ಬೆಂಗಳೂರು: ನಗರದಲ್ಲಿ ಪುಟ್ಟ ಜ್ಯೂಸ್ ಸೆಂಟರ್ ಇಟ್ಟಿರುವ ವ್ಯಕ್ತಿಯೊಬ್ಬರು ಸಮಾಜಮುಖಿ, ದೇಶಪ್ರೇಮದ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಖರೀದಿಗೆ ಭಾರತೀಯ ಯೋಧರು ಯಾವುದೇ ಹಣ ಪಾವತಿ ಮಾಡಬೇಕಾಗಿಲ್ಲ. ಈ ಕುರಿತು ಅಂಗಡಿ ಮುಂಭಾಗದಲ್ಲಿಯೇ ಅಧಿಕೃತ ಫಲಕ ಹಾಕಿದ್ದಾರೆ.
ಮಲ್ಲೇಶ್ವರಂ ಸರ್ಕಲ್ ಬಳಿಯ ಆಟದ ಮೈದಾನದ ಸಮೀಪ ಇರುವ ಸಾಯಿ ಜ್ಯೂಸ್ ಸೆಂಟರ್ ಮಾಲೀಕ ಕೊಡಗು ಮೂಲದವರು. ಇವರ ಹೆಸರು ದಿಲೀಪ್ ಕುಶಾಲಪ್ಪ ನಾಗಂಡ. ಇವರು ಭಾರತೀಯ ಯೋಧರು ಬಂದು ಜ್ಯೂಸ್, ಚಹಾ, ಕಾಫಿ ಸಹಿತ ಏನೇ ಖರೀದಿಸಿದರೂ ದುಡ್ಡು ತೆಗೆದುಕೊಳ್ಳುವುದಿಲ್ಲ.
ಜ್ಯೂಸ್ ಸೆಂಟರ್ ಅತಿ ಚಿಕ್ಕ ಜಾಗದಲ್ಲಿದೆ. ಎಷ್ಟೇ ವಹಿವಾಟು ನಡೆದರೂ ಒಂದು ಕುಟುಂಬ ಕನಿಷ್ಠ ಜೀವನ ನಡೆಸುವಷ್ಟು ಸಾಕಾಗಲಾರದು. ಅದರಲ್ಲೂ ಸಾಮಾಜಿಕ ಕಾಳಜಿ ತೋರುತ್ತಿರುವುದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ದಿಲೀಪ್ ಕುಶಾಲಪ್ಪ ನಾಗಂಡ ಈಟಿವಿ ಭಾರತದ ಜೊತೆ ಮಾತನಾಡಿ, 'ಅಂಗಡಿಯನ್ನು ಮೂರು ವರ್ಷದ ಹಿಂದೆ ಪ್ರಾರಂಭಿಸಿದ್ದೆ. ಅಂದಿನಿಂದ ಭಾರತೀಯ ಯೋಧರು ಏನೇ ತೆಗೆದುಕೊಂಡರೂ ಉಚಿತವಾಗಿ ನೀಡುತ್ತಿದ್ದೇನೆ. ನಮ್ಮ ದೇಶದ ಬಗ್ಗೆ ನಾವು ಅಭಿಮಾನ ಮೆರೆಯಬೇಕು. ಆಫರ್ ಕೊಡುವ ಮೂಲಕ ದೇಶ ಪ್ರೇಮದ ಜಾಗೃತಿ ಮೂಡಿಸುವುದು ನನ್ನ ಉದ್ದೇಶ. ಯೋಧರ ಮೇಲಿನ ಪ್ರೀತಿಗೆ ಮುಂದೆಯೂ ಯಾವುದಾದರು ಯೋಜನೆ ರೂಪಿಸುತ್ತೇನೆ' ಎಂದರು.
ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆ: ಮೊದಲ ದಿನ 11 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು