ಬೆಂಗಳೂರು: ಇಂದು ಕೈಗಾರಿಕಾ ಇಲಾಖೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಆಹ್ವಾನ ಇದ್ದರೂ ಮಾಜಿ ಸಚಿವ ಜಗದೀಶ್ ಶೆಟ್ಟರ್ ಗೈರಾಗಿದ್ದರು. ಈ ಮೂಲಕ ಸಿಎಂ ಬೊಮ್ಮಾಯಿ ಹಾಗೂ ಶೆಟ್ಟರ್ ನಡುವಿನ ಅಂತರ ಸ್ಪಷ್ಟವಾಗಿದೆ.
ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಸರ್ಕಾರದಲ್ಲಿ ಸಚಿವ ಸ್ಥಾನ ನಿರಾಕರಿಸಿದ ಜಗದೀಶ್ ಶೆಟ್ಟರ್, ಇತ್ತೀಚೆಗೆ ಮುಖ್ಯಮಂತ್ರಿ ಕರೆದಿದ್ದ ಔತಣ ಕೂಟಕ್ಕೂ ಆಗಮಿಸಿರಲಿಲ್ಲ. ಇದಲ್ಲದೇ ಬಹುತೇಕ ಬೊಮ್ಮಾಯಿ ಕಾರ್ಯಕ್ರಮಗಳಿಂದ ಶೆಟ್ಟರ್, ದೂರ ಉಳಿದಿರುವುದು ರಾಜಕೀಯ ವೈಮನಸ್ಸು ಎತ್ತಿ ತೋರುವಂತಿತ್ತು.
ಉದ್ಯಮಿಯಾಗು ಉದ್ಯೋಗ ನೀಡು:
ಕೈಗಾರಿಕಾ ಇಲಾಖೆಯಿಂದ ನಡೆದ 'ಉದ್ಯಮಿಯಾಗು ಉದ್ಯೋಗ ನೀಡು' ಕಾರ್ಯಕ್ರಮಕ್ಕೆ ನಗರದ ಅನೇಕ ಕಾಲೇಜಿನಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಣದ ನಂತರ ಉದ್ಯಮ ಪ್ರಾರಂಭಿಸಲು ಸರ್ಕಾರದಿಂದ ಏನು ಸವಲತ್ತುಗಳಿವೆ ಎಂಬುದರ ಬಗ್ಗೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಯಿತು.
ನಾರಾಯಣ- ಸುಧಾ ಮೂರ್ತಿ ನಮಗೆ ಮಾದರಿ
ಸಮಾರಂಭದಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಇನ್ಫೋಸಿಸ್ ಸಂಸ್ಥೆಯ ಸುಧಾಮೂರ್ತಿ - ನಾರಾಯಣ ಮೂರ್ತಿ, ವಿಆರ್ ಎಲ್ ಸಂಸ್ಥೆಯ ವಿಜಯ್ ಸಂಕೇಶ್ವರ್ ಅಂತಹ ಪ್ರಸಿದ್ಧ ವ್ಯಕ್ತಿಗಳು ಸ್ವಂತ ಉದ್ಯಮವನ್ನು ಚಿಕ್ಕ ರೂಪದಲ್ಲಿ ಪ್ರಾರಂಭ ಮಾಡಿ ಛಲದಿಂದ ಉದ್ಯಮವನ್ನು ದೊಡ್ಡ ಮಟ್ಟದವರೆಗೆ ಬೆಳೆಸಿದರು. ಈ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದಾರೆ. ಈ ರೀತಿ ನೀವು ಆಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನಲ್ಲಿ ಜೂನಿಯರ್.. ಉದ್ಯಮಿಯಾಗಿ ಸಿನೀಯರ್
ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಮುರುಗೇಶ್ ನಿರಾಣಿ ಹಾಗೂ ಎಂಟಿಬಿ ನಾಗರಾಜ್ ಸಣ್ಣ ಉದ್ಯಮ ಸ್ಥಾಪನೆ ಮಾಡಿ ಬೃಹತ್ ಮಟ್ಟಕ್ಕೆ ಬೆಳದಿದ್ದಾರೆ. ನಿರಾಣಿ ಸಣ್ಣ ವೆಲ್ಡಿಂಗ್ ಉದ್ಯಮ ಸ್ಥಾಪಿಸಿ ಬೃಹತ್ ಮಟ್ಟಕ್ಕೆ ಬೆಳದಿದ್ದಾರೆ. ಕಾಲೇಜಿನಲ್ಲಿ ನಾಲ್ಕು ವರ್ಷ ಜೂನಿಯರ್, ಆದರೆ ಉದ್ಯಮದಲ್ಲಿ ಸಾವಿರ ಪಟ್ಟು ಸೀನಿಯರ್ ಆಗಿದ್ದಾರೆ. ಇನ್ನು ಎಂಟಿಬಿ ಇಟ್ಟಿಗೆ ರಾಜ್ಯದಲ್ಲಿ ನಂಬರ್ ಒನ್, ಇಡಿ ರಾಜ್ಯದಲ್ಲಿ ಅವರ ಉದ್ಯಮ ಪ್ರಸಿದ್ಧಿ ಪಡೆದಿದೆ. ರಾಜ್ಯ ಕಟ್ಟುವಲ್ಲಿ ಅವರ ಇಟ್ಟಿಗೆ ಪ್ರಮುಖ ಪಾತ್ರ ವಹಿಸಿದೆ ಎಂದರು.
ಹಣ ಇದ್ದರೆ ಉದ್ಯಮ ಸ್ಥಾಪನೆ ಆಗಲ್ಲ, ಶ್ರಮ ಇದ್ರೆ ಮಾತ್ರ ಉದ್ಯಮ ಸ್ಥಾಪನೆ ಮಾಡಬಹುದು. ಅದಕ್ಕೆ ಇವರಿಬ್ಬರೂ ಉದಾಹರಣೆ. ಇಲ್ಲಿ ಕುಳಿತಿರುವ ವಿದ್ಯಾರ್ಥಿಗಳು ಮುಂದೆ ಸ್ಟೇಜ್ ಮೇಲೆ ಬರಬೇಕು. ಆ ಮಟ್ಟಕ್ಕೆ ಇಲ್ಲಿರುವ ವಿದ್ಯಾರ್ಥಿಗಳು ಬೆಳೆಯಬೇಕು ಎಂದು ಬೊಮ್ಮೊಯಿ ಸಲಹೆ ನೀಡಿದರು.
ಇದನ್ನೂ ಓದಿ: ತಂದೆಯಿಂದಲೇ ಮಗನ ಬರ್ಬರ ಹತ್ಯೆ.. ಆಸ್ತಿ ವಿಚಾರವಾಗಿ ಕೊಲೆ ಮಾಡಿರುವ ಶಂಕೆ