ಬೆಂಗಳೂರು: ಐಎಸ್ಡಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ರಾಷ್ಟ್ರೀಯ ಭದ್ರತೆಗೆ ಧಕ್ಕೆಗೆ ಕಾರಣರಾಗಿದ್ದ ಇಬ್ಬರು ಆರೋಪಿಗಳ ಬಂಧನ ಪ್ರಕರಣ ಸಂಬಂಧ ಸಿಸಿಬಿ ಭಯೋತ್ಪಾದನ ನಿಗ್ರಹ ದಳ (ಎಟಿಸಿ) ತನಿಖೆ ಚುರುಕುಗೊಳಿಸಿದೆ. ಪ್ರಕರಣದ ಆರೋಪಿಗಳಾದ ಕೇರಳ ಮೂಲದ ಇಬ್ರಾಹಿಂ ಹಾಗೂ ತಮಿಳುನಾಡಿನ ಗೌತಮ್ನನ್ನು ಬಂಧಿಸಿ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದೆ.
ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತನೆ ಜಾಲದಲ್ಲಿ ಎಲೆಕ್ಟ್ರಾನಿಕ್ ಡಿವೈಸ್ ಸೇರಿದಂತೆ 960ಕ್ಕೂ ಹೆಚ್ಚು ವಿವಿಧ ಕಂಪೆನಿಗಳ ಸಿಮ್ ಕಾರ್ಡ್ಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ದೊಡ್ಡ ಸಂಖ್ಯೆ ಸಿಮ್ ಕಾರ್ಡ್ಗಳು ಎಲ್ಲಿಂದ, ಹೇಗೆ ಬಂದವು ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?:
ಕೆಲ ತಿಂಗಳ ಹಿಂದೆ ಈಶಾನ್ಯ ಭಾರತದ ಸೇನಾ ನೆಲೆಗೆ ಹಿರಿಯ ಅಧಿಕಾರಿಗಳ ಸೋಗಿನಲ್ಲಿ ಅಪರಿಚಿತರು ಕರೆ ಮಾಡಿ ಸೇನೆಯ ಕುರಿತ ಕೆಲ ಮಾಹಿತಿ ಕೇಳಿದ್ದರು. ಇದರಿಂದ ಅನುಮಾನಗೊಂಡ ಸೇನಾಧಿಕಾರಿಗಳು ಇದೇ ರೀತಿಯ ಬೇರೆ ವಿವಿಧ ಸೇನಾನೆಲೆಗಳಿಗೆ ಕರೆಗಳ ಬಗ್ಗೆ ಮಾಹಿತಿ ಕೇಳಿದ್ದಾಗ ಇದೇ ರೀತಿ ಕರೆಗಳು ಬಂದಿರುವುದನ್ನು ಕಂಡುಕೊಂಡಿದ್ದರು. ಈ ಬಗ್ಗೆ ಮಿಲಿಟರಿ ಇಂಟೆಲಿಜೆನ್ಸ್ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದಾಗ ಐಎಸ್ಡಿ ಕರೆಗಳನ್ನು ಸ್ಥಳೀಯ ಕರೆಗಳಾಗಿ ಬೆಂಗಳೂರಿನಲ್ಲಿ ಪರಿವರ್ತಿಸುತ್ತಿರುವುದು ಬೆಳಕಿಗೆ ಬಂದಿತ್ತು. ಅಲ್ಲದೆ ಕರೆಗಳ ಹಿಂದೆ ಪಾಕಿಸ್ತಾನಿ ಇಂಟಲಿಜೆನ್ಸ್ ಕೈವಾಡವಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಆರ್ಮಿ ಇಂಟೆಲಿಜೆನ್ಸ್ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬೆಂಗಳೂರಿನ ಎಟಿಸಿ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
ಕೊರಿಯರ್ ಮೂಲಕ ಪ್ರಿ-ಆ್ಯಕ್ಟಿವೇಟೆಡ್ ಸಿಮ್ ಕಾರ್ಡ್ ಆಮದು:
ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಲು ಆರೋಪಿಗಳು ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ತಮ್ಮದೇ ವ್ಯವಸ್ಥಿತ ಜಾಲದಿಂದ ಆ್ಯಕ್ಟಿವ್ ಆಗಿರುವ ಸಿಮ್ ಕಾರ್ಡ್ಗಳನ್ನು ಕೊರಿಯರ್ ಮುಖಾಂತರ ತರಿಸಿಕೊಳ್ಳುತ್ತಿದ್ದರು. ಸಿಮ್ ಕಾರ್ಡ್ ಮಾರಾಟ ಮಾಡುವ ