ಬೆಂಗಳೂರು : ಪಕ್ಷಕ್ಕೆ ತಲೆಬಿಸಿಯಾಗಿರುವ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿವಾದವನ್ನು ಸೋಮವಾರ ಅಂತಿಮಗೊಳಿಸಲು ಜೆಡಿಎಸ್ ನಿರ್ಧರಿಸಿದೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಾಳೆ ನಡೆಯಲಿರುವ ಐವತ್ತು ಪ್ರಮುಖ ನಾಯಕರ ಸಮ್ಮುಖದಲ್ಲಿ ಹಾಸನ ಕ್ಷೇತ್ರದ ಟಿಕೆಟ್ ಯಾರಿಗೆ ಎಂಬುದು ನಿರ್ಧಾರವಾಗಲಿದೆ. ಸಭೆಯಲ್ಲಿ ಪಾಲ್ಗೊಳ್ಳುವ ಪಕ್ಷದ ಪ್ರಮುಖರು ಯಾರಿಗೆ ಟಿಕೆಟ್ ನೀಡಬೇಕು ಎಂದು ಹೇಳುತ್ತಾರೋ ಅವರಿಗೇ ಟಿಕೆಟ್ ನೀಡಲು ವರಿಷ್ಠರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾಸನದಲ್ಲಿ ಸ್ಪರ್ಧೆ ಮಾಡಲು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಉತ್ಸುಕರಾಗಿದ್ದಾರೆ. ಇದೇ ಸಂದರ್ಭದಲ್ಲಿ ಸ್ವರೂಪ್ ಅವರಿಗೆ ಟಿಕೆಟ್ ಕೊಡಿಸಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಉತ್ಸುಕರಾಗಿದ್ದಾರೆ. ಇದರ ಪರಿಣಾಮವಾಗಿ ಹಾಸನ ಕ್ಷೇತ್ರದ ಟಿಕೆಟ್ ವಿಷಯ ಕಚ್ಚಾಟಕ್ಕೆ ತಿರುಗಿದ್ದು, ಇಡೀ ರಾಜ್ಯದ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ ವಿವಾದದ ಇತ್ಯರ್ಥಕ್ಕಾಗಿ ಸೋಮವಾರ ಪಕ್ಷದ ಕಚೇರಿಯಲ್ಲಿ ದಳಪತಿಗಳ ನಿರ್ಣಾಯಕ ಸಭೆ ನಡೆಯಲಿದೆ.
ಪ್ರಧಾನಿ ಮೋದಿಯವರು ಹಳೆ ಮೈಸೂರಿಗೆ ಕಾಲಿಡುವ ಮುನ್ನವೇ ಶಕ್ತಿ ಪ್ರದರ್ಶನ ನಡೆಸಲು ಜೆಡಿಎಸ್ ನಿರ್ಧರಿಸಿದ್ದು, ಫೆಬ್ರವರಿ 27 ರಂದು ಚನ್ನಪಟ್ಟಣದಲ್ಲಿ ಬೃಹತ್ ಸಮಾವೇಶ ನಡೆಸಲಿದೆ. ಪ್ರಧಾನಿ ನರೇಂದ್ರ ಮೋದಿ ಮಾರ್ಚ್ ಎರಡನೇ ವಾರ ಮದ್ದೂರಿಗೆ ಆಗಮಿಸಲಿದ್ದು, ಮೈಸೂರು-ಬೆಂಗಳೂರು ದಶಪಥ ರಸ್ತೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರಮವನ್ನು ಹಳೆ ಮೈಸೂರು ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಅದಕ್ಕೂ ಮುನ್ನ ಈ ಭಾಗದಲ್ಲಿ ತನ್ನ ಶಕ್ತಿ ಪ್ರದರ್ಶನ ನಡೆಸಲು ಜೆಡಿಎಸ್ ತೀರ್ಮಾನಿಸಿದೆ.
ಪಂಚರತ್ನ ಯಾತ್ರೆ ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಯಶಸ್ವಿಯಾಗಿ ನಡೆದಿದ್ದು, ಅದಕ್ಕೆ ಪೂರಕವಾಗಿ ಚನ್ನಪಟ್ಟಣದಲ್ಲಿ ಸಮಾವೇಶ ನಡೆಸಲು ಜೆಡಿಎಸ್ ನಿರ್ಧರಿಸಿದೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಬಲವನ್ನು ಹೆಣಿಯದಿದ್ದರೆ ಬಿಜೆಪಿಗೆ ಯಶಸ್ಸು ಸಿಗುವುದು ಕಷ್ಟ ಎಂಬುದು ಕಮಲ ಪಾಳೆಯಕ್ಕೆ ಅರಿವಾಗಿದೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಹಳೆ ಮೈಸೂರಿನ ಮೇಲೆ ಗಮನ ಕೇಂದ್ರೀಕರಿಸಿದ್ದು, ಇದಕ್ಕೆ ಟಕ್ಕರ್ ಕೊಡುವುದು ಜೆಡಿಎಸ್ ನಾಯಕರ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.
ಪ್ರಧಾನಿ ಮೋದಿ ಕೊಡುಗೆ ಏನು ? ಹೆಚ್ಡಿಕೆ ಪ್ರಶ್ನೆ : ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಕೊಡುಗೆ ಏನು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಜೆಡಿಎಸ್ ನೇತೃತ್ವದ ಪಂಚರತ್ನ ರಥಯಾತ್ರೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಗೆ ಆಗಮಿಸಿದ್ದು, ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿರುವುದು ರೈತರು. ಆದರೂ ಸರ್ಕಾರ ಇನ್ನೂ ಕೆಲವರಿಗೆ ಭೂಸ್ವಾದೀನದ ಹಣವನ್ನು ಕೊಟ್ಟಿಲ್ಲ. ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡುತ್ತಿರುವುದೊಂದೇ ಅವರ ಕೊಡುಗೆಯಾಗಿದೆ ಎಂದು ಟೀಕಿಸಿದರು.
ಇದನ್ನೂ ಓದಿ : ಮೋದಿ ಬಂದು ದೇಶ ಬದಲಾವಣೆ ಮಾಡಿಲ್ಲ : ಹೆಚ್ ಡಿ ಕುಮಾರಸ್ವಾಮಿ