ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಹಾಗೂ ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ 50 ಕಡೆಗಳಲ್ಲಿ ಏಕಕಾಲಕ್ಕೆ 300ಕ್ಕೂ ಹೆಚ್ಚು ಆದಾಯ ತೆರಿಗೆ (ಐಟಿ) ಅಧಿಕಾರಿಗಳಿಂದ ದಾಳಿ ನಡೆದಿದೆ. ಬೆಂಗಳೂರು, ಬಾಗಲಕೋಟೆ ಸೇರಿದಂತೆ ಹಲವೆಡೆ ದಾಳಿ ನಡೆಸಿರುವ ಅಧಿಕಾರಿಗಳು ಮನೆ, ಕಚೇರಿ ಹಾಗೂ ಸಂಬಂಧಿಕರ ನಿವಾಸಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲಾತಿಗಳ ಬಗ್ಗೆ ಶೋಧ ನಡೆಸುತ್ತಿದ್ದಾರೆ.
ರಾಮಕೃಷ್ಣ ಹೆಗಡೆ ನಗರ ಸೇರಿ ಬೆಂಗಳೂರಿನ 50ಕ್ಕೂ ಹೆಚ್ಚು ಕಡೆ ಗುತ್ತಿಗೆದಾರರು ಹಾಗೂ ಚಾರ್ಟೆಡ್ ಅಕೌಂಟೆಂಟ್ಸ್ ಮನೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, ಬೆಳಗ್ಗೆ 5 ಗಂಟೆಯಿಂದಲೇ ದಾಖಲಾತಿಗಳ ಪರಿಶೋಧನೆ ಕೆಲಸ ನಡೆಯುತ್ತಿದೆ. ನೀರಾವರಿ ಇಲಾಖೆಯಡಿ ಬರುವ ಕಾವೇರಿ, ಕೃಷ್ಣ ಭಾಗ್ಯ ಜಲ ನಿಗಮಗಳ ಟೆಂಡರ್ನಲ್ಲಿ ಕೋಟ್ಯಂತರ ರೂಪಾಯಿ ಗೋಲ್‌ಮಾಲ್ ಆಗಿದೆ ಎನ್ನಲಾಗುತ್ತಿದೆ.
ಗೋಲ್‌ಮಾಲ್ ಮೂಲಕ ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿ ತೆರಿಗೆ ವಂಚನೆ ನಡೆಸಿರುವ ಬಗ್ಗೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ರಾಮಕೃಷ್ಣ ಹೆಗಡೆ ನಗರದ ನಿವಾಸಿ ನೀರಾವರಿ ಇಲಾಖೆಯ ಚಾರ್ಟೆಡ್ ಅಕೌಂಟೆಂಟ್ ಎನ್ನಲಾಗುತ್ತಿರುವ ಅಮಲಾ ಎಂಬುವರ ಮನೆ ಸೇರಿದಂತೆ ವಿವಿಧ ಕಡೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ರಾಹುಲ್ ಎಂಟರ್ ಪ್ರೈಸಸ್ ಮೇಲೆ ರೇಡ್:
ಸಹಕಾರ ನಗರದಲ್ಲಿರುವ ರಾಹುಲ್ ಎಂಟರ್‌ಪ್ರೈಸಸ್ ಮೇಲೆ ಐಟಿ ದಾಳಿ ನಡೆಸಿ ಓರ್ವನನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ರಾಹುಲ್ ಎಂಟರ್‌ಪ್ರೈಸಸ್ ನೀರಾವರಿ ಇಲಾಖೆಯ ಟೆಂಡರ್ಗಳಿಗೆ ಕಬ್ಬಿಣ ಹಾಗೂ ಸಿಮೆಂಟ್ ಸರಬರಾಜು ಮಾಡುತ್ತಿತ್ತು ಎನ್ನಲಾಗಿದೆ. ಮೇಲ್ನೋಟಕ್ಕೆ ಅಕ್ರಮ ಕಂಡು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಪರಿಶೀಲನೆ ವೇಳೆ ಮೂಟೆಗಟ್ಟಲೆ ದಾಖಲೆಗಳು ಪತ್ತೆಯಾಗಿವೆ.
ನೀರಾವರಿ ಇಲಾಖೆಗೆ ಸಂಬಂಧಿಸಿದ 30 ಕಾಂಟ್ರಾಕ್ಟರ್ಗಳ ಮನೆಗಳ ಮೇಲೂ ದಾಳಿ ನಡೆದಿದೆ. ಕಾಂಟ್ರಾಕ್ಟರ್ಗಳಿಗೆ ಕಬ್ಬಿಣ ಹಾಗು ಇತರ ಸರಕುಗಳನ್ನು ಗುತ್ತಿಗೆದಾರರು ಸರಬರಾಜು ಮಾಡುತ್ತಿದ್ದರು. ಗುತ್ತಿಗೆದಾರರಿಗೆ ಇದ್ದ ಚಾರ್ಟೆಡ್ ಅಕೌಂಟೆಂಟ್ಗಳು ಮತ್ತು ಅಂಡಿಗಳಿಗೆ ಇದ್ದ ಚಾರ್ಟೆಡ್ ಅಕೌಂಟೆಂಟ್ಗಳ ಮನೆ ಮೇಲೆ ದಾಳಿ ನಡೆದಿದೆ.
