ಬೆಂಗಳೂರು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ 2010ರಲ್ಲಿ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಅವರಿಗೆ ನೀಡಿದ್ದ ಜಾಮೀನನ್ನು ರದ್ದುಪಡಿಸಿದೆ.
ನ್ಯಾಯಮೂರ್ತಿ ಜಾನ್ ಮೈಕೆಲ್ ಡಿಸಿನ್ಹಾ ಅವರು, ನಿತ್ಯಾನಂದರ ಜಾಮೀನು ರದ್ದುಪಡಿಸಿದ್ದಾರೆ. ನಿತ್ಯಾನಂದರ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಕುರುಪ್ಪನ್ ಲೆನಿನ್ ಸಲ್ಲಿಸಿದ್ದ ದೂರಿನ ಮೇರೆಗೆ ನಿತ್ಯಾನಂದ ವಿರುದ್ಧ ಅತ್ಯಾಚಾರ ಸೇರಿ ವಿವಿಧ ಕ್ರಿಮಿನಲ್ ಅಪರಾಧಗಳೊಂದಿಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಆರೋಪಿಗಳನ್ನು ಬಂಧಿಸಲು ಆದೇಶಿಸಿ ಮತ್ತು ಜಾಮೀನು ಮತ್ತು ಬಾಂಡ್‌ಗಳನ್ನು ಮುಟ್ಟುಗೋಲು ಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ನ್ಯಾಯಮೂರ್ತಿಗಳು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದ್ದಾರೆ.
ನಿತ್ಯಾನಂದ ಹಿಂದೂ ಧರ್ಮವನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನಂಬಿಸಿ ವಿಚಾರಣಾ ನ್ಯಾಯಾಲಯವನ್ನು ದಾರಿ ತಪ್ಪಿಸಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಆದ್ರೆ ಆತನ ಇರುವಿಕೆ ಬಗ್ಗೆ ಯಾರಿಗೂ ತಿಳಿದಿಲ್ಲ ಎನ್ನಲಾಗಿದೆ.
ಇನ್ನು ಅವರ ಮುಖ್ಯ ಆಶ್ರಮ ಕರ್ನಾಟಕದ ಬಿಡದಿಯಲ್ಲಿದೆ. ಅಹಮದಾಬಾದ್‌ನ ಆಶ್ರಮವೊಂದರಲ್ಲಿ ಮಕ್ಕಳನ್ನು ಬಂಧಿಸಿಟ್ಟಿರುವ ಪ್ರಕರಣದಡಿ ಅವರ ಇಬ್ಬರು ಶಿಷ್ಯರನ್ನು ಬಂಧಿಸಲಾಗಿದೆ. ಕಳೆದ ವರ್ಷ ನಿತ್ಯಾನಂದ ದೇಶದಿಂದ ಪರಾರಿಯಾಗಿದ್ದು, ಇಂಟರ್‌ಪೋಲ್ ಆತನನ್ನು ಪತ್ತೆ ಹಚ್ಚಲು ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ.