ಬೆಂಗಳೂರು: ಮಾತೃ ಭಾಷೆಯ ಪರಿಕಲ್ಪನೆಯನ್ನು ಬಿಟ್ಟು ಪ್ರಾದೇಶಿಕ ಭಾಷೆಯ ಕಲಿಕೆಯನ್ನು ಅನ್ಯ ರಾಜ್ಯದವರಿಗೂ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ನೂತನ ಕಾನೂನು ತರುವ ಅಗತ್ಯವಿದೆ ಎಂದು ಒಕ್ಕಲಿಗರ ಮಹಾಸಂಸ್ಥಾನ ಮಠದ ಪೂಜ್ಯ ಶ್ರೀ ಚಂದ್ರಶೇಖರನಾಥ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಇಂದು ನಗರದ ಚಾಮರಾಜಪೇಟೆಯ ಬಿ.ಎಸ್ ವೆಂಕಟರಾಮ್ ಕಲಾಭವನದಲ್ಲಿ ಸಮಾಜ ಸೇವಕ ಸುನೀಲ್ ಕುಮಾರ್ ನೇತೃತ್ವದಲ್ಲಿ, ಡಾ.ಬಿ.ಆರ್. ಅಂಬೇಡ್ಕರ್, ಕೂಲಿ ಕಾರ್ಮಿಕರು, ಗೂಡ್ಸ್ ಆಟೋ ಚಾಲಕರ ಸಂಘ, ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅಹಿಂದ ಹಕ್ಕುಗಳ ರಕ್ಷಣಾ ವೇದಿಕೆ ಹಾಗೂ ವಿವಿಧ ದಲಿತ ಸಂಘಟನೆಗಳ ಒಕ್ಕೂಟಗಳ ವತಿಯಿಂದ, ರಾಷ್ಟ್ರೋತ್ಥಾನ ರಕ್ತಕೇಂದ್ರದ ಸಹಯೋಗದೊಂದಿಗೆ 2000 ಯುನಿಟ್ ಕಿಂತ ಹೆಚ್ಚಿನ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಈ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಚಂದ್ರಶೇಖರನಾಥ ಮಹಾಸ್ವಾಮಿಗಳು ಅನ್ಯ ರಾಜ್ಯದವರ ಸಂಖ್ಯೆ ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಮಾತೃಭಾಷೆಯ ಪರಿಕಲ್ಪನೆಯ ಹಿನ್ನಲೆಯಲ್ಲಿ ಅವರು ಪ್ರಾದೇಶಿಕ ಭಾಷೆಯಾದ ಕನ್ನಡವನ್ನು ಕಲಿಯುವಲ್ಲಿ ಆಸಕ್ತಿಯನ್ನು ತೋರಿಸುತ್ತಿಲ್ಲ. ಕನ್ನಡ ಭಾಷೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಬೇಕಾದಲ್ಲಿ ಪಕ್ಕದ ತಮಿಳುನಾಡಿನಲ್ಲಿರುವಂತೆ ಪ್ರತಿಯೊಬ್ಬರಿಗೂ ಪ್ರಾದೇಶಿಕ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು. ಇಂತಹ ಕಡ್ಡಾಯ ಕಾನೂನನ್ನು ನಮ್ಮ ರಾಜ್ಯದಲ್ಲಿ ಅಳವಡಿಸಿದರೆ ಮಾತ್ರ ಕನ್ನಡ ಭಾಷೆ ಇನ್ನಷ್ಟು ಚಾಲ್ತಿಗೆ ಬರಲು ಸಾಧ್ಯ. ರಕ್ತದಾನ ಮಹಾದಾನ, ಇಂತಹ ಜನೋಪಯೋಗಿ ಕಾರ್ಯಕ್ರಮಗಳ ಅಗತ್ಯ ಹೆಚ್ಚಾಗಿದೆ ಎಂದು ಹೇಳಿದರು.
ಸುನೀಲ್ ಕುಮಾರ್ ರಕ್ತದಾನಕ್ಕೆ ಹೊಸ ಮುನ್ನುಡಿ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ಪಿ.ಸಿ ಮೋಹನ್ ಮಾತನಾಡಿ ಸುನೀಲ್ ಕುಮಾರ್ ಸಾಮಾಜಿಕ ಸೇವೆಯ ಮೂಲಕ ರಕ್ತದಾನ ಶಿಬಿರಕ್ಕೆ ಹೊಸ ಮುನ್ನುಡಿ ಬರೆಯಲು ಹೊರಟಿದ್ದಾರೆ, ಇದು ಬಹಳ ಶ್ಲಾಘನೀಯವಾಗಿದೆ. ಪ್ರತಿವರ್ಷ ದೇಶದಲ್ಲಿ 5 ಕೋಟಿ ಯೂನಿಟ್ ರಕ್ತದ ಅವಶ್ಯಕತೆ ಇದೆ. ಪ್ರಸ್ತುತ ಕೇವಲ 2.5 ಕೋಟಿ ಯೂನಿಟ್‌ಗಳಷ್ಟು ಮಾತ್ರ ರಕ್ತ ಲಭ್ಯವಾಗುತ್ತಿದೆ. ಇಂದು ನಡೆಯುತ್ತಿರುವ ಬೃಹತ್ ರಕ್ತದಾನದಂತಹ ಶಿಬಿರಗಳು ಹೆಚ್ಚಾದಲ್ಲಿ ರಕ್ತದ ಕೊರತೆಯನ್ನು ನೀಗಿಸಿ ಲಕ್ಷಾಂತರ ಜನರ ಜೀವ ಉಳಿಸಬಹುದಾಗಿದೆ, ಈ ನಿಟ್ಟಿನಲ್ಲಿ ಸುನೀಲ್ ಕುಮಾರ್ ಸೇವೆಯು ಹೊಸ ದಾಖಲೆಯನ್ನು ಬರೆಯಲಿ,ಇವರ ಸೇವಾ ಕಾರ್ಯವು ರಾಜಕೀಯ ಕ್ಷೇತ್ರಕ್ಕೂ ವಿಸ್ತರಿಸಲಿ ಅದಕ್ಕೆ ನಮ್ಮ ಬೆಂಬಲ ಮತ್ತು ಸಹಕಾರ ಇದೆ ಎಂದರು.
ರಾಜಕೀಯಕ್ಕೆ ಕಾಲ ನಿರ್ಧರಿಸುತ್ತದೆ, ಜನ ಸೇವೆ ಮುಂದವರೆಸುತ್ತೇನೆ: ಕಾರ್ಯಕ್ರಮದ ಆಯೋಜಕ ಸುನೀಲ್ ಕುಮಾರ್ ಮಾತನಾಡಿ ನಾನು ಪ್ರಾಮಾಣಿಕ ಜನ ಸೇವೆ ಮಾಡಲು ಆರಂಭಿಸಿದ್ದಿನಿ. ಯಾವುದೇ ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡುವುದಿಲ್ಲ, ಜನ ಸೇವೆಯನ್ನು ಮುಂದುವರಿಸುತ್ತೇನೆ. ಅಭಿಮಾನಿಗಳು, ಗುರುಹಿರಿಯರ ಮಾರ್ಗದರ್ಶನದಂತೆ ಸಮಾಜ ಸೇವೆ ಮಾಡುತ್ತೇನೆ. ರಾಜಕೀಯ ಪ್ರವೇಶವನ್ನು ಸಮಯ ಸಂದರ್ಭಗಳು ನಿರ್ಧರಿಸುತ್ತದೆ. ಸದ್ಯಕ್ಕೆ ಸೇವೆ ಮಾಡಿ ತೋರಿಸುತ್ತೇನೆ ಇಂದು ಕನ್ನಡ ರಾಜ್ಯೋತ್ಸವ ಮತ್ತು ಪುನೀತ್ ರಾಜ್‌ಕುಮಾರ್ ಪುಣ್ಯ ಸ್ಮರಣೆಯ ಅಂಗವಾಗಿ ಬೃಹತ್ ಮಟ್ಟದ 2000 ಕ್ಕೂ ಹೆಚ್ಚಿನ ಯುನಿಟ್ ರಕ್ತ ಸಂಗ್ರಹದ ಗುರಿಯನ್ನು ಹೊಂದಿದ್ದು ಈ ರಕ್ತದಾನ ಶಿಬಿರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಹಾಗೂ ಬೆಂಬಲ ವ್ಯಕ್ತವಾಗಿದೆ. ಹಾಗೂ ಯುವಕರು ಹೆಚ್ಚಿನ ರೀತಿಯಲ್ಲಿ ಸ್ವಯಂ ಪ್ರೇರಣೆಯಿಂದ ರಕ್ತ ನೀಡುತ್ತಿದ್ದಾರೆ. ಮುಂದೆ ಇದು ದಾಖಲೆಯನ್ನು ನಿರ್ಮಿಸಬೇಕು ಆ ಮೂಲಕ ಚಾಮರಾಜಪೇಟೆಯಲ್ಲಿ ಪ್ರಾರಂಭವಾಗಿರುವ ಈ ಸಮಾಜ ಸೇವೆಯನ್ನು ನಗರದ ಎಲ್ಲಾ ಪ್ರದೇಶಗಳಿಗೂ ವಿಸ್ತರಿಸಲಾಗುವುದು. ಅವರು ಹಾಕಿಕೊಟ್ಟಂತ ಆದರ್ಶಗಳ ಮೇಲೆ ನಾವುಗಳು ಮುನ್ನಡೆಯುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸೂಕ್ತವಾದ ಅಶಕಾಶ ಕೂಡಿಬಂದರೆ ರಾಜಕೀಯ ಕ್ಷೇತ್ರಕ್ಕೆ ಬರುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ್ ಬಿ ಗರುಢಾಚಾರ್, ಬೆಂಗಳೂರು ದಕ್ಷಿಣ ಜಿಲ್ಲೆ ಬಿ.ಜೆ.ಪಿ ಅಧ್ಯಕ್ಷ ಎನ್. ಆರ್ ರಮೇಶ್, ಬಿಜೆಪಿ ಮುಖಂಡ ವೆಂಕಟೇಶ್ ಗೌಡ, ಹಾಗೂ ಜೆಡಿಎಸ್ ಮುಖಂಡ ಶ್ರೀಕಾಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಾವಿರಾರು ಸುನೀಲ್ ಅಭಿಮಾನಿಗಳು ಹಾಗೂ ಸ್ವಯಂ ಸೇವಕರು ಸಾಲಾಗಿ ನಿಂತು ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ:ರೈಲು ನಿಲ್ದಾಣದಲ್ಲಿ ಏಕಾಏಕಿ ಕುಸಿದು ಬಿದ್ದ ಪಾದಚಾರಿ ಸೇತುವೆ.. 20 ಮಂದಿಗೆ ಗಾಯ, 8 ಜನರ ಸ್ಥಿತಿ ಗಂಭೀರ