ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಬೇರೆ ಇಲಾಖೆ ಅಧಿಕಾರಿಗಳ ಹಸ್ತಕ್ಷೇಪ ಆಗುತ್ತಿದೆ. ನಮ್ಮ ಇಲಾಖೆ ಕೆಲಸವನ್ನು ನಾವು ನಿರ್ವಹಿಸುತ್ತೇವೆ ಎಂದು ಇಂದು ಕರ್ನಾಟಕ ಸರ್ಕಾರಿ ವೈದ್ಯರ ಸಂಘದ ಸದಸ್ಯರು ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಮನವಿ ಮಾಡಿದರು.
ಡಾ. ನಾಗೇಂದ್ರ ಅವರು ಕೆಲಸದ ಒತ್ತಡದ ಹಿನ್ನೆಲೆ ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಾಳೆಯಿಂದ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದಿಂದ ತುರ್ತು ಚಿಕಿತ್ಸೆ ಬಿಟ್ಟು, ಕೋವಿಡ್ ನ ಯಾವುದೇ ಕೆಲಸ ಮಾಡದಿರಲು ನಿರ್ಧರಿಸುವುದಾಗಿ ಸಿಎಂಗೆ ತಿಳಿಸಿದ್ದೆವು. ಆದರೆ ನಿನ್ನೆ ಸರ್ಕಾರ, ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಜೊತೆಗೆ ಮುಷ್ಕರ ಬೇಡ ಎಂದು ಕೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ 31 ಜಿಲ್ಲೆಗಳ ಪದಾಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.
ಜಂಟಿ ನಿರ್ದೇಶಕರು ಸೇರಿದಂತೆ ಹಲವು ಅಧಿಕಾರಿಗಳಿಗೆ ಕೆಲಸ ಹಂಚಿಕೆ ಮಾಡಬೇಕು. ಅವೈಜ್ಞಾನಿಕವಾಗಿ ಸ್ವಾಬ್ ಟೆಸ್ಟ್‌ಗೆ ಒತ್ತಾಯ ಮಾಡಬಾರದು. ಗಣೇಶ ಪೆಂಡಲ್, ಮಾರುಕಟ್ಟೆ ಪ್ರದೇಶದಲ್ಲಿ ಜನರ ಸ್ವಾಬ್ ಟೆಸ್ಟ್ ಮಾಡಿಸಿ ಎಂದು ಒತ್ತಾಯ ಮಾಡಬಾರದು ಎನ್ನುವ ವೈದ್ಯರ ಬೇಡಿಕೆಯನ್ನು ಸರ್ಕಾರ ಈಡೇರಿಸುವ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಅಮಾನತು ನಿರ್ಧಾರವನ್ನು ವಾಪಸ್ ಪಡೆದಿರುವ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ವರ್ಗಾವಣೆ ಮಾಡಿದ್ದಾರೆ. ಈಗಾಗಲೇ ಅವರ ಮೇಲೆ FIR ದಾಖಲಾಗಿದ್ದು, ತನಿಖೆ ನಡೆಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅಮಾನತು ಬೇಡಿಕೆಯನ್ನು ಕೈಬಿಟ್ಟಿದ್ದೇವೆ ಅಂತ ತಿಳಿಸಿದರು.
ಸಚಿವ ಸುಧಾಕರ್ ಅವರು ಕೋವಿಡ್ ಸಂದರ್ಭದಲ್ಲಿ ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಅರಿವಿದೆ. ಸಿಎಂ, ವೈದ್ಯರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿರುವ ಹಿನ್ನೆಯಲ್ಲಿ, ನಿನ್ನೆ ಕರೆ ನೀಡಲಾಗಿದ್ದ ಮುಷ್ಕರ ವಾಪಸ್ ಪಡೆದಿರುವ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಮುಂದಿನ ವಾರ ವೈದ್ಯರ ಸಭೆ; ಸಚಿವ ಶ್ರೀರಾಮುಲು
ನಂಜನಗೂಡು ಪ್ರಕರಣದ ಬಗ್ಗೆ ಸೂಕ್ತ ತನಿಖೆಗೆ ಹಾಗೂ ಕೆಲವು ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆಗೆ ಮುಂದಾಗಿದ್ದ ವೈದ್ಯಾಧಿಕಾರಿಗಳು, ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದಾರೆ. ಇಲಾಖೆಯ ವೈದ್ಯಾಧಿಕಾರಿಗಳ ಸಮಸ್ಯೆಗಳ ಬಗ್ಗೆ ಮುಂದಿನ ವಾರ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಕೋವಿಡ್ ವ್ಯಾಪಿಸಿರುವ ಸನ್ನಿವೇಶದಲ್ಲಿ ಜನರ ಆರೈಕೆಗೆ ನಿಮ್ಮೆಲ್ಲರ ಸೇವೆ ಅತ್ಯಗತ್ಯ. ಈ ಜವಾಬ್ದಾರಿ ಅರಿತು, ಸಾರ್ವಜನಿಕ ಹಿತದೃಷ್ಟಿಯಿಂದ ಮುಷ್ಕರ ನಡೆಸುವ ನಿರ್ಧಾರ ಹಿಂಪಡೆದಿರುವ ಎಲ್ಲಾ ಆರೋಗ್ಯ ಅಧಿಕಾರಿಗಳಿಗೆ ಧನ್ಯವಾದಗಳು ಅಂತ ಟ್ವೀಟ್ ಮಾಡಿದ್ದಾರೆ.