ನೀಡಲಾಗಿದೆ. ಅದೇ ರೀತಿ ಆನೆ ದಾಳಿಯಿಂದ 2020-21 ರಲ್ಲಿ 26 ಮಂದಿ ಮೃತಪಟ್ಟಿದ್ದು, 1.95 ಕೋಟಿ ಪರಿಹಾರ ನೀಡಲಾಗಿದೆ. 2021-22ರಲ್ಲಿ 28 ಜನರು ಮೃತಪಟ್ಟಿದ್ದು, 2.35 ಕೋಟಿ ಪರಿಹಾರ ನೀಡಲಾಗಿದೆ. 2022-23ರಲ್ಲಿ 30 ಜನ ಮೃತರಾಗಿದ್ದು 2.67 ಕೋಟಿ ಪರಿಹಾರ ನೀಡಲಾಗಿದೆ.
ಬೇರೆ ರಾಜ್ಯಕ್ಕೆ ಬಂಧಿತ ಆನೆಗಳನ್ನು ರವಾನೆ ಮಾಡುವ ಪರಿಪಾಠ ಇದೆ. ಅದರಂತೆ ಕಳೆದ ಮೂರು ವರ್ಷದಲ್ಲಿ ಕೇವಲ ಒಮ್ಮೆ ಮಾತ್ರ ಈ ರೀತಿ ಕಳುಹಿಸಲಾಗಿದೆ. 2020-21 ಮತ್ತು 2021-22ರಲ್ಲಿ ಯಾವುದೇ ಆನೆಗಳನ್ನು ಕಳುಹಿಸಲಾಗಿಲ್ಲ. ಆದರೆ, 2022-23ರಲ್ಲಿ 4 ಆನೆ ಉತ್ತರ ಪ್ರದೇಶಕ್ಕೆ ಮತ್ತು 14 ಆನೆಗಳನ್ನು ಮಧ್ಯಪ್ರದೇಶಕ್ಕೆ ಕಳುಹಿಸಿಕೊಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ.
ಹುಲಿ ಯೋಜನೆಯಡಿ ಹುಲಿ ಸಂರಕ್ಷಿತ ಪ್ರದೇಶಗಳು ಹಾಗು ಹುಲಿ ಯೋಜನೆಯ ವ್ಯಾಪ್ತಿಯಲ್ಲಿ ಹುಲಿ ರಕ್ಷಣಾದಳಗಳ ಸ್ಥಾಪನೆ, ಮಳೆಗಾಲದಲ್ಲಿ ವಿಶೇಷ ಗಸ್ತು ತಿರುಗುವಿಕೆ, ಮುಂಚೂಣಿ ಸಿಬ್ಬಂದಿ ವರ್ಗದವರ ವಸತಿ ಗೃಹಗಳ ನಿರ್ಮಾಣ ಮತ್ತು ನಿರ್ವಹಣೆ, ಕಳ್ಳಬೇಟೆ ತಡೆ ಶಿಬಿರಗಳ ಸ್ಥಾಪನೆ ಹಾಗೂ ನಿರ್ವಹಣೆ, ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ, ನಿಸ್ತಂತು ಉಪಕರಣಗಳ ಮತ್ತು ವಾಹನಗಳ ನಿರ್ವಹಣೆ, ಬೆಂಕಿಯಿಂದ ರಕ್ಷಣೆ, ವನ್ಯಪ್ರಾಣಿಗಳಿಗೆ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸುವುದು ಹಾಗೂ ಪ್ರಚಾರ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು, ಹುಲಿಗಳ ಆವಾಸ ಸ್ಥಾನ ಹಾಗು ಪರಿಸರ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹುಲಿ ಯೋಜನೆಯಡಿ ಇಲಾಖೆ ಮಾಡುತ್ತಿರುವ ಕಾರ್ಯವೈಖರಿಗೆ ಬಗ್ಗೆ ಸಚಿವರು ಮಾಹಿತಿ ನೀಡಿದ್ದಾರೆ.
ಆನೆ ಯೋಜನೆಯಡಿಯಲ್ಲಿ ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿ ಅಭಯಾರಣ್ಯಗಳು ಮತ್ತು ಪ್ರಾದೇಶಿಕ ಅರಣ್ಯ ಪ್ರದೇಶಗಳಿಗೆ ಸೇರಿದ ಮೀಸಲು ಅರಣ್ಯಗಳಲ್ಲಿ ಆನೆಗಳ ಆವಾಸ ಸ್ಥಾನಗಳ ಸಂರಕ್ಷಣೆ, ಆನೆ ನಿರೋಧಕ ಕಂದಕ, ಸೌರ ವಿದ್ಯುತ್ ಬೇಲಿಗಳ ನಿರ್ಮಾಣ ಮತ್ತು ನಿರ್ವಹಣೆ, ಕ್ಷಿಪ್ರ ಸ್ಪಂದನ ತಂಡಗಳ ರಚನೆ, ಕಳ್ಳ ಭೇಟೆ ತಡೆ ಶಿಬಿರಗಳು, ಆನೆ ಹಿಮ್ಮೆಟ್ಟಿಸುವ ಶಿಬಿರಗಳ ರಚನೆ ಮತ್ತು ನಿರ್ವಹಣೆ, ಹಾವಳಿ ನಡೆಸುವ ಪುಂಡಾನೆಗಳ ಸೆರೆ ಹಿಡಿದು ಸ್ಥಳಾಂತರಿಸುವುದು, ಕಾಡಾನೆಗಳನ್ನು ಸೆರೆಹಿಡಿಯಲು ಬಳಸುವ ಔಷಧಿ ಮತ್ತು ಉಪಕರಣಗಳ ಖರೀದಿ, ಅನಾರೋಗ್ಯ ಮತ್ತು ಗಾಯಗೊಂಡ ಆನೆಗಳ ಶುಶ್ರೂಷೆ ಮಾಡುವುದು, ಮರಣೋತ್ತರ ಪರೀಕ್ಷೆ, ಮುಂತಾದ ವಿಚಾರಗಳಲ್ಲಿ ಪಶುವೈದ್ಯರಿಗೆ ತರಬೇತಿ ನೀಡುವುದು, ಆನೆ ಆವಾಸ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತ ಅವುಗಳ ಸಂರಕ್ಷಣೆ ಮತ್ತು ಸಂತತಿ ಉಳಿಸುವಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಇನ್ನಿತರ ಅಗತ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ರಾಜ್ಯದಲ್ಲಿ ಹುಲಿ ಮತ್ತು ಆನೆಗಳ ಸಂರಕ್ಷಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವ ವಿಶ್ವಾಸವನ್ನು ಸಚಿವ ಈಶ್ವರ ಖಂಡ್ರೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಶೇ.80 ರಷ್ಟು ಪೊಲೀಸ್ ಸಿಬ್ಬಂದಿಗೆ ವಸತಿ ಗೃಹ, ಗೃಹ ರಕ್ಷಕರ ಕರ್ತವ್ಯ ಭತ್ಯೆ ಪರಿಷ್ಕರಣೆ : ಡಾ.ಜಿ.ಪರಮೇಶ್ವರ್