ಆನೇಕಲ್: ಕನ್ನಡಿಗರನ್ನು ಕೆಣಕಿರುವ ಮಹಾರಾಷ್ಟ್ರ ಮುಖ್ಯಮಂತ್ರಿಯನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿ ಅವರ ಸರ್ಕಾರವನ್ನು ವಜಾಗೊಳಿಸಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ಬಂದ್ ನಡದೆ ನಡೆಯುತ್ತದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿ ರಾಜ್ಯ ಗಡಿ ಅತ್ತಿಬೆಲೆಯಲ್ಲಿ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿ ಮಹಾರಾಷ್ಟ್ರ - ಕರ್ನಾಟಕ ಸರ್ಕಾರಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ. ಈ ವೇಳೆ, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ, ಗಡಿ ಭಾಗದಲ್ಲಿ ಎಂಇಎಸ್ ಕಿಡಿಗೇಡಿಗಳು ಕನ್ನಡ ಧ್ವಜಕ್ಕೆ ಸುಟ್ಟು ಹಾಕಿರುವುದು ಸೇರಿದಂತೆ ಕಾಂತ್ರಿ ಸಂಗೊಳ್ಳಿ ರಾಯಣ್ಣನ ವಿಗ್ರದ ಧ್ವಂಸ ಎಲ್ಲವನ್ನು ನಾನು ಖಂಡಿಸುತ್ತೇವೆ.
ಸಿಎಂ ಬೊಮ್ಮಾಯಿಯವರು ಕೃತ್ಯಕ್ಕೆ ಕಾರಣವಾದ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ನಿಷೇಧಿಸಬೇಕು. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತು ಅವರ ಸರ್ಕಾರವನ್ನು ವಜಾ ಮಾಡಬೇಕು. ಡಿ. 29ರ ಒಳಗೆ ಎಂಇಎಸ್ ಬ್ಯಾನ್ ಮಾಡಬೇಕು. ಇಲ್ಲದಿದ್ದರೆ ಡಿ.31ರಂದು ರಾಜ್ಯಾದ್ಯಂತ ಬಂದ್ ಮಾಡುತ್ತೇವೆ. ಸುಮಾರು 500ಕ್ಕೂಅಧಿಕ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದರು.
ನೈತಿಕ ಬೆಂಬಲಕ್ಕೆ ನಾವು ಒಪ್ಪುವುದಿಲ್ಲ. ಹೋಟೆಲ್, ಬಾರ್ ಮುಚ್ಚಬೇಕು. ಬಸ್ಗಳು ಓಡಾಡುವಂತಿಲ್ಲ. ಕನ್ನಡಿಗರ ಮನೆಗೆ ಬೆಂಕಿ ಬಿದ್ದಿದೆ. ಈಗ ಹುಚ್ಚಾಟ ಮಾಡುವುದು ಸರಿಯಲ್ಲ. ಒಂದು ವೇಳೆ ಮುಚ್ಚದಿದ್ದರೆ, ಆಗುವಂತಹ ಅನಾಹುತಗಳಿಗೆ ನಾವು ಕಾರಣರಲ್ಲ ಎಂದು ಹೋಟೆಲ್ ಮತ್ತು ಬಾರ್ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಇದೇ ವೇಳೆ, ಕನ್ನಡಿಗರ ಬಾವುಟ ಸುಟ್ಟು ರಾಯಣ್ಣನ ಪ್ರತಿಮೆಗೆ ಅವಮಾನ ಮಾಡಿದ ಮರಾಠಿಗರು ಮಹಾರಾಷ್ಟ್ರಕ್ಕೆ ತೆರಳಿ ಎಂದು ಕನ್ನಡ ಜಾಗೃತಿ ವೇದಿಕೆ ಸದಸ್ಯ ಕೆ. ಮಂಜುನಾಥ ವಾಗ್ದಾಳಿ ನಡೆಸಿದರು.
ಪ್ರತಿಭಟನೆ ವೇಳೆ ಹೆದ್ದಾರಿ ತಡೆಯಲು ಯತ್ನಿಸಿದ ಕನ್ನಡಪರ ಹೋರಾಟಗಾರರನ್ನು ಬಂಧಿಸಿ ಆನೇಕಲ್ ಉಪವಿಭಾಗ ಪೊಲೀಸರು ಬಿಡುಗಡೆಗೊಳಿಸಿದರು.