ಬೆಂಗಳೂರು : ಮಹಿಳೆ ಎಂಬ ಕಾರಣಕ್ಕೆ ಗಂಡನನ್ನೇ ಕೊಲೆ ಮಾಡಿದ್ದ ಆರೋಪಿಗೆ ಜಾಮೀನು ನೀಡಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನು ಕತ್ತು ಸೀಳಿ ಕೊಲೆಗೈದಿದ್ದ ಡಿಲ್ಲಿ ರಾಣಿ ಎಂಬವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ನ್ಯಾಯಪೀಠ ಜಾಮೀನು ನಿರಾಕರಿಸಿ ಆದೇಶಿಸಿದೆ.
ಆರೋಪಿತೆ ತನ್ನ ಕೈಗಳಿಗೆ ಗಾಯ ಮಾಡಿಕೊಂಡು, ತನಗೆ ಸೇರಿದ ಮಾಂಗಲ್ಯ ಸರ ಹಾಗೂ ಕಿವಿಯೋಲೆ ಬಚ್ಚಿಟ್ಟಿದ್ದು, ಆ ಮೂಲಕ ತನಿಖೆಯ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದಾರೆ. ಮಾಂಗಲ್ಯ ಸರ ಮತ್ತು ಕಿವಿಯೋಲೆ, ಮಹಿಳೆಯ ರಕ್ತದ ಕಲೆಗಳಿದ್ದ ನೈಟಿಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ನಡೆದ ರಾತ್ರಿ ಶಂಕರರೆಡ್ಡಿ ಮತ್ತು ಅರ್ಜಿದಾರೆ ಮಧ್ಯೆ ಜಗಳವಾಗಿದೆ. ನಿದ್ದೆಯಿಂದ ಎಚ್ಚರಗೊಂಡು ನೋಡಿದಾಗ ತಂದೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂಬುದಾಗಿ ಮಹಿಳೆಯ ಅಪ್ರಾಪ್ತ ಪುತ್ರ ಸಹ ಸಾಕ್ಷ್ಯ ನುಡಿದಿದ್ದಾರೆ. ಹಾಗಾಗಿ, ಈ ಹಂತದಲ್ಲಿ ಮೇಲ್ನೋಟಕ್ಕೆ ಮಹಿಳೆಯ ವಿರುದ್ಧ ಸಾಕ್ಷ್ಯಗಳಿವೆ. ಅಪರಾಧ ಕೃತ್ಯ ಗಂಭೀರ ಸ್ವರೂಪದ್ದಾಗಿದ್ದು, ಆರೋಪಿತಳು ಮಹಿಳೆ ಎಂಬ ಮಾತ್ರಕ್ಕೆ ಜಾಮೀನು ನೀಡಲಾಗದು ಎಂದು ಹೈಕೋರ್ಟ್ ಹೇಳಿತು.
ಪ್ರಕರದ ಹಿನ್ನೆಲೆ: ಡಿಲ್ಲಿರಾಣಿ ಮತ್ತು ಆರ್. ಶಂಕರರೆಡ್ಡಿ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದರು. ಮತ್ತೋರ್ವ ವ್ಯಕ್ತಿಯೊಂದಿಗೆ ಮಹಿಳೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದರು. ಶಂಕರರೆಡ್ಡಿ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದು, ಡಿಲ್ಲಿರಾಣಿ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ಆಂಧ್ರಪ್ರದೇಶದಲ್ಲಿ ವಾಸವಾಗಿದ್ದರು. ಮಕ್ಕಳಿಗೆ ಶಿಕ್ಷಣ ಕೊಡಿಸಲು ಕುಟುಂಬವನ್ನು ಶಂಕರರೆಡ್ಡಿ ಬೆಂಗಳೂರಿಗೆ ಕರೆತಂದಿದ್ದರು.
ಅಕ್ರಮ ಸಂಬಂಧ ಮುಂದುವರೆಸಲು ಅಡ್ಡಿಯಾಗುತ್ತಾರೆ ಎಂಬ ಕಾರಣಕ್ಕೆ ಮಹಿಳೆ ಮತ್ತು ಪ್ರಿಯಕರ ಸೇರಿ ಶಂಕರರೆಡ್ಡಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. 2022ರ ಫೆಬ್ರುವರಿ 24ರಂದು ಮಕ್ಕಳೊಂದಿಗೆ ಡಿಲ್ಲಿರಾಣಿ ಬೆಂಗಳೂರಿಗೆ ಬಂದು, ಪತಿಯೊಂದಿಗೆ ಯಶವಂತಪುರದ ಮೋಹನ ಕುಮಾರ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಸಂಚಿನ ಪ್ರಕಾರ ಮಹಿಳೆಯು, ಫೆಬ್ರುವರಿ 24ರಂದು ರಾತ್ರಿ 11.30 ಗಂಟೆ ಸಮಯದಲ್ಲಿ ಮನೆಯಲ್ಲಿ ನಿದ್ರಿಸುತ್ತಿದ್ದ ಶಂಕರರೆಡ್ಡಿಯ ಕತ್ತನ್ನು ಚಾಕುವಿನಿಂದ ಸೀಳಿ ಕೊಲೆ ಮಾಡಿದ್ದಳು. ಅದೇ ಚಾಕುವಿನಿಂದ ಕೈಗಳ ಮೇಲೆ ಗಾಯ ಮಾಡಿಕೊಂಡಿದ್ದಳು. ಜೊತೆಗೆ, ಮಾಂಗಲ್ಯ ಸರ, ಕಿವಿಯೋಲೆಯನ್ನು ಬಚ್ಚಿಟ್ಟಿದ್ದಳು. ಆ ಮೂಲಕ ದರೋಡೆ ಮತ್ತು ಕೊಲೆ ಎಂಬುದಾಗಿ ಬಿಂಬಿಸಲು ಪ್ರಯತ್ನಿಸಿದ್ದಳು.
ಮೊದಲಿಗೆ ಅಪರಿಚಿತರ ಮೇಲೆ ಪ್ರಕರಣ ದಾಖಲಿಸಿದ್ದ ಯಶವಂತಪುರ ಠಾಣಾ ಪೊಲೀಸರು, ತನಿಖೆ ವೇಳೆ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಮಹಿಳೆಯು ತಪ್ಪೊಪ್ಪಿಕೊಂಡಿದ್ದಳು. ಪ್ರಕರಣದಲ್ಲಿ 2022ರ ಸೆಪ್ಟೆಂಬರ್ 24 ರಿಂದ ನ್ಯಾಯಾಂಗ ಬಂಧನದಲ್ಲಿರುವ ಡಿಲ್ಲಿರಾಣಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಬೆಂಗಳೂರಿನ 63ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಆರೋಪಿತರು ಮಹಿಳೆಯಾಗಿದ್ದು, ಘಟನೆಯಲ್ಲಿ ಗಾಯಗೊಂಡಿದ್ದಾರೆ. ಆಕೆ ಅಮಾಯಕಳಾಗಿದ್ದಾರೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು. ಇದನ್ನು ಕೋರ್ಟ್ ಮಾನ್ಯ ಮಾಡಲಿಲ್ಲ.
ಇದನ್ನೂ ಓದಿ: ವಿಚ್ಛೇದನ ಅರ್ಜಿಗೆ ಆಕ್ಷೇಪಣೆ ಸಲ್ಲಿಸದ ಕಾರಣ ನೀಡಿ ಅರ್ಜಿ ವಜಾಗೊಳಿಸುವಂತಿಲ್ಲ: ಹೈಕೋರ್ಟ್