ಬೆಂಗಳೂರು: ಮುಖ್ಯಮಂತ್ರಿಯಾಗು ಅಂದರೆ ಆಗುತ್ತೇನೆ. ಆದರೆ, ಸ್ವತಂತ್ರ ಸರ್ಕಾರದ ಮೂಲಕ ಸಿಎಂ ಆಗಬೇಕು. ಯಾರದ್ದೋ ಜೊತೆ ಸೇರಿ ಸರ್ಕಾರ ಮಾಡಲು ಆಗಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಗೋವಿಂದರಾಜನಗರದ ಕಾವೇರಿಪುರ ವಾರ್ಡ್ನಲ್ಲಿ ಕಳೆದ ರಾತ್ರಿ ಹಮ್ಮಿಕೊಂಡಿದ್ದ ಐದನೇ ದಿನ ಜನತಾ ಮಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಚಿತ ಶಿಕ್ಷಣ, ಉಚಿತ ಆರೋಗ್ಯ ನಿಮಗೆ ಸಿಗಬೇಕು. ಸ್ವಾಭಿಮಾನದ ಬದುಕು ಕಟ್ಟಬೇಕೆಂದರೆ ಜನತಾ ದಳ ಅಧಿಕಾರಕ್ಕೆ ಬರಬೇಕು. ನಮಗೂ ಒಂದು ಅವಕಾಶ ಕೊಟ್ಟು ನೋಡಿ ಎಂದು ಮನವಿ ಮಾಡಿದರು.
ಪಿಎಸ್ಐ ಹಗರಣದ ಬಗ್ಗೆ ಮಾತನಾಡುತ್ತಾ, ಮೊನ್ನೆ ಅಧಿಕಾರಿಗಳ ಬಂಧನವಾಗಿದೆ. ಒಂದು ಸರ್ಕಾರಿ ಕೆಲಸ ಸಿಗಬೇಕು ಅಂದರೆ ಲಕ್ಷಾಂತರ ಹಣ ಕೊಡಬೇಕು. ಪಿಎಸ್ಐ ಕೆಲಸಕ್ಕೆ ಹಣ ಕೊಟ್ಟಿದ್ದಾರಲ್ಲ, ಎಲ್ಲಿ ಸಾಲ ಮಾಡಿದ್ದಾರೋ ಗೊತ್ತಿಲ್ಲ.
ರಾಜ್ಯ ಸರ್ಕಾರ ತೆರಿಗೆ ಹಣವನ್ನು ಸ್ವೇಚ್ಚಾಚಾರವಾಗಿ ಖರ್ಚು ಮಾಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಾಗ 24 ಕೋಟಿ ರೂ. ಖರ್ಚು ಮಾಡಿದ್ದಾರೆ. ಇಂದು ಆ ರಸ್ತೆ ಕಿತ್ತು ಹೋಗ್ತಿದೆ. ಮತ್ತೆ ಸಿಲಿಂಡರ್ ದರ ಏರಿಕೆಯಾಗಿದೆ. ನಿತ್ಯ ದರ ಏರಿಕೆ ಆಗುತ್ತಿದೆ. ವಿದ್ಯುತ್ ಬಿಲ್ ಕೂಡ ಹೆಚ್ಚಾಗುತ್ತಿದೆ. ಸರ್ಕಾರ ನಿಮ್ಮನ್ನು ಸುಲಿಗೆ ಮಾಡುತ್ತಿದೆ ಎಂದು ದೂರಿದರು.
ಇದನ್ನೂ ಓದಿ: ಆರಗ, ಸಿದ್ದು, ಹೆಚ್ಡಿಕೆ ಸೇರಿ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ 179 ಜನಪ್ರತಿನಿಧಿಗಳು