ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿ ಚರಣ್ ರೆಡ್ಡಿ ನಿಧನಕ್ಕೆ, ಐಪಿಎಸ್ ವಲಯ, ರಾಜಕಾರಣಿಗಳು ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮಾತನಾಡಿ, ಚರಣ್ ರೆಡ್ಡಿ ಕೇವಲ ಒಬ್ಬ ಅಧಿಕಾರಿಯಾಗಿರಲಿಲ್ಲ. ಅವರು ನನ್ನ ಆತ್ಮೀಯ ಸ್ನೇಹಿತರೂ ಆಗಿದ್ದವರು ಎಂದು ಕಂಬನಿ ಮಿಡಿದರು. ಅವರು ಕಳೆದ 13 ವರ್ಷಗಳಿಂದ ಈ ಕಾಯಿಲೆ ವಿರುದ್ಧ ಹೋರಾಡ್ತಾ ಇದ್ರು. ಆದರೆ ಇವತ್ತು ಆ ಭಗವಂತನ ಎದುರು ಶರಣಾಗಿದ್ದಾರೆ ಎಂದರು.
ಚರಣ್ ರೆಡ್ಡಿ ಲೋಕಾಯುಕ್ತದಲ್ಲಿ, ಸಿಐಡಿಯಲ್ಲಿ ಸಿಬಿಐನಲ್ಲಿ ಉತ್ತಮ ಕೆಲಸ ಮಾಡಿದ್ದು, ಅವರೊಬ್ಬ ಅತ್ಯುತ್ತಮ ಅಧಿಕಾರಿ ಅಂತಹ ಅಧಿಕಾರಿಗಳು ಇಂದು ಸಿಗುತ್ತಿಲ್ಲ ಎಂದರು . ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ, ಅವರ ಆಗಲಿಕೆಯನ್ನ ಸಹಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದ್ರು.
ಇನ್ನು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೆಶ್ವರ್ ಮಾತನಾಡಿ, ಇಂದು ರಾಜ್ಯದ ಒಬ್ಬ ಪ್ರಾಮಾಣಿಕ ದಕ್ಷ ಅಧಿಕಾರಿಯನ್ನು ಕಳೆದುಕೊಂಡಿದ್ದೇವೆ. ಅವರ ಜೊತೆಯಲ್ಲಿ ಕೆಲಸ ಮಾಡುವ ಅವಕಾಶ ನನಗೆ ಗೃಹ ಸಚಿವನಾಗಿದ್ದಾಗ ಸಿಕ್ಕಿತ್ತು ಎಂದು ನೆನೆದರು. ಅವರನ್ನು ಹತ್ತಿರದಿಂದ ನಾನು ಕಂಡಿದ್ದೇನೆ. ಚರಣ್ ರೆಡ್ಡಿ ಒಬ್ಬ ಪ್ರಾಮಾಣಿಕ ಅಧಿಕಾರಿ. ಇಲಾಖೆಯಲ್ಲಿ ಅವರನ್ನು ಮಾದರಿಯಾಗಿಟ್ಟುಕೊಂಡು ಎಲ್ಲರೂ ಕೆಲಸ ಮಾಡಲಿ ಎಂದರು.