ಬೆಂಗಳೂರು: ಹಿಂದಿ ದಿವಸ್ ಆಚರಣೆ ವಿರೋಧಿಸಿ ಜೆಡಿಎಸ್ ನಾಯಕರು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ವಿಧಾನಸೌಧ ಹಾಗೂ ವಿಕಾಸಸೌಧ ನಡುವೆ ಇರುವ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಯಿತು. ಜೆಡಿಎಸ್ ಶಾಸಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಕನ್ನಡ ಹಾಡುಗಳನ್ನು ಹಾಡುವ ಮೂಲಕ ವಿನೂತನವಾಗಿ ಶಾಸಕರು ಪ್ರತಿಭಟಿಸಿದರು. ಶಾಸಕರಾದ ಅನ್ನದಾನಿ, ಶರವಣ, ಬೋಜೇಗೌಡರಿಂದ ಕನ್ನಡ ಗೀತೆಗಳ ಗಾಯನ ಕೇಳಿಬಂತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಕೇಂದ್ರ ಸರ್ಕಾರ ಪದೇ ಪದೇ ಹಿಂದಿ ಏರಿಕೆ ಮಾಡ್ತಾ ಇದೆ. ಕೇಂದ್ರ ಸರ್ಕಾರದ ಇವತ್ತಿನ ಆಚರಣೆಗೆ ವಿರೋಧ ಇದೆ. ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರವೂ ದೇಶದಲ್ಲಿ ನಾನಾ ಭಾಷೆ ಮಾತಾಡುವ ನಾಗರಿಕರು ಇದ್ದಾರೆ ಎಂದರು.
ಈಗಾಗಲೇ ಅಮೃತ ಮಹೋತ್ಸವ ಮಾಡಿದ್ದೇವೆ. ಒಂದು ಭಾಷೆ ಒಂದು ರಾಷ್ಟ್ರ ಎಂಬ ಗೃಹ ಸಚಿವರ ಹೇಳಿಕೆ ಏನಿದೆ.. ಅದು ಭಾವನಾತ್ಮಕ ವಿಚಾರ. ಇವತ್ತು ಉತ್ತರ ಭಾರತದ ಕೆಲವು ಭಾಗದಲ್ಲಿ ಹಿಂದಿ ಇಲ್ಲ. ಅನೇಕ ರಾಜ್ಯದಲ್ಲಿ ಅವರವರ ಭಾಷೆ ಇದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಭಾಷೆ ಕತ್ತನ್ನು ಹಿಸುಕುವ ಕೇಂದ್ರದ ನಡೆಗೆ ವಿರೋಧ ಇದೆ ಎಂದು ಹೇಳಿದರು.
ನಾಗರಿಕರ ತೆರಿಗೆ ಹಣ ಹಿಂದಿ ದಿವಸ್ಗೆ ವ್ಯಯ ಮಾಡೋದು ಎಷ್ಟು ಸರಿ? ಜನ ಈಗಾಗಲೇ ನೆರೆ ಹಾವಳಿಯಿಂದ ತತ್ತರಿಸಿದ್ದಾರೆ. ಅವರ ನೆರವಿಗೆ ಬಾರದೆ ಹಿಂದೆ ಭಾಷೆಯ ವಿಚಾರಕ್ಕೆ ಬರುತ್ತಿದ್ದಾರೆ. ಇದಕ್ಕೆ ಕನ್ನಡಿಗರ ಧಿಕ್ಕಾರ ಇದೆ ಎಂದರು.
ಇದನ್ನೂ ಓದಿ : ರಾಜ್ಯದಲ್ಲಿ ಹಿಂದಿ ಹೇರುವ ಪ್ರಶ್ನೆಯೇ ಇಲ್ಲ, ಕನ್ನಡಕ್ಕೂ ಎಲ್ಲ ಸಮ್ಮಾನ ಸಿಗಬೇಕು: ಸಿ ಟಿ ರವಿ