ಬೆಂಗಳೂರು: ಶಾಸಕ ರಮೇಶ ಜಾರಕಿಹೊಳಿ ಸುತ್ತೂರು ಮಠ ಶ್ರೀಗಳ ಭೇಟಿಯಲ್ಲಿ ವಿಶೇಷತೆ ಏನೂ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು. ವಿಧಾನಸೌಧದಲ್ಲಿ ಸ್ಪೀಕರ್ ಭೇಟಿ ಬಳಿಕ ಮಾತನಾಡಿದ ಅವರು, ಸ್ವಾಮೀಜಿಯವರನ್ನು ನಾವೆಲ್ಲರೂ ಭೇಟಿ ಮಾಡುತ್ತೇವೆ. ಅನ್ನ ದಾಸೋಹ, ಅಕ್ಷರ ದಾಸೋಹದಲ್ಲಿ ತೊಡಗಿಸಿಕೊಂಡಿದ್ದವರನ್ನು ಭೇಟಿ ಮಾಡುತ್ತೇವೆ. ಇದರಲ್ಲಿ ಬೇರೆ ವಿಶೇಷತೆ ಏನೂ ಇಲ್ಲ ಎಂದರು.
ರಮೇಶ ಜಾರಕಿಹೊಳಿ ನನ್ನ ಸ್ನೇಹಿತರು. ಬೆಂಗಳೂರಿನಲ್ಲಿ ಇಲ್ಲ ಅನ್ನೋ ಕಾರಣಕ್ಕೆ ಭೇಟಿಯಾಗಿಲ್ಲ. ಅವರು ಬೆಳಗಾವಿಯಲ್ಲಿ ಇದ್ರು, ಹೀಗಾಗಿ ಭೇಟಿಯಾಗಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಇನ್ನೂ ಮಂತ್ರಿ ಸ್ಥಾನಕ್ಕಾಗಿ ಯತ್ನಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ಜೊತೆ ಆ ಬಗ್ಗೆ ಏನೂ ಚರ್ಚಿಸಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಸರ್ಕಾರ ತಂದವನು ನಾನು, ನಾನು ಮಂತ್ರಿ ಸ್ಥಾನ ಕೇಳ್ತಿನಿ: ರಮೇಶ ಜಾರಕಿಹೊಳಿ
ಸ್ಪೀಕರ್ ಭೇಟಿ ಬಗ್ಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆಯಿಂದ ಆಗಬೇಕಾದಂತಹ ಕೆಲ ಕೆಲಸಗಳಿದ್ದವು. ಅವರ ಕ್ಷೇತ್ರದ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಮಾತನಾಡಲು ಆಹ್ವಾನ ಕೊಟ್ಟಿದ್ದರು. ಸಭಾಧ್ಯಕ್ಷರು ಎಲ್ಲೂ ಬರೋಕೆ ಆಗಲ್ಲ. ಹೀಗಾಗಿ ನಾನೇ ಭೇಟಿ ಕೊಟ್ಟಿದ್ದೇನೆ. ಅವರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅರ್ಜಿಗಳನ್ನು ಕೊಟ್ಟಿದ್ದರು. ಇದೊಂದು ಸೌಜನ್ಯದ ಸಭೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.