ಎಲ್ಲಾ ಸಿದ್ಧತೆಯೊಂದಿಗೆ ಏಕಕಾಲದಲ್ಲಿ ದಾಳಿ ನಡೆದಿದ್ದು, ಐಟಿ ಅಧಿಕಾರಿಗಳು 120 ಇನ್ನೋವಾ ಕ್ರಿಸ್ಟಾ ಕಾರುಗಳನ್ನು ಬುಕ್ ಮಾಡಿಕೊಂಡಿದ್ದರು.
ಬಿಎಸ್ವೈ ಆಪ್ತನ ಮನೆ ಮೇಲೆ ದಾಳಿ:
ಹಲವು ವರ್ಷಗಳಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಬಣದಲ್ಲಿ ಉಮೇಶ್ ಎಂಬುವರು ಗುರುತಿಸಿಕೊಂಡಿದ್ದರು. ರಾಜಾಜಿನಗರದ ಭಾಷ್ಯಂ ಸರ್ಕಲ್ನಲ್ಲಿರುವ ಉಮೇಶ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಬಾಡಿಗೆಗೆ ವಾಸವಿರುವ ಮನೆ ಮೇಲೆ ಸುಮಾರು 10ಕ್ಕೂ ಹೆಚ್ಚು ಅಧಿಕಾರಿಗಳು ರೇಡ್ ಮಾಡಿದ್ದಾರೆ. ಸುಮಾರು 15 ವರ್ಷಗಳಿಂದ ಇದೇ ಮನೆಯಲ್ಲಿ ವಾಸವಾಗಿದ್ದರು.
ಈ ಹಿಂದೆ ಉಮೇಶ್ ಬಿಎಂಟಿಸಿ ಚಾಲಕನಾಗಿದ್ದು, ಬಳಿಕ ಗುತ್ತಿಗೆದಾರನಾಗಿ ಗುರುತಿಸಿಕೊಂಡಿದ್ದರು. ರಾಮಯ್ಯ ಲೇಔಟ್ ನಾಗಸಂದ್ರ ಮೆಟ್ರೋ ಹಿಂಭಾಗದಲ್ಲಿ ಹೊಸದಾಗಿ ಬಂಗಲೆ ಕಟ್ಟಿಸಿದ್ದರು. ಬಂಗಲೆಗೆ ಯಡಿಯೂರಪ್ಪನವರ ಮನೆಗೆ ಇಟ್ಟಿರುವ ಧವಳಗಿರಿ ಎಂದು ಹೆಸರಿಟ್ಟಿದ್ದಾರೆ. ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆ ಸೇರಿ ಉಮೇಶ್ಗೆ ಸಂಬಂಧಿತ 6 ಕಡೆಗಳಲ್ಲಿ ಐಟಿ ದಾಳಿ ನಡೆದಿದೆ.
ಯಾರು ಈ ಉಮೇಶ್:
ಉಮೇಶ್ ಚಿಕ್ಕ ಮನೆಗೇ ಭಾರೀ ಪ್ರಮಾಣದ ಸರ್ಕಾರಿ ಭದ್ರತೆ ಹಾಕಿಸಿಕೊಂಡಿದ್ದರು. ಆಯನೂರು ಮೂಲದ ಉಮೇಶ್ ಅವರು ಆಯನೂರು ಮಂಜುನಾಥ್ ಅವರಿಗೆ ಮೊದಲು ಪಿಎ ಆಗಿದ್ದರು. ಉಮೇಶ್ ಈಗಲೂ ಕೂಡ ಸರ್ಕಾರಿ ವಾಹನವನ್ನ ಬಳಸುತ್ತಿದ್ದಾರೆ. ವರ್ಗಾವಣೆ, ಕಡತ ವಿಲೇವಾರಿಯಂತಹ ಕೆಲಸ ಉಮೇಶ್ ಮಾಡುತ್ತಿದ್ದರು. ನೀರಾವರಿ ಇಲಾಖೆಯ ಪ್ರಮುಖ ಕಡತಗಳನ್ನ ವಿಲೇವಾರಿ ಮಾಡುತ್ತಿದ್ದ ಆರೋಪವಿದೆ.
ಇದನ್ನೂ ಓದಿ: ಹಾನಗಲ್‌ಗೆ ಶಿವರಾಜ್ ಸಜ್ಜನ್, ಸಿಂಧಗಿಗೆ ರಮೇಶ್ ಭೂಸನೂರು: ಬೆೈಎಲೆಕ್ಷನ್‌ಗೆ ಬಿಜೆಪಿ ರೆಡಿ