ಬೆಂಗಳೂರು: ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮ ತಡೆಯಲು ಪ್ರತ್ಯೇಕ ಶಾಸನ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿಧಾನ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ 2023ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ಸಮ್ಮತಿಸಲಾಗಿದೆ.
ಇತ್ತೀಚೆಗೆ ನೇಮಕಾತಿ ಪರೀಕ್ಷೆಗಳಲ್ಲಿ ಸಾಕಷ್ಟು ಅಕ್ರಮಗಳು ನಡೆದಿರುವ ಆರೋಪಗಳು ಕೇಳಿ ಬರುತ್ತಿವೆ. ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮ, ಸಹಾಯಕ ಪ್ರಾಧ್ಯಾಪಕ ನೇಮಕಾತಿ ಅಕ್ರಮ, ಕೆಇಎ ನೇಮಕಾತಿ ಪರೀಕ್ಷೆ ಅಕ್ರಮ ಹೀಗೆ ಹಲವು ಅಕ್ರಮಗಳು ಬೆಳಕಿಗೆ ಬಂದಿವೆ. ಇಂಥ ಅಕ್ರಮಗಳನ್ನು ತಡೆಗಟ್ಟಲು ಇದೀಗ ರಾಜ್ಯ ಸರ್ಕಾರ ಮುಂದಾಗಿದೆ. ಸಾಲು ಸಾಲು ನೇಮಕಾತಿ ಪರೀಕ್ಷೆ ಅಕ್ರಮಗಳಿಂದ ಅನೇಕ ಯೋಗ್ಯ ಅಭ್ಯರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ.
ನೇಮಕಾತಿ ಪರೀಕ್ಷೆಗಳ ಅಕ್ರಮ ತಡೆಯಲು ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಒಂದಲ್ಲೊಂದು ರೀತಿಯಲ್ಲಿ ಅಕ್ರಮಗಳು ಬಯಲಿಗೆ ಬರುತ್ತಿವೆ. ಹೀಗಾಗಿ ಕಠಿಣ ಕಾನೂನು ತರಲು ನಿರ್ಧರಿಸಲಾಗಿದೆ. ಈ ಕಾನೂನಿನಡಿ ಅಕ್ರಮ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸುವ ನಿಯಮ ರೂಪಿಸಲಾಗುವುದು. ನೇಮಕಾತಿಯಲ್ಲಿ ನಡೆಯುವ ಭ್ರಷ್ಟಾಚಾರ, ಅಕ್ರಮಗಳನ್ನು ನಿಯಂತ್ರಿಸಲು ಪ್ರತ್ಯೇಕ ಕಾನೂನು ತರಲಾಗುವುದು. ಅಪರಾಧ ಎಸಗಿದವರಿಗೆ ಶಿಕ್ಷೆ ಪ್ರಮಾಣ, ಶಿಕ್ಷೆಯಿಂದ ಪಾರಾಗದಂತೆ ಕಠಿಣ ನಿಯಮದ ಅಂಶಗಳು ಈ ವಿಧೇಯಕದಲ್ಲಿ ಇರಲಿದೆ.
ಈ ಸಂಬಂಧ ಒಳಾಡಳಿತ ಇಲಾಖೆಗೆ ಕಾನೂನು ರೂಪಿಸುವ ಹೊಣೆ ನೀಡಲಾಗಿತ್ತು. ಇದಕ್ಕೆ ಗೃಹ ಸಚಿವರು ಒಪ್ಪಿಗೆ ಸೂಚಿಸಿದ್ದರು. ಒಳಾಡಳಿತ ಇಲಾಖೆ ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ ವಿಧೇಯಕ-2023 ರೂಪಿಸಿದ್ದು, ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿ, ಅಂಗೀಕಾರ ದೊರೆತಿದೆ.
ಇದನ್ನೂ ಓದಿ: PSI ನೇಮಕಾತಿ ಅಕ್ರಮ ಬಗ್ಗೆ ಹೈಕೋರ್ಟ್ ತೀರ್ಪು, ಹಿಂದಿನ ಸಚಿವರಿಗೆ ಛೀಮಾರಿ ಹಾಕಿದಂತೆ: ಸಚಿವ ಪ್ರಿಯಾಂಕ್ ಖರ್ಗೆ