ಬೆಂಗಳೂರು: ನಾಳೆ ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ರಾತ್ರಿ ಜೆಡಿಎಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆ ನಡೆಯಿತು. ತುಮಕೂರು ರಸ್ತೆಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 27 ಮಂದಿ ಶಾಸಕರು ಭಾಗವಹಿಸಿದ್ದರೆ, ಐವರು ಗೈರಾಗಿದ್ದರು.
ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ಶಾಸಕರಾದ ಗುಬ್ಬಿ ಶ್ರೀನಿವಾಸ್, ಶಿವಲಿಂಗೇಗೌಡ, ಶ್ರೀನಿವಾಸ್ ಗೌಡ, ಎ.ಟಿ. ರಾಮಸ್ವಾಮಿ ಹಾಗೂ ಜಿ.ಟಿ. ದೇವೇಗೌಡ ಸಭೆಗೆ ಹಾಜರಾಗಿಲ್ಲ. ಅಭ್ಯರ್ಥಿ ಕುಪೇಂದ್ರರೆಡ್ಡಿ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮತ್ತಿತರ ನಾಯಕರು ಸಭೆಯಲ್ಲಿ ಹಾಜರಿದ್ದರು. ಸಭೆಯ ಆರಂಭದಲ್ಲಿ ಮೊದಲ ಹಾಗೂ ದ್ವಿತೀಯ ಪ್ರಾಶಸ್ತ್ಯದ ಮತದಾನದ ಬಗ್ಗೆ ಶಾಸಕರಿಗೆ ಮಾಹಿತಿ ನೀಡಲಾಗಿದೆ.
ಶಾಸಕರ ಜೊತೆ ಸುದೀರ್ಘ ಚರ್ಚೆ ನಡೆಸಿದ ಕುಮಾರಸ್ವಾಮಿ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ಎಲ್ಲರೂ ಸಹಕಾರ ನೀಡಬೇಕೆಂದು ಶಾಸಕರಿಗೆ ಮನವಿ ಮಾಡಿದ್ದು, ಅವರ ಮಾತಿಗೆ ಎಲ್ಲಾ ಶಾಸಕರು ಸ್ಪಂದಿಸಿದ್ದಾರೆ. ಗೈರಾಗಿರುವ ಐವರು ಶಾಸಕರಲ್ಲಿ ಶ್ರೀನಿವಾಸ್ ಗೌಡ ಅವರನ್ನು ಹೊರತುಪಡಿಸಿ ಎಲ್ಲರೂ ಜೆಡಿಎಸ್ ಅಭ್ಯರ್ಥಿಗೆ ಮತ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ದಳಪತಿಗಳಿಂದ ಕೊನೆಯ ಹಂತದ ಕಸರತ್ತು ನಡೆದಿದೆ. ಕಾಂಗ್ರೆಸ್ ಹೈಕಮಾಂಡ್ ಮೂಲಕ ರಾಜ್ಯ ನಾಯಕರ ಮೇಲೆ ಒತ್ತಡ ಹಾಕಿಸಲು ತಂತ್ರಗಾರಿಕೆ ಹೆಣೆಯಲಾಗಿದೆ. ಕಾಂಗ್ರೆಸ್ನ ಐದಾರು ಮಂದಿ ಶಾಸಕರು ಜೆಡಿಎಸ್ ಅಭ್ಯರ್ಥಿಗೆ ಮತ ಚಲಾಯಿಸುವ ಸಾಧ್ಯತೆಯೂ ಹೆಚ್ಚಿದೆ. ಎರಡನೇ ಪ್ರಾಶಸ್ತ್ಯದ ಮತಗಳನ್ನು ಹೈಕಮಾಂಡ್ ನಿರ್ದೇಶನದೊಂದಿಗೆ ಪಡೆಯಲು ನಿರಂತರವಾಗಿ ದಳಪತಿಗಳು ಕಸರತ್ತು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹೋಟೆಲ್ನಲ್ಲೇ ವಾಸ್ತವ್ಯ: ಹೋಟೆಲ್ನಲ್ಲೇ ವಾಸ್ತವ್ಯ ಹೂಡಿರುವ ಜೆಡಿಎಸ್ ಶಾಸಕರು, ನಾಳೆ ಬೆಳಗ್ಗೆ ನೇರವಾಗಿ ಅಲ್ಲಿಂದಲೇ ವಿಧಾನಸೌಧಕ್ಕೆ ಆಗಮಿಸಿ ಮತದಾನ ಮಾಡಲಿದ್ದಾರೆ. 'ನನಗೆ ರೆಸಾರ್ಟ್ ಸಂಸ್ಕೃತಿ ಇಷ್ಟವಾಗುವುದಿಲ್ಲ. ಹಾಗಾಗಿ ಹೋಟೆಲ್ನಲ್ಲಿ ಉಳಿದುಕೊಳ್ಳಲಿಲ್ಲ. ಈಗ ತಮ್ಮ ಕ್ಷೇತ್ರದಿಂದ ಬೆಂಗಳೂರಿಗೆ ಬರುತ್ತಿದ್ದೇನೆ. ಬೆಳಗ್ಗೆ ಜೆಪಿ ಭವನಕ್ಕೆ ಬರುವಂತೆ ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್ ಪಕ್ಷದ ಚಿಹ್ನೆಯಡಿ ಆಯ್ಕೆಯಾಗಿದ್ದೇನೆ. ಪಕ್ಷ ನೀಡುವ ನಿರ್ದೇಶನದಂತೆ ನಡೆದುಕೊಳ್ಳುತ್ತೇನೆ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ' ಎಂದು ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದ್ದಾರೆ.
ವಿಪ್ ಜಾರಿ: ಸಭೆ ನಂತರ ಜೆಡಿಎಸ್ ಅಭ್ಯರ್ಥಿ ಡಿ. ಕುಪೇಂದ್ರ ರೆಡ್ಡಿಗೆ ಮತ ನೀಡುವಂತೆ ಎಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ. ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 106ರಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4ರವರೆಗೆ ರಾಜ್ಯಸಭಾ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಪಕ್ಷದ ಅಧಿಕೃತ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಮತ ಚಲಾಯಿಸಬೇಕೆಂದು ಜೆಡಿಎಸ್ ಸಚೇತಕ ವೆಂಕಟರಾವ್ ನಾಡಗೌಡ ಪಕ್ಷದ ವತಿಯಿಂದ ವಿಪ್ ನೀಡಿದ್ದಾರೆ.
ಇದನ್ನೂ ಓದಿ: ಬೆಳಗ್ಗೆ ವಿಧಾನಸೌಧಕ್ಕೆ ಬಂದು ಸೇರುವಂತೆ ಪಕ್ಷದ ಶಾಸಕರಿಗೆ ಸಿಎಂ ಸೂಚನೆ