ಬೆಂಗಳೂರು: ''ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಲ್ಲಿ ಮುಂದುವರೆಸುವುದು ಅಥವಾ ಬಿಡುವುದನ್ನು ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ'' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ''ಮುಖ್ಯಮಂತ್ರಿಗಳ ಕುರಿತು ನಾವು ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕೇವಲ ಸಿಎಂ ಸಿದ್ದರಾಮಯ್ಯ ಮಾತ್ರವಲ್ಲ. ಕೆಪಿಸಿಸಿ ಅಧ್ಯಕ್ಷರೂ ಸೇರಿದಂತೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಂಕಲ್ಪ ಮಾಡಿದ್ದೇವೆ'' ಎಂದರು.
''ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 28 ಸಚಿವರನ್ನು ದೆಹಲಿಗೆ ಕರೆಸಿಕೊಂಡು ಜವಾಬ್ದಾರಿ ಕೊಟ್ಟಿದ್ದಾರೆ, ಇದು ಸತ್ಯ. ನಮಗೆಲ್ಲರಿಗೂ ಒಂದೊಂದು ಕ್ಷೇತ್ರದ ಜವಾಬ್ದಾರಿ ಕೊಟ್ಟಿದ್ದಾರೆ. ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಗಮನಿಸಿಲ್ಲ'' ಎಂದು ಹೇಳಿದರು.
ಇದೇ ವಿಷಯಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ''ಡಾ.ಯತೀಂದ್ರ ಅವರ ಹೇಳಿಕೆ ವೈಯಕ್ತಿಕ. ನನಗೆ ಸಂಬಂಧವಿಲ್ಲ. ಅವರು ಎಲ್ಲಿ, ಏನು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ಅವರ ವೈಯಕ್ತಿಕ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ'' ಎಂದರು.
ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ, ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಹಾಸನದಲ್ಲಿ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದು, ಹಾಗಾಗಿ, ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಮಾಜಿ ಶಾಸಕ ಡಾ.ಯತೀಂದ್ರ ಹೇಳಿಕೆ: "ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಹೆಚ್ಚಿನ ಅಭ್ಯರ್ಥಿಗಳನ್ನು ಬೆಂಬಲಿಸಿದರೆ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ. ಇದರೊಂದಿಗೆ ತಂದೆಯವರಿಗೆ ನೈತಿಕ ಬಲವು ಹೆಚ್ಚಾತ್ತದೆ. ಯಾವುದೇ ಅಡೆತಡೆ ಇಲ್ಲದೇ ಅವರು ಮುಂದಿನ 5 ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ" ಎಂದು ಮಾಜಿ ಶಾಸಕ ಹಾಗೂ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಹೊಳೆನರಸೀಪುರ ತಾಲೂಕಿನ ಅಣ್ಣೆಚಾಕನಹಳ್ಳಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಅವರು, "ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಅಧಿಕಾರ ಹಂಚಿಕೆಯ ಬಗ್ಗೆ ಪುನಃ ಚರ್ಚೆ ಶುರುವಾಗುವ ಸಾಧ್ಯತೆಯಿದೆೆ. ಅನ್ನಭಾಗ್ಯ, ಕೃಷಿ ಭಾಗ್ಯ, ಶಾದಿ ಭಾಗ್ಯ, ಕ್ಷೀರ ಭಾಗ್ಯದಂತಹ ಹಲವು ಭಾಗ್ಯಗಳನ್ನು ಸಿದ್ದರಾಮಯ್ಯನವರು ನೀಡಿದ್ದರು. ಅನ್ನ ಭಾಗ್ಯ , ಗೃಹ ಲಕ್ಷ್ಮಿ, ಶಕ್ತಿ ಯೋಜನೆ, ಯುವನಿಧಿ ಕಾರ್ಯಕ್ರಮಗಳನ್ನು ನೀಡುವ ಕುರಿತು ಸಿದ್ದರಾಮಯ್ಯನವರೇ ಭರವಸೆ ಕೊಟ್ಟಿದ್ದರು. ಈ ಯೋಜನೆಗಳನ್ನು ಸರ್ಕಾರ ಒಂದು ವರ್ಷ ಪೊರೈಸುವುದರೊಳಗೆ ಜಾರಿಗಗೊಳಿಸಿದೆ. ನಾವು ನುಡಿದಂತೆ ನಡೆದ್ದೇವೆ ಎಂದು ಮತ್ತೊಮ್ಮೆ ಸಾಬೀತು ಮಾಡಿ ತೋರಿಸಿದ್ದಾರೆ" ಎಂದು ತಿಳಿಸಿದರು.
ಇದನ್ನೂ ಓದಿ: 'ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಸಿದ್ದರಾಮಯ್ಯ 5 ವರ್ಷ ಅಡೆತಡೆ ಇಲ್ಲದೇ ಸಿಎಂ'