ಬೆಂಗಳೂರು: ಕಡೆಗೂ ರಾಜ್ಯ ಬಿಜೆಪಿಗೆ ನೂತನ ಸಾರಥಿಯನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿದೆ. ಚುನಾವಣಾ ರಾಜಕಾರಣಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಗುಡ್ ಬೈ ಹೇಳಿದ್ದರೂ, ಅವರ ಪುತ್ರನಿಗೆ ರಾಜ್ಯಾಧ್ಯಕ್ಷ ಸ್ಥಾನ ಲಭಿಸಿದೆ. ಸಂಘಟನಾತ್ಮಕ ಚಟುವಟಿಕೆ ಹಾಗೂ ಯುವ ನಾಯಕತ್ವಕ್ಕೆ ಮಣೆ ಹಾಕಿರುವ ಬಿಜೆಪಿ ನಾಯಕರು ಘಟನಾನುಘಟಿ ಆಕಾಂಕ್ಷಿಗಳ ನಡುವೆ ಬಿಎಸ್ವೈ ಪುತ್ರನಿಗೆ ರಾಜ್ಯದ ನೇತೃತ್ವ ವಹಿಸಿ ಲೋಕಸಭಾ ಚುನಾವಣೆ ಎದುರಿಸಲು ಮುಂದಾಗಿದ್ದಾರೆ.
ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಿ.ವೈ.ವಿಜಯೇಂದ್ರ ಅವರಿಗೆ ರಾಜ್ಯ ಬಿಜೆಪಿ ನಾಯಕತ್ವವನ್ನು ಬಿಜೆಪಿ ಕಲ್ಪಿಸಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಲು ತಯಾರಿ ನಡೆಸಿದ್ದ ವಿಜಯೇಂದ್ರ ಅವರಿಗೆ ಹೈಕಮಾಂಡ್ ಅಡ್ಡಗಾಲು ಹಾಕಿತ್ತು. ಅಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿಜಯೇಂದ್ರ ಅವರಿಗೆ ಟಿಕೆಟ್ ನೀಡದೇ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿ ಹೆಚ್ಚಿನ ಜವಾಬ್ದಾರಿ ನೀಡಿತ್ತು.
ಶಿಕಾರಿಪುರ ಕ್ಷೇತ್ರದಿಂದಲೇ ಆಯ್ಕೆಯಾದವರಿಗೆ ರಾಜ್ಯಾಧ್ಯಕ್ಷ ಸ್ಥಾನ: ಶಿಕಾರಿಪುರ ಕ್ಷೇತ್ರದಿಂದ ಗೆದ್ದಿದ್ದ ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಇದೀಗ ಅದೇ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಪುತ್ರ ಬಿ ವೈ ವಿಜಯೇಂದ್ರ ಅವರಿಗೂ ರಾಜ್ಯಾಧ್ಯಕ್ಷ ಸ್ಥಾನ ಒಲಿದು ಬಂದಿದೆ.
ಉಪ ಚುನಾವಣೆಗಳಲ್ಲಿ ಸಾಮರ್ಥ್ಯ ಸಾಬೀತು: ನಂತರ ನಡೆದ ಉಪ ಚುನಾವಣೆಗಳಲ್ಲಿ ಶಿರಾ, ಕೆ.ಆರ್.ಪೇಟೆ ಜವಾಬ್ದಾರಿ ನೀಡಿತ್ತು. ಅದನ್ನು ಸದ್ಬಳಕೆ ಮಾಡಿಕೊಂಡಿದ್ದ ವಿಜಯೇಂದ್ರ ಎರಡೂ ಕ್ಷೇತ್ರ ಗೆಲ್ಲಿಸಿಕೊಂಡು ಸಾಮರ್ಥ್ಯ ಸಾಬೀತುಪಡಿಸಿ ವರಿಷ್ಠರ ಗಮನ ಸೆಳೆದಿದ್ದರು. ಇದರ ಆಧಾರದಲ್ಲಿಯೇ ಚುನಾವಣಾ ಕಣಕ್ಕೆ ಧುಮುಕಲು ಸಿದ್ದತೆ ನಡೆಸಿದ್ದರು. ಆದರೆ, 2023ರ ಚುನಾವಣೆಗೂ ಮುನ್ನ ಚುನಾವಣಾ ರಾಜಕೀಯಕ್ಕೆ ಯಡಿಯೂರಪ್ಪ ನಿವೃತ್ತಿ ಘೋಷಣೆ ಮಾಡಿದ್ದರಿಂದಾಗಿ ಶಿಕಾರಿಪುರ ಕ್ಷೇತ್ರದಿಂದಲೇ ವಿಜಯೇಂದ್ರ ಕಣಕ್ಕಿಳಿದು, ಮೊದಲ ಬಾರಿಗೆ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸುವಲ್ಲಿ ಸಫಲರಾಗಿದ್ದಾರೆ.
ಇದೀಗ ರಾಜ್ಯ ಬಿಜೆಪಿಗೆ ನೂತನ ಸಾರಥಿ ಹುಡುಕಾಟದಲ್ಲಿದ್ದ ಬಿಜೆಪಿ ವರಿಷ್ಠರ ಮೇಲೆ ಪಕ್ಷದ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ಒತ್ತಡ ಹೇರಿದ್ದರು. ದೆಹಲಿಗೆ ಹೋಗಿ ಅಭಿಪ್ರಾಯ ನೀಡಿದ್ದರು. ಇದರ ನಂತರ ವಿಜಯೇಂದ್ರ ಅವರನ್ನೂ ಕರೆಸಿಕೊಂಡು ವರಿಷ್ಠರು ಮಾತುಕತೆ ನಡೆಸಿದ್ದರು. ಆದರೆ, ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಸಾಕಷ್ಟು ಆಕಾಂಕ್ಷಿಗಳಿದ್ದು, ಬಿಜೆಪಿ ನಾಯಕರಿಗೆ ಹೊಸ ಸಾರಥಿಯ ಆಯ್ಕೆ ಕಗ್ಗಂಟಾಗುವಂತೆ ಮಾಡಿತ್ತು. ಆದರೂ ಅಳೆದು ತೂಗಿ ನೂತನ ಸಾರಥಿ ಆಯ್ಕೆ ಮಾಡುವಲ್ಲಿ ತಡವಾಗಿಯಾದರೂ ವರಿಷ್ಠರು ಸಫಲರಾಗಿದ್ದು, ಲೋಕಸಭಾ ಚುನಾವಣೆಗೂ ಮುನ್ನ ಹೊಸ ನಾಯಕತ್ವಕ್ಕೆ ಅವಕಾಶ ನೀಡಿದೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿ.ಟಿ ರವಿ ಅವರನ್ನು ಮೂರು ವರ್ಷದ ನಂತರ ರಾಷ್ಟ್ರೀಯ ಸೇವೆಯಿಂದ ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷ ಸ್ಥಾನ ಸಿಟಿ ರವಿ ಅವರಿಗೆ ನೀಡಲಾಗುತ್ತದೆ ಎನ್ನಲಾಗಿತ್ತು. ಸಿ.ಟಿ ರವಿ ಪ್ರಬಲ ಆಕಾಂಕ್ಷಿಯೂ ಆಗಿದ್ದರು. ಇದರ ಜೊತೆಗೆ ಹಿರಿಯ ನಾಯಕ ವಿ.ಸೋಮಣ್ಣ ಬಹಿರಂಗವಾಗಿಯೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಇದರ ಜೊತೆಗೆ ಮಹಿಳೆಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎನ್ನುವ ಮಾತುಗಳು ಕೇಳಿಬಂದ ಹಿನ್ನಲೆಯಲ್ಲಿ ಶೋಭಾ ಕರಂದ್ಲಾಜೆ ಹೆಸರು ಕೇಳಿ ಬಂದಿತ್ತು. ಯಡಿಯೂರಪ್ಪ ಜೊತೆ ಆಪ್ತತೆ ಹಾಗೂ ಇತ್ತೀಚೆಗೆ ಹೈಕಮಾಂಡ್ ಜೊತೆಗೂ ಉತ್ತಮ ಬಾಂಧವ್ಯ ಇರಿಸಿಕೊಂಡಿರುವ ಹಿನ್ನಲೆಯಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ನಾನು ಆಕಾಂಕ್ಷಿಯಲ್ಲ ಎಂದು ಶೋಭಾ ಕರಂದ್ಲಾಜೆ ಮೇಲ್ನೋಟಕ್ಕೆ ಹೇಳುತ್ತಿದ್ದರೂ ಅವಕಾಶ ಸಿಕ್ಕರೆ ಜವಾಬ್ದಾರಿ ನಿರ್ವಹಿಸಲು ಸಿದ್ದರಾಗಿದ್ದರು. ಮತ್ತೊಂದೆಡೆ, ಡಿ.ವಿ ಸದಾನಂದಗೌಡ, ಅಶ್ವತ್ಥನಾರಾಯಣ ಸೇರಿದಂತೆ ಹಲವರು ರೇಸ್ನಲ್ಲಿದ್ದರು. ಪಕ್ಷವನ್ನು ಸರಿದೂಗಿಸಿಕೊಂಡು ಮುನ್ನಡೆಸಲು ಹಿರಿಯ ನಾಯಕರಿಗೆ ಅವಕಾಶ ನೀಡಬೇಕು ಬೇಡಿಕೆ ಇತ್ತು. ಆದರೂ ಪಕ್ಷದ ವರಿಷ್ಠರು ಯುವ ನಾಯಕತ್ವಕ್ಕೆ ಮಣೆ ಹಾಕಿ ವಿಜಯೇಂದ್ರಗೆ ಅವಕಾಶ ನೀಡಿದ್ದಾರೆ.
ಲಿಂಗಾಯತ ಸಮುದಾಯದ ಮತಗಳ ಮೇಲೆ ಕಣ್ಣು: ರಾಜ್ಯದಲ್ಲಿ ಲಿಂಗಾಯತ ಸಮುದಾಯ ಪ್ರಬಲವಾಗಿದ್ದು, ಅದೇ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದಲ್ಲಿ ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ದೂರವಾದ ಒಂದಷ್ಟು ಪ್ರಮಾಣದ ಲಿಂಗಾಯತ ಮತದಾರರನ್ನು ಸೆಳೆಯಲು ಲಿಂಗಾಯತ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ನಿರ್ಧಾರವನ್ನು ಹೈಕಮಾಂಡ್ ಮಾಡಿದೆ. ಅದರಲ್ಲಿಯೂ ರಾಜ್ಯ ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ ಲಿಂಗಾಯತ ಸಮುದಾಯದ ಅಗ್ರ ನಾಯಕ ಹಾಗೂ ರಾಜ್ಯ ಬಿಜೆಪಿಯ ಮಾಸ್ ಲೀಡರ್. ಹಾಗಾಗಿ ಅವರ ಪುತ್ರನಿಗೆ ಅವಕಾಶ ನೀಡಿದಲ್ಲಿ ಸಮುದಾಯವನ್ನು ಪಕ್ಷದ ಜೊತೆ ಉಳಿಸಿಕೊಳ್ಳಬಹುದು ಹಾಗೂ ಮಾಸ್ ಇಮೇಜ್ ಬಳಸಿಕೊಳ್ಳಬಹುದು ಎನ್ನುವ ಕಾರಣಕ್ಕಾಗಿ ಯಡಿಯೂರಪ್ಪ ಪುತ್ರನಿಗೆ ಮಣೆ ಹಾಕುವ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಂಡಿದೆ.
ವಿಜಯೇಂದ್ರ ಆಯ್ಕೆಗೆ ಕೆಲ ಹಿರಿಯ ನಾಯಕರಲ್ಲಿ ಅಸಮಾಧಾನ ಹುಟ್ಟಿಸುವುದು ಸಜಜವಾಗಿದೆ. ಪ್ರಬಲ ಆಕಾಂಕ್ಷಿಯಾಗಿದ್ದ ವಿ.ಸೋಮಣ್ಣ, ಪದೆ ಪದೇ ಯಡಿಯೂರಪ್ಪ ಕುಟುಂಬವನ್ನು ಟೀಕಿಸಿಕೊಂಡು ಬಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಟಿ ರವಿ, ಕೆ.ಎಸ್.ಈಶ್ವರಪ್ಪ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. ಆದರೂ ಹೈಕಮಾಂಡ್ ಆದೇಶವನ್ನು ಪ್ರಶ್ನಿಸಲು ಸಾಧ್ಯವಿಲ್ಲದ ಕಾರಣಕ್ಕೆ ಒಪ್ಪಿಕೊಳ್ಳಬೇಕಾಗಲಿದೆ.
ಇದನ್ನೂ ಓದಿ: ಬಿ.ವೈ.ವಿಜಯೇಂದ್ರ ಕರ್ನಾಟಕ ಬಿಜೆಪಿಯ ನೂತನ ಸಾರಥಿ: ರಾಜ್ಯಾಧ್ಯಕ್ಷರಾಗಿ ನೇಮಕ