ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶಗಳ ಅಭಿವೃದ್ಧಿ ಸಂಬಂಧ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ ಸುಧಾಕರ್ ಅವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಕೆಆರ್ ಡಿಬಿ) ಸಭೆ ನಡೆಯಿತು. ಸಭೆಯಲ್ಲಿ ಕಾಮಗಾರಿಗಳ ಮಂಜೂರಾತಿ ಸ್ಥಿತಿಗತಿ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಆ ಭಾಗದ ಸಚಿವ ಶರಣಪ್ರಕಾಶ್ ಪಾಟೀಲ್, ಈಶ್ವರ್ ಖಂಡ್ರೆ, ಪ್ರಿಯಾಂಕ್ ಖರ್ಗೆ, ಶರಣಬಸಪ್ಪ ದರ್ಶನಾಪೂರ, ರಹೀಂಖಾನ್, ಶಿವರಾಜ ತಂಗಡಗಿ, ಬಿ.ನಾಗೇಂದ್ರ ಪಾಲ್ಗೊಂಡಿದ್ದರು. 2023-24ನೇ ಸಾಲಿನ ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 5000 ಕೋಟಿ ರೂಪಾಯಿಗಳ ಅನುದಾನ ಮೀಸಲಿಡಲಾಗಿದೆ. ಮಂಡಳಿ ವ್ಯಾಪ್ತಿಗೆ ಬರುವ ಎಲ್ಲಾ ಜಿಲ್ಲೆಗಳಿಗೆ ಸಮಾನ ರೀತಿಯಲ್ಲಿ ಕ್ರಿಯಾಯೋಜನೆ ರೂಪಿಸಿ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತಂದು ಕಳೆದ ಸರ್ಕಾರದ ಅವಧಿಯಲ್ಲಿ ಕುಂಠಿತಗೊಂಡಿರುವ ಕಾಮಗಾರಿಗಳನ್ನು ಹಾಗೂ ಅರೋಗ್ಯ ಇಲಾಖೆ, ಶಿಕ್ಷಣ, ಇಲಾಖೆ, ಎಸ್ ಸಿ & ಎಸ್ ಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸೂಚಿಸಲಾಗಿದೆ.
ಸಭೆಯಲ್ಲಿ ಬೀದರ್ ಕಲಬುರಗಿ ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಇಲಾಖೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮುಖ್ಯ ಅಧಿಕಾರಿಗಳೊಂದಿಗೆ ಪ್ರಸಕ್ತ ಸಾಲಿನಲ್ಲಿ ಕೆಕೆಆರ್ ಡಿಬಿ ವತಿಯಿಂದ ಕೈಗೊಳ್ಳುವ ಕಾಮಗಾರಿ ಬಗ್ಗೆ ಹಾಗೂ ಕಳೆದ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಂಕಿ - ಅಂಶಗಳ ಮಾಹಿತಿ ಪಡೆಯಲಾಯಿತು.
371ಜೆ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಕಳೆದ ಸರ್ಕಾರದ ಅವಧಿಯಲ್ಲಿ ನಡೆದ ಯೋಜನೆಗಳ ಅನುದಾನ ದುರ್ಬಳಕೆ ಹಾಗೂ ಮೈತ್ರಿ ಯೋಜನೆಗಳ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಜರುಗಿಸಬೇಕು. ಅನುದಾನ ದುರ್ಬಳಕೆಗೆ ಸಹಕಾರ ನೀಡಿರುವ ಸರ್ಕಾರಿ ಅಧಿಕಾರಿಗಳನ್ನು ವಜಾಗೊಳಿಸಲು ಎಂದು ಸರ್ವ ಸಚಿವರಿಂದ ನಿರ್ಣಯ ಕೈಗೊಳ್ಳಲಾಯಿತು.
ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಈ ಬಾರಿ 3 ಸಾವಿರ ಕೋಟಿ ರೂಪಾಯಿ ಮಂಜೂರಾಗಿದೆ. ವೆಚ್ಚವಾಗದೇ ಉಳಿದಿರುವ 2 ಸಾವಿರ ಕೋಟಿ ರೂಪಾಯಿ ಇನ್ನೂ ಇದೆ. ಈ ಹಣವನ್ನು ಸಮರ್ಪಕವಾಗಿ ಖರ್ಚು ಮಾಡಿ ನಮ್ಮ ಭಾಗದ 7 ಜಿಲ್ಲೆಗಳ ಅಭಿವೃದ್ಧಿ ಮಾಡಬೇಕು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಒತ್ತಾಯಿಸಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಖರ್ಚಾಗದೆ ಉಳಿದ ಹಣ ಮತ್ತು ಈ ಬಾರಿ ಹಂಚಿಕೆಯಾಗಿರುವ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕವಾಗಿ ವೆಚ್ಚ ಮಾಡಲು ಮುಂಚಿತವಾಗಿ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸಚಿವರುಗಳು ಆಗ್ರಹಿಸಿದರು.
ಹಸಿರೀಕರಣಕ್ಕೆ ಅನುದಾನಕ್ಕೆ ಬೇಡಿಕೆ: ಮಾನದಂಡದ ಪ್ರಕಾರ ದೇಶದಲ್ಲಿ ಶೇ.33ರಷ್ಟು ಹಸಿರು ವಲಯ ವ್ಯಾಪ್ತಿ ಇರಬೇಕು. ರಾಜ್ಯದಲ್ಲಿ ಶೇ.21ರಷ್ಟು ಹಸಿರು ವಲಯ ವ್ಯಾಪ್ತಿ ಇದೆ. ಆದರೆ, ಕಲ್ಯಾಣ ಕರ್ನಾಟಕದಲ್ಲಿ ಶೇ.10ಕ್ಕಿಂತ ಕಡಿಮೆ ಇದ್ದು, ಕೆಕೆಆರ್ ಡಿಬಿ ವತಿಯಿಂದ ಹಸಿರೀಕರಣಕ್ಕೆ 3 ಸಾವಿರ ಕೋಟಿ ರೂಪಾಯಿಗಳ ಪೈಕಿ ಶೇ.10ರಷ್ಟು ನೀಡಬೇಕು ಎಂದು ಮನವಿ ಮಾಡಿದರು.
ಮಧ್ಯ ಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಹಸಿರು ಗೋಡೆ ನಿರ್ಮಾಣದ ಪ್ರಸ್ತಾಪ ಈ ಹಿಂದೆಯೇ ಇತ್ತು. ಹಸಿರು ವಲಯ ಹೆಚ್ಚಾದರೆ ಮಳೆ ಚೆನ್ನಾಗಿ ಆಗುತ್ತದೆ. ತಾಪಮಾನ ಉತ್ತಮವಾಗಿರುತ್ತದೆ. ಹೀಗಾಗಿ ಕಲ್ಯಾಣ ಕರ್ನಾಟಕ ಭಾಗದ ಸಚಿವರ ಪ್ರತ್ಯೇಕ ಸಭೆ ಕರೆಯುವಂತೆ ಸಲಹೆ ಮಾಡಿದರು.
ಇದನ್ನೂಓದಿ: ನಮ್ಮ ಇಲಾಖೆಯಲ್ಲಿ ಯಾವುದೇ ವರ್ಗಾವಣೆ ದಂಧೆ ನಡೆದಿಲ್ಲ: ಸಚಿವ ಈಶ್ವರ್ ಖಂಡ್ರೆ