ಬೆಂಗಳೂರು: ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಜಾತಿ ಪದ್ಧತಿ ತಾಂಡವಾಡುತ್ತಿದೆ. ಇದರಿಂದ ದೇಶ ಹಾಳಾಗುತ್ತಿದ್ದು, ಈ ಪದ್ದತಿಯನ್ನು ದೂರವಿಡುವಂತಾಗಬೇಕು ಎಂದು ಹೈಕೋಟ್ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು. ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ಅವರು ರಚಿಸಿರುವ ಮತ್ತು ಜನಪ್ರಕಾಶನ ಹೊರ ತಂದಿರುವ 'ನ್ಯಾಯಾಂಗ ಒಳನೋಟ ಕೃತಿ ಲೋಕಾರ್ಪಣೆ' ಮಾಡಿದರು. ಬಳಿಕ ಮಾತನಾಡಿದ ಅವರು, ನ್ಯಾಯಾಂಗ ವ್ಯವಸ್ಥೆಯಲ್ಲಿನ ಜಾತಿ ಪದ್ಧತಿಯನ್ನು ಹೋಗಲಾಡಿಸುವುದಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಅಧಿಕಾರಿಗಳ ಹೃದಯವೂ ಕಲ್ಲಾಗಿದೆ: ದೇಶದಲ್ಲಿ ಭ್ರಷ್ಟಾಚಾರ ದೊಡ್ಡ ಪಿಡುಗಾಗಿದೆ. ಇದು ಕ್ಯಾನ್ಸರ್ ಮಾದರಿಯಲ್ಲಿ ಹರಡುತ್ತಿದೆ. ಪ್ರಸ್ತುತ ಭ್ರಷ್ಟಾಚಾರವನ್ನು ಮನೆಯಿಂದಲೇ ತೊಡೆದು ಹಾಕುವ ಕೆಲಸವಾಗಬೇಕು. ಇಲ್ಲವಾದಲ್ಲಿ ಅದು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಶಿಕ್ಷಣದಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದು ದೊಡ್ಡ ಅಧಿಕಾರಿಗಳಾಗುವವರು ದೊಡ್ಡ ಮಟ್ಟದ ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದ್ದಾರೆ. ಕಲ್ಲು ಕಟ್ಟಡಗಳಲ್ಲಿರುವ (ಸರ್ಕಾರಿ ಅಧಿಕಾರಿಗಳು) ಜನರ ಹೃದಯವೂ ಕಲ್ಲಾಗಿರಲಿದೆ. ನ್ಯಾಯಾಲಯ ಆದೇಶ ನೀಡಿ 10 ವರ್ಷ ಕಳೆದೂರು ಅದನ್ನು ಅನುಪಾಲನೆ ಮಾಡುವುದಿಲ್ಲ. ಈ ವ್ಯವಸ್ಥೆ ನೋಡಿದರೆ ನಾವು ನ್ಯಾಯಾಧೀಶರು ಎಂಬುನ್ನು ಮರೆತು ಹೋಗುವಂತಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆತ್ಮಸಾಕ್ಷಿಯೇ ಕಾವಲುಗಾರ: ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಮಾತನಾಡಿ, "ನ್ಯಾಯಧೀಶರಾಗುವವರಿಗೆ ಮಾನವೀಯ ಮೌಲ್ಯಗಳು, ಅಂತಃಕರಣ ವಿದ್ದಲ್ಲಿ ಮಾತ್ರ ಉತ್ತಮ ನ್ಯಾಯ ಸಿಗಲು ಸಾಧ್ಯ. ನ್ಯಾಯಾಧೀಶರು ಬದ್ಧತೆ ಮತ್ತು ಸ್ವತಂತ್ರವಾಗಿ ತೀರ್ಪು ನೀಡಬೇಕು. ನ್ಯಾಯಾಧೀಶರಿಗೆ ಆತ್ಮಸಾಕ್ಷಿಯೇ ಕಾವಲುಗಾರನಾಗಿರಬೇಕು. ಪ್ರಮಾಣ ವಚನವೇ ಅವರ ಧರ್ಮವಾಗಬೇಕು" ಎಂದು ಹೇಳಿದರು.
ಅಂತಃಕರಣವಿರುವ ನ್ಯಾಯಾಧೀಶರ ಸಂಖ್ಯೆ ಕಡಿಮೆ: ಪುಸ್ತಕದ ಲೇಖಕರೂ ಹಾಗೂ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ಮಾತನಾಡಿ, "ಶಾಸಕಾಂಗ, ಕಾರ್ಯಾಂಗದ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಿದೆ. ಸಂವಿಧಾನ ರಕ್ಷಣೆ ಮಾಡಿದ ಹಕ್ಕುಗಳನ್ನು ಜಾರಿ ಗೊಳಿಸಬೇಕಾಗಿದೆ. ಅದಕ್ಕೆ ನ್ಯಾಯಾಂಗ ವ್ಯವಸ್ಥೆಯಿದೆ. ಸಂವಿಧಾನ ಮೂಲ ತತ್ವಗಳಿಗೆ ವಿರುದ್ಧವಾದ ಕಾಯಿದೆಗಳನ್ನು ನ್ಯಾಯಾಂಗ ವ್ಯವಸ್ಥೆ ರದ್ದುಪಡಿಸುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಂತಃಕರಣವಿರುವ ನ್ಯಾಯಾಧೀಶರ ಸಂಖ್ಯೆ ಕಡಿಮೆ ಆಗುತ್ತಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ತಪ್ಪುಗಳು ನಡೆಯುತ್ತಿವೆ. ಅದನ್ನು ಸರಿ ಪಡಿಸುವ ಕಾರ್ಯ ನಡೆಯಬೇಕಾಗಿದೆ. ಈ ಹಿಂದೆ ಈ ರೀತಿಯ ಪ್ರಕರಣಗಳು ನಡೆದಿತ್ತು. ಆದರೆ, ಪ್ರಸ್ತುತ ನಡೆಯುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
ಅಘೋಷಿತ ತುರ್ತು ಪರಿಸ್ಥಿತಿ: ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ ರಂಗನಾಥ್ ಮಾತನಾಡಿ, "ನ್ಯಾಯದಾನ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತಾಗಬೇಕು. ನ್ಯಾಯಾಂಗ ವ್ಯವಸ್ಥೆಯನ್ನು ಸ್ವತಂತ್ರವಾಗಿಯೇ ಉಳಿಸಿಕೊಳ್ಳಬೇಕು. ಅದು ವಕೀಲರಿಂದ ಮಾತ್ರ ಸಾಧ್ಯ. ಪ್ರಸ್ತುತ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಅಘೋಷಿತ ತುರ್ತು ಪರಿಸ್ಥಿತಿ ಇದೆ. ನ್ಯಾಯಮೂರ್ತಿಗಳ ವರ್ಗಾವಣೆ ಕಿರುಕುಳದಿಂದ ತನ್ನ ಹುದ್ದೆಗಳಿಗೆ ರಾಜೀನಾಮೆ ನೀಡುವಂತಹ ಪರಿಸ್ಥಿತಿ ಎದುರಾಗಿದೆ" ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜನಪ್ರಕಾಶ ಪ್ರಕಾಶನದ ಮುಖ್ಯಸ್ಥ ಬಿ.ರಾಜಶೇಖರ್ ಮೂರ್ತಿ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.
ಇದನ್ನೂ ಓದಿ: ದಲಿತ ವರ್ಗ ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗಬೇಕು: ನ್ಯಾ.ನಾಗಮೋಹನ್ ದಾಸ್