ಬೆಂಗಳೂರು: ಕೇಂದ್ರ, ರಾಜ್ಯ ಸರ್ಕಾರಗಳು ರೈತ ವಿರೋಧಿ ಮಸೂದೆ ಜಾರಿ ಮಾಡಿವೆ ಎಂದು ಆರೋಪಿಸಿ ಕರ್ನಾಟಕ ಬಂದ್ಗೆ ಕರೆ ಕೊಟ್ಟ ಹಿನ್ನೆಲೆ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಶಿವರಾಮೇಗೌಡ ನೇತೃತ್ವದಲ್ಲಿ ಮಲ್ಲೇಶ್ವರಂನ ಕುವೆಂಪು ಪುತ್ಥಳಿ ಮುಂದೆ ಜಮಾಯಿಸಿದ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಸ್ತೆ ತಡೆಗೆ ಮುಂದಾದಾಗ ಉತ್ತರ ವಿಭಾಗದ ಡಿಸಿಪಿ ದರ್ಮೇಂದ್ರ ಕುಮಾರ್ ಮೀನಾ ಹಾಗೂ ಡಿಸಿಪಿ ನಿಶಾ ಜೇಮ್ಸ್ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದ್ರು.
ಆದರೆ ಪೊಲೀಸರ ಮಾತಿಗೆ ಜಗ್ಗದೆ ರಸ್ತೆ ಮಧ್ಯದಲ್ಲೇ ಕುಳಿತು ಕರವೇ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಈ ವೇಳೆ ಶಿವರಾಮೇಗೌಡ ಮತ್ತು ಕೆಲವರನ್ನು ಪೊಲೀಸರು ವಶಕ್ಕೆ ಪಡೆದರು.