ಬೆಂಗಳೂರು: ರಾಜ್ಯದಲ್ಲಿ ಎರಡನೇ ಅಲೆಯ ಭೀಕರತೆ ನಂತರ ಇದೀಗ ಮೂರನೇ ಅಲೆ ಪ್ರವೇಶವಾಗಿದೆ. ಆರು ತಿಂಗಳ ಬಳಿಕ ಇದೀಗ ಸತತ ಒಂದು ವಾರಗಳಿಂದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಆಗ್ತಿದೆ. ಈಗಾಗಲೇ ತಜ್ಞರು ಕೂಡ ಕಠಿಣ ನಿರ್ಬಂಧಕ್ಕೆ ಸರ್ಕಾರಕ್ಕೆ ಶಿಫಾರಸ್ಸು ನೀಡಿದ್ದಾರೆ.
ಹೀಗಾಗಿ ಇಂದು ಸಂಜೆ ನಡೆಯುವ ತಜ್ಞರ ನೇತೃತ್ವದ ಸಭೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡುವ ಸಾಧ್ಯತೆ ಇದೆ. ಯಾಕೆಂದರೆ ಮೂರನೇ ಅಲೆ ಕುರಿತು ವರದಿ ನೀಡಿರುವ ತಾಂತ್ರಿಕ ಸಲಹಾ ಸಮಿತಿ ಮೂರು ಕಲರ್ ಕೋಡ್ ಆಧಾರದ ಮೇಲೆ ಚಟುವಟಿಕೆ ನಿರ್ಬಂಧಕ್ಕೆ ಸಲಹೆ ನೀಡಿದೆ.
ಸದ್ಯ ರಾಜ್ಯದ ಪರಿಸ್ಥಿತಿ ನೋಡಿದ್ದರೆ ಯೆಲ್ಲೋ ಅಲರ್ಟ್ನಿಂದ ಆರೆಂಜ್ ಅಲರ್ಟ್ಗೆ ಜಿಗಿದಿದ್ದು, ಇಂದು ಆರೇಂಜ್ ಅಲರ್ಟ್ ಘೋಷಣೆ ಮಾಡುವ ಎಲ್ಲ ಸಾಧ್ಯತೆಗಳು ಇವೆ. ಆರೆಂಜ್ ಅಲರ್ಟ್ 50:50 ಸೂತ್ರವಾಗಿದ್ದು, ಇದನ್ನೇ ಮೊದಲ ಹಂತವಾಗಿ ಜಾರಿ ಮಾಡಲಿದೆ.
ಪಾಸಿಟಿವಿಟಿ ದರ ಶೇಕಡಾ 1ಕ್ಕಿಂತ ಕಡಿಮೆ ಇದ್ದರೆ ಯೆಲ್ಲೋ ಅರ್ಲಟ್, ಶೇಕಡಾ 1ರಿಂದ ಶೇಕಡಾ 2ರಷ್ಟಿದ್ದರೆ ಅದನ್ನು ಆರೆಂಜ್ ಅಲರ್ಟ್, ಶೇಕಡಾ 2ಕ್ಕಿಂತ ಹೆಚ್ಚು ಇದ್ದರೆ ರೆಡ್ ಅಲರ್ಟ್ ಎಂದು ಘೋಷಿಸಿ ಚಟುವಟಿಕೆಗಳಲ್ಲಿ ನಿರ್ಬಂಧಗಳನ್ನು ಹೇರಲು ಬಳಸಲು ಸೂಚಿಸಲಾಗಿದೆ. ಹೀಗಾಗಿ ಸದ್ಯ ಸೋಮವಾರದ ಪ್ರಕರಣಗಳ ಪಾಸಿಟಿವಿಟಿ ದರ ಶೇಕಡಾ 1.60ರಷ್ಟಿದೆ. ಹೀಗಾಗಿ ಇದು ಸ್ವಲ್ಪ ದಿನಗಳಲ್ಲೇ ರೆಡ್ ಅಲರ್ಟ್ ಆಗುವ ಸಾಧ್ಯತೆ ಇದೆ.
ಹೀಗಾಗಿ ಸರ್ಕಾರ ಎಚ್ಚೆತ್ತುಕೊಂಡಿದ್ದು, ಇಂದಿನ ಸಭೆಯಲ್ಲಿ ಬಹುತೇಕ ಎಲ್ಲ ಚಟುವಟಿಕೆಯಲ್ಲೂ 50:50 ರೂಲ್ಸ್ ಜಾರಿ ಮಾಡುವ ಸಾಧ್ಯತೆ ಹೆಚ್ಚಿದೆ. ಆರೆಂಜ್ ಅಲರ್ಟ್ ನಲ್ಲಿ ಕೊರೊನಾ ಸೋಂಕಿನ ಎಚ್ಚರಿಕೆ ಗಂಟೆ ಎಂದೇ ಭಾವಿಸಬೇಕು. ಏಕೆಂದರೆ ಒಮ್ಮೆ ಪಾಸಿಟಿವ್ ದರ 3ಕ್ಕೆ ಏರಿದರೆ ನಿಯಂತ್ರಣ ಮಾಡುವುದು ಅಸಾಧ್ಯ. ಹೀಗಾಗಿ ತಜ್ಞರು ಎಚ್ಚರಿಕೆಯನ್ನು ನೀಡಿದ್ದಾರೆ.
50-50 ನಿಯಮ ಸಾಧ್ಯತೆ: ಒಂದು ವೇಳೆ ಆರಂಜ್ ಅಲರ್ಟ್ ಘೋಷಣೆಯಾದರೆ ಸಿನಿಮಾ ಮತ್ತು ಆಡಿಟೋರಿಯಂ, ಶಾಲಾ - ಕಾಲೇಜು, ಪಬ್ ಮತ್ತು ಬಾರ್, ರೆಸ್ಟೋರೆಂಟ್, ಕಚೇರಿಗಳು, ಫ್ಯಾಕ್ಟರಿ, ಬಸ್ಗಳು, ಸಲೂನ್, ಕಟ್ಟಿಂಗ್ ಶಾಪ್, ಮನರಂಜನಾ ಕ್ಲಬ್, ಮೆಟ್ರೋ ರೈಲುಗಳಲ್ಲಿ 50-50 ನಿಯಮ ಜಾರಿಗೆ ಬರಲಿದೆ.
ಇನ್ನು ಮಾರುಕಟ್ಟೆ, ಶಾಪಿಂಗ್ ಲೈನ್ಸ್ನಲ್ಲಿ ಕಡ್ಡಾಯವಾಗಿ CAB (Covid Appropriate Behavior) ಜಾರಿ ಮಾಡಬೇಕು. ಮಾಲ್ ಹಾಗೂ ಶಾಪಿಂಗ್ ಕಾಂಪ್ಲೆಕ್ಸ್ಗಳು ಬೆಳಗ್ಗೆ 6 ಗಂಟೆ ಮಧ್ಯಾಹ್ನ 1 ತನಕ ಮಾತ್ರ ಕಾರ್ಯ ನಿರ್ವಹಿಸಬೇಕು. ಆರೋಗ್ಯ ಸಂಸ್ಥೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ, ಎಂದಿನಂತೆ ಒಪನ್ ಇರಲಿದೆ.
ಇನ್ನು ಸ್ವೀಮಿಂಗ್ ಪೋಲ್, ಜಿಮ್ ಹಾಗೂ ಫಿಟ್ನೆಸ್ ಸೆಂಟರ್ಗಳು ತರಬೇತಿಗಾಗಿ ಅಷ್ಟೇ ತೆರೆಯಬಹುದು. ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾ ಚಟುವಟಿಕೆಗಳು, ಅಂತಾರಾಷ್ಟ್ರೀಯ ಪ್ರಯಾಣಿಕರ ಗಮನದ ಕುರಿತು ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಕ್ರಮ ಕೈಗೊಳ್ಳಲಿದೆ.
ಇನ್ನು ಮದುವೆ ಸಮಾರಂಭ ಸಭೆಗಳಲ್ಲಿ 100-200 ಜನರಿಗಷ್ಟೇ ಅವಕಾಶ, ಹಾಗೂ ಅಂತ್ಯಕ್ರಿಯೆಯಲ್ಲಿ 50-100 ಜನರ ಸೇರಲು ಅವಕಾಶ ಕಲ್ಪಿಸಲಾಗುತ್ತದೆ. ಉಳಿದಂತೆ ದೇವಸ್ಥಾನ, ಉದ್ಯಾನ, ಅಮ್ಯೂಸ್‌ಮೆಂಟ್ ಪಾರ್ಕ್‌ಗಳು, ಮೃಗಾಲಯಗಳು, ವಸ್ತು ಸಂಗ್ರಹಾಲಯಗಳು ಮತ್ತು ಕಲಾ ಗ್ಯಾಲರಿಗಳು ತರೆಯಲು ಅವಕಾಶ ಇದ್ದು ಕೋವಿಡ್ ನಿಯಮ ಕಡ್ಡಾಯವಾಗಿ ಪಾಲಿಸಬೇಕಿದೆ.
ತಾಲೂಕಿಗೊಂದು ವಾರ್ ರೂಮ್
ಸೋಂಕು ಹೆಚ್ಚಳವಾಗುತ್ತಿದ್ದಂತೆ ತಾಂತ್ರಿಕ ಸಲಹಾ ಸಮಿತಿ ಸೋಮವಾರ ಸಭೆ ನಡೆಸಿ ಹಲವು ಶಿಫಾರಸು ಮಾಡಿದೆ. ಅದರಲ್ಲಿ ಪ್ರಮುಖವಾಗಿ ತಾಲೂಕಿಗೊಂದು ವಾರ್ ರೂಂ ಸ್ಥಾಪನೆ ಮಾಡಬೇಕು. ಕೋವಿಡ್ ಕೇರ್ ಸೆಂಟರ್, ಟೆಲಿಕನ್ಸಲ್ಟೇಷನ್ ಹೆಚ್ಚು ಮಾಡುವಂತೆ ಸೂಚನೆ ನೀಡಲಾಗಿದೆ.
ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಸೋಂಕು ದೃಢಪಟ್ಟರೆ ಸಾಂಸ್ಥಿಕ ಐಸೋಲೇಷನ್ ಕಡ್ಡಾಯ ಮಾಡಿ, ಜಿನೋಮ್ ಸೀಕ್ವೇನ್ಸಿಂಗ್ ಬರುವ ತನಕ ಇರಬೇಕು. ಖಾಸಗಿಯಾಗಿ ಐಸೋಲೇಷನ್ನಲ್ಲಿ ಇರಬೇಕು, ಇದರ ಖರ್ಚು ವೆಚ್ಚ ಸೋಂಕಿತ ವ್ಯಕ್ತಿಯೇ ಭರಿಸಬೇಕು. ವಿದೇಶಗಳಿಂದ ಬಂದು ಸೋಂಕು ಹರಡಲು ಕಾರಣವಾಗ್ತಿದ್ದು, ಸರ್ಕಾರಿ ಐಸೋಲೇಷನ್ ಕ್ಯಾನ್ಸಲ್ ಮಾಡಲು ತಿಳಿಸಲಾಗಿದೆ.
ಇದನ್ನೂ ಓದಿ: ಕೋವಿಡ್ ಹೆಚ್ಚಳ: ಸಂಜೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ: ಜಾರಿಯಾಗುತ್ತಾ ಸೆಮಿ ಲಾಕ್ಡೌನ್?