ಬೆಂಗಳೂರು/ದೆಹಲಿ : ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಕಾಸರತ್ತು ಮಂಗಳವಾರ ನವದೆಹಲಿಯಲ್ಲಿ ದಿನವಿಡಿ ನಡೆದಿದ್ದು, ಯಾವುದೇ ಫಲ ಪಡೆಯುವಲ್ಲಿ ವಿಫಲವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಡುವೆ ಶಾಸಕಾಂಗ ಪಕ್ಷದ ನಾಯಕ ಹಾಗೂ ತನ್ಮೂಲಕ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದೆ.
ಕಾಂಗ್ರೆಸ್ ಬಹುಮತ ಪಡೆದ ಬಳಿಕ ರಾಜ್ಯದಲ್ಲಿ ಈ ವಿಚಾರವಾಗಿ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಾಗದ ನಾಯಕರು ದಿಲ್ಲಿಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇಬ್ಬರು ನಾಯಕರನ್ನು ದಿಲ್ಲಿಗೆ ಕರೆಸಿಕೊಂಡು ಸುದೀರ್ಘ ಚರ್ಚೆ ನಡೆಸುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಬ್ಬರಲ್ಲಿ ಒಬ್ಬರನ್ನು ಮನವೊಲಿಸಿ ಸಿಎಂ ಪಟ್ಟಕ್ಕೆ ಏರಿಸುವ ಯತ್ನವನ್ನು ಮಾಡಿದ್ದಾರೆ. ಆದರೆ ಸಂಜೆಯವರೆಗೂ ನಡೆಸಿದ ಪ್ರಯತ್ನ ಅಷ್ಟಾಗಿ ಫಲ ಕೊಟ್ಟಿಲ್ಲ.
ಸಿದ್ದರಾಮಯ್ಯ ಸೋಮವಾರ ಮಧ್ಯಾಹ್ನವೇ ಬೆಂಗಳೂರಿನಿಂದ ದಿಲ್ಲಿಗೆ ತೆರಳಿದ್ದು, ಅಲ್ಲಿ ತಮ್ಮ ಬೆಂಬಲಿಗ ಶಾಸಕರ ಮೂಲಕ ಮಲ್ಲಿಕಾರ್ಜುನ ಖರ್ಗೆ ಮೇಲೆ ಒತ್ತಡ ತರುವ ಪ್ರಯತ್ನ ನಡೆಸಿದ್ದರು. ಅನಾರೋಗ್ಯದ ಕಾರಣಕ್ಕೆ ಬೆಂಗಳೂರಿನಲ್ಲಿಯೇ ತಂದಿದ್ದ ಡಿ ಕೆ ಶಿವಕುಮಾರ್ ಸಹ ತಮ್ಮ ಸೋದರ ಹಾಗೂ ಸಂಸದ ಡಿ.ಕೆ ಸುರೇಶರನ್ನು ನಿನ್ನೆಯೇ ದಿಲ್ಲಿಗೆ ಕಳುಹಿಸಿದ್ದು ತಮ್ಮ ಬೆಂಬಲಿಗರ ಮೂಲಕ ಮಲ್ಲಿಕಾರ್ಜುನ್ ಖರ್ಗೆ ಅವರ ಮೇಲೆ ಒತ್ತಡ ತರುವ ಪ್ರಯತ್ನ ನಡೆಸಿದ್ದಾರೆ. ಇದೆಲ್ಲದರ ಬಳಿಕ ತಮ್ಮ ಉಪಸ್ಥಿತಿಯ ಅಗತ್ಯ ಮನಗಂಡ ಅವರು ಮಂಗಳವಾರ ಬೆಳಗ್ಗೆ ದೆಹಲಿಗೆ ತೆರಳಿದ್ದಾರೆ.
ಮಂಗಳವಾರ ದೆಹಲಿ ಬೆಳವಣಿಗೆ : ಬೆಂಗಳೂರಿನಿಂದ ದಿಲ್ಲಿಗೆ ತಲುಪಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನೇರವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆಯಲ್ಲಿ ತಮ್ಮ ಪಾತ್ರ ಪ್ರಮುಖವಾಗಿದ್ದು, ಈ ಸಾರಿ ಸಿಎಂ ಆಗುವ ಅವಕಾಶವನ್ನ ನೀಡುವಂತೆ ಕೋರಿದ್ದಾರೆ. ಇವರ ಜೊತೆ ಸುದೀರ್ಘ ಚರ್ಚೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ ನಂತರ ಸಂಜೆ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಸಹ ತಮ್ಮ ಬೆಂಬಲಿಗರೊಂದಿಗೆ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ತೆರಳಿದ್ದು, ಸುದೀರ್ಘ ಸಮಾಲೋಚನೆ ನಡೆಸಿ ತಮ್ಮ ಆಯ್ಕೆಗೆ ಒಂದಿಷ್ಟು ಕಾರಣವನ್ನು ನೀಡಿದ್ದಾರೆ.
ಇಬ್ಬರ ಮಾಹಿತಿಯನ್ನು ಪಡೆದಿರುವ ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಪಕ್ಷದ ಶಾಸಕರು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮೇ 14ರಂದು ನಡೆದ ಶಾಸಕಾಂಗ ಸಭೆಯಲ್ಲಿ ಮಾಡಿದ ಮತದಾನದ ವಿವರವನ್ನು ಸಹ ಮುಂದಿಟ್ಟುಕೊಂಡು ಇಬ್ಬರು ನಾಯಕರ ಜೊತೆ ಚರ್ಚಿಸಿದ್ದಾರೆ. ಸಿಮ್ಲಾಗೆ ತೆರಳಿರುವ ಎಐಸಿಸಿ ಮಾಜಿ ಅಧ್ಯಕ್ಷ ಸೋನಿಯಾ ಗಾಂಧಿ ಇಂದು ದೆಹಲಿಗೆ ವಾಪಸಾಗದ ಹಿನ್ನೆಲೆ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಬಹುತೇಕ ಇಬ್ಬರು ನಾಯಕರ ಸಮಾಲೋಚನೆ ನಡೆಸಿದ್ದಾರೆ. ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ವಿಚಾರದಲ್ಲಿ ಉಂಟಾಗಿರುವ ಕಗ್ಗಂಟು ಸರಿಯಾಗದ ಹಿನ್ನೆಲೆ ಸಮಸ್ಯೆ ಪರಿಹರಿಸುವ ಜವಾಬ್ದಾರಿಯನ್ನು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ವಹಿಸಿದ್ದಾರೆ.
ಇಬ್ಬರು ನಾಯಕರು ತಮ್ಮ ವಾದವನ್ನು ಖರ್ಗೆ ಮುಂದೆ ಮಂಡಿಸಿದ್ದು, ಇದನ್ನು ಅವರು ರಾಹುಲ್ ಗಾಂಧಿ ಮುಂದೆ ವಿವರಿಸಿದ್ದು ಒಂದು ಸುತ್ತಿನ ಮಾತುಕತೆಯನ್ನು ಮಂಗಳವಾರ ಸಂಜೆ ನಡೆಸಿದ್ದಾರೆ. ಮಾತುಕತೆಯಲ್ಲಿ ರಾಷ್ಟ್ರೀಯ ನಾಯಕರು ಯಾವುದೇ ತಾರ್ಕಿಕ ಅಂತ್ಯಕ್ಕೆ ತಲುಪುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆ ಬುಧವಾರ ಬೆಳಗ್ಗೆಯೂ ದಿಲ್ಲಿಯಲ್ಲಿ ಸರಣಿ ಸಭೆ ಮುಂದುವರೆಯಲಿದೆ.
ಬುಧವಾರ ಅಂತಿಮ ನಿರ್ಧಾರ? : ರಾಹುಲ್ ಗಾಂಧಿ ನೇರವಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೊತೆ ಸಭೆ ಸೇರಿ ಚರ್ಚಿಸಲಿದ್ದು, ಬಹುತೇಕ ಇಬ್ಬರಲ್ಲಿ ಒಬ್ಬರ ಮನವೊಲಿಕೆ ಮಾಡಿ ಅಧಿಕಾರ ಹಂಚಿಕೆ ಸೂತ್ರ ಅನುಸಾರ ಸಮಾಧಾನಪಡಿಸುವ ಕಾರ್ಯ ಮಾಡಲಿದ್ದಾರೆ ಎಂಬ ಮಾಹಿತಿ ಇದೆ. ಕಾಂಗ್ರೆಸ್ ಪಕ್ಷದ ಸಿಎಂ ಆಯ್ಕೆ ದೊಡ್ಡ ಮಟ್ಟದ ಸವಾಲಾಗಿ ರಾಷ್ಟ್ರೀಯ ನಾಯಕರಿಗೆ ಪರಿಣಮಿಸಿದೆ. ಬುಧವಾರ ಮಧ್ಯಾಹ್ನದ ನಂತರವೂ ಸರಣಿ ಸಭೆಗಳು ನಡೆಯಲಿದ್ದು, ಸಂಜೆಯ ಹೊತ್ತಿಗೆ ಕರ್ನಾಟಕದ ಮುಂದಿನ ಸಿಎಂ ಯಾರು ಎಂಬ ಆಯ್ಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಗುರುವಾರ ಇಲ್ಲವೇ ಶುಕ್ರವಾರ ರಾಜ್ಯದ ನೂತನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಮತ್ತು ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ಇದನ್ನೂ ಓದಿ : ಡಿಕೆಶಿ, ಸಿದ್ದರಾಮಯ್ಯ ಜೊತೆ ಖರ್ಗೆ ಚರ್ಚೆ; ನಾಳೆ ನೂತನ ಸಿಎಂ ಘೋಷಣೆ ಸಾಧ್ಯತೆ..