ಬೆಂಗಳೂರು: ಚುನಾವಣಾ ಅಖಾಡದಲ್ಲಿ ಕುರುಡು ಕಾಂಚಾಣದ ಅಬ್ಬರ ಜೋರಾಗಿದೆ. ರಾಜ್ಯ ಚುನಾವಣಾ ಆಯೋಗ ಈವರೆಗೆ ಬರೋಬ್ಬರಿ 265.20 ಕೋಟಿ ರೂ. ಮೌಲ್ಯದ ಅಕ್ರಮ ನಗದು, ಮದ್ಯ, ವಸ್ತುಗಳನ್ನು ಜಪ್ತಿ ಮಾಡಿದೆ. ಆಯೋಗವು ಒಟ್ಟು 88.03 ಕೋಟಿ ರೂ. ನಗದು, 20.62 ಕೋಟಿ ಮೊತ್ತದ ಉಚಿತ ಉಡುಗೋರೆ, 59.92 ಕೋಟಿ ಮೌಲ್ಯದ 15.73 ಲಕ್ಷ ಲೀಟರ್ ಮದ್ಯ, 75.15 ಕೋಟಿ ಮೌಲ್ಯದ ಬಂಗಾರ, 4.32 ಕೋಟಿ ಮೌಲ್ಯದ ಬೆಳ್ಳಿ ಹಾಗೂ 17.14 ಕೋಟಿ ಮೊತ್ತದ 1,285 ಕೆ.ಜಿ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದೆ.
2,036 ಎಫ್ಐಆರ್ ದಾಖಲು: ನಗದು, ಮದ್ಯ, ಮಾದಕ ದ್ರವ್ಯ, ಬೆಲೆ ಬಾಳುವ ಲೋಹ ಮತ್ತು ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡಿರುವ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು 2,036 ಪ್ರಥಮ ತನಿಖಾ ವರದಿ (FIR) ದಾಖಲಿಸಿದ್ದಾರೆ. ಚುನಾವಣೆ ಘೋಷಣೆಯಾದ ದಿನಾಂಕದಿಂದ ಇಲ್ಲಿಯವರೆಗೆ ಒಟ್ಟಾರೆ 69,778 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದು ಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 5,080 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ 8,572 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ.
13,640 ಜಾಮೀನು ರಹಿತ ವಾರಂಟ್: ಚುನಾವಣೆ ಘೋಷಣೆಯಾದ ದಿನದಿಂದ ಈವರೆಗೆ 13,640 ಜಾಮೀನು ರಹಿತ ವಾರಂಟ್‌ಗಳನ್ನು ಜಾರಿಗೊಳಸಲಾಗಿದೆ. ಅಬಕಾರಿ ಇಲಾಖೆ 2,600 ಗಂಭೀರ ಪ್ರಕರಣಗಳನ್ನು ಹಾಗೂ 2,244 ಮದ್ಯದ ಪರವಾನಿಗೆ ಉಲ್ಲಂಘಿಸಿದ ಪ್ರಕರಣಗಳು, 79 ಎನ್‌ಡಿಪಿಎಸ್ ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ ಒಟ್ಟು 19,122 ಪ್ರಕರಣಗಳನ್ನು ದಾಖಲಿಸಿದೆ. ಮತ್ತು 1,776 ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿಕೊಂಡಿದೆ.
ವಿಚಕ್ಷಣ ದಳ ಬೆಂಗಳೂರು ನಗರ ಪೂರ್ವ ಜಿಲ್ಲೆಯ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ 53,85,000 ಮೌಲ್ಯದ ಮಾದಕ ದ್ರವ್ಯ ವಶಪಡಿಸಿಕೊಂಡಿದೆ. ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ 98,00,000 ನಗದು ವಶಪಡಿಸಿಕೊಂಡಿದೆ. ಸ್ಥಿರ ಕಣ್ಗಾವಲು ತಂಡ ಬೆಂಗಳೂರು ಗ್ರಾಮೀಣ ಜಿಲ್ಲೆಯ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 32,65,577 ನಗದು ಹಾಗೂ ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ 70,00,000 ನಗದು ವಶಪಡಿಸಿಕೊಂಡಿದೆ.
ಇದನ್ನೂ ಓದಿ: ಚುನಾವಣಾ ಆಯೋಗದ ಭರ್ಜರಿ ಬೇಟೆ: ₹9.29 ಕೋಟಿ ಮೌಲ್ಯದ ನಗದು, ವಸ್ತುಗಳ ಜಪ್ತಿ
ವಿಧಾನಸಭೆ ಚುನಾವಣಾ ಸಿದ್ಧತೆ: ರಾಜ್ಯ ವಿಧಾನಸಭಾ ಅವಧಿಯು ಮೇ 24ಕ್ಕೆ ಅಂತ್ಯವಾಗಲಿದೆ. ರಾಜ್ಯದಲ್ಲಿ ಒಟ್ಟು ಜನಸಂಖ್ಯೆ 6.1 ಕೋಟಿ ಇದೆ. ಇದರಲ್ಲಿ ಮಹಿಳೆಯರು 3.01 ಕೋಟಿ ಹಾಗೂ ಪುರುಷರು 3.01 ಕೋಟಿ ಇದ್ದಾರೆ. ಈ ಪೈಕಿ ಒಟ್ಟಾರೆ 5.21 ಕೋಟಿ ಮತದಾರರು ಇದ್ದು, 2.62 ಕೋಟಿ ಪುರುಷ ಮತದಾರರು, 2.59 ಕೋಟಿ ಮಹಿಳೆಯರು ಮತ ಹಕ್ಕು ಹೊಂದಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಈಚೆಗಷ್ಟೇ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಚುನಾವಣಾ ಅಕ್ರಮ: ಒಟ್ಟು 161.66 ಕೋಟಿ ನಗದು, ಮದ್ಯ, ವಸ್ತುಗಳ ಜಪ್ತಿ