ಬೆಂಗಳೂರು: ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ತಂದೆಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 10 ವರ್ಷಗಳ ಜೈಲು ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. 216ರಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದು ಕೋರಿ ಆರೋಪಿ ತಂದೆ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್ ಮುದಗಲ್ ಅವರ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಘಟನೆ ಸಂಬಂಧ ದೂರು ದಾಖಲಿಸುವಲ್ಲಿ ವಿಳಂಬವಾಗಿದೆ ಹಾಗೂ ಸಂತ್ರಸ್ತೆ ಹೇಳಿಕೆಯಲ್ಲಿ ಸ್ಪಷ್ಟತೆ ಇಲ್ಲ. ಹೀಗಾಗಿ ಪ್ರಕರಣದಲ್ಲಿ ವಿಧಿಸಿರುವ ಶಿಕ್ಷೆ ರದ್ದು ಪಡಿಸುವಂತೆ ಆರೋಪಿ ಕೋರಿದ್ದಾನೆ. ಆದರೆ, ಸಂತ್ರಸ್ತ ಬಾಲಕಿಯ ತಾಯಿ ತೀವ್ರ ಅಸ್ವಸ್ಥ ಸ್ಥಿತಿಯಲ್ಲಿದ್ದರೆ, ಅಜ್ಜಿ ತೀರಿಕೊಂಡಿದ್ದಾರೆ. ಹೀಗಾಗಿ ಸಂತ್ರಸ್ತ ಬಾಲಕಿಯ ಚಿಕ್ಕಮ್ಮ ದೂರು ದಾಖಲಿಸಿದ್ದಾರೆ. ಇನ್ನು, ದೂರು ದಾಖಲಿಸುವಲ್ಲಿ ವಿಳಂಬವಾಗಿದೆ ಎಂಬ ಕಾರಣಕ್ಕೆ, ಪ್ರಾಸಿಕ್ಯೂಷನ್ ದುರ್ಬಲವಾಗಿದೆ ಎನ್ನುವಂತಿಲ್ಲ.
ಹಾಗೆಯೇ, ಎಫ್ಐಆರ್ ವಿಶ್ವಕೋಶವಾಗಿರಬೇಕು ಎಂದು ಬಯಸಲಾಗದು. ಸಂತ್ರಸ್ತ ಬಾಲಕಿಯ ಹೇಳಿಕೆಯಲ್ಲಿ ಕೊಂಚ ಏರುಪೇರಿದೆ ಎಂಬ ಕಾರಣಕ್ಕೆ ಒಟ್ಟಾರೆ ಆರೋಪಗಳು ಸುಳ್ಳಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು, ವಿಚಾರಣಾ ನ್ಯಾಯಾಲಯ ಆರೋಪಿಗೆ ವಿಧಿಸಿದ್ದ ಶಿಕ್ಷೆ ಎತ್ತಿಹಿಡಿದಿದೆ.
ಪ್ರಕರಣದ ಹಿನ್ನೆಲೆ: 2014ರ ಸೆ.27ರ ರಾತ್ರಿ ಬೆಂಗಳೂರಿನ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವ ತನ್ನ 13 ವರ್ಷದ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದ. ಈ ಘಟನೆ ಸಂಬಂಧ ಸಂತ್ರಸ್ತೆಯ ಚಿಕ್ಕಮ್ಮ ನೀಡಿದ ದೂರಿನ ಮೇರೆಗೆ ಸೆಪ್ಟೆಂಬರ್ 29ರಂದು ಆರೋಪಿ ತಂದೆ ವಿರುದ್ಧ ಎಚ್‌ಎಎಲ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
2016ರ ಸೆಪ್ಟೆಂಬರ್ 22ರಂದು, ವಿಚಾರಣಾ ನ್ಯಾಯಾಲಯವು ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಹಾಗೂ ಪೋಕ್ಸೊ ಕಾಯ್ದೆ-2012ರ ಸೆಕ್ಷನ್ 5, 6 ಅಡಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ರೂ. 2,000 ದಂಡ ವಿಧಿಸಿತ್ತು.
ಈ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಆರೋಪಿ, ದೂರು ದಾಖಲಿಸಲು ಎರಡು ದಿನಗಳ ವಿಳಂಬವನ್ನು 'ಅಸಾಮಾನ್ಯ ವಿಳಂಬ' ಎಂದು ಉಲ್ಲೇಖಿಸಿದ್ದ. ಹಾಗೆಯೇ, ಮ್ಯಾಜಿಸ್ಟ್ರೇಟ್ ಎದುರು ಸಂತ್ರಸ್ತೆ ನೀಡಿರುವ ಹೇಳಿಕೆಯಲ್ಲಿ ವಿರೋಧಾಭಾಸಗಳಿವೆ. ಘಟನೆ ವೇಳೆ, ಮನೆಯಲ್ಲಿದ್ದ ತಾಯಿ ಹಾಗೂ ಅಜ್ಜಿಯನ್ನು ತನಿಖಾಧಿಕಾರಿಯು ವಿಚಾರಣೆಗೆ ಒಳಪಡಿಸಿಲ್ಲ. ಆದ್ದರಿಂದ, ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿದ್ದ.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ : ಒಂದೇ ಕುಟುಂಬದ ಮೂವರು ಬಲಿ
ಆರೋಪಿ ಕೋರಿಕೆ ತಿರಸ್ಕರಿಸಿರುವ ಪೀಠ, ಸಂತ್ರಸ್ತೆ ತನ್ನ ತಂದೆಯ ಕೃತ್ಯದ ಬಗ್ಗೆ ಹೇಳಿದ್ದಾಳೆ. ಆಕೆಯ ಹೇಳಿಕೆಯನ್ನು ಚಿಕ್ಕಮ್ಮ, ಚಿಕ್ಕಪ್ಪ, ವೈದ್ಯರು ಮತ್ತು ವೈದ್ಯಕೀಯ ಪುರಾವೆಗಳು ದೃಢಪಡಿಸಿವೆ. ದೂರು ದಾಖಲಿಸುವಲ್ಲಿ ಹೆಚ್ಚಿನ ವಿಳಂಬವಾಗಿಲ್ಲ. ಈ ರೀತಿಯ ಪ್ರಕರಣಗಳಲ್ಲಿ ವಿಳಂಬವು ಕೂಡ ಪರಿಗಣನೆಯಾಗುವುದಿಲ್ಲ. ಸಂತ್ರಸ್ತೆಯ ತಾಯಿ ದೂರು ದಾಖಲಿಸಿದ ಒಂಬತ್ತನೇ ದಿನಕ್ಕೆ ನಿಧನರಾಗಿದ್ದಾರೆ. ಅಜ್ಜಿಯೂ ಇಹಲೋಕ ತ್ಯಜಿಸಿದ್ದಾರೆ. ಹೀಗಾಗಿ ಆರೋಪಿಯ ಕೋರಿಕೆ ಪರಿಗಣಿಸಲಾಗದು ಎಂದು ಶಿಕ್ಷೆ ಖಾಯಂಗೊಳಿಸಿದೆ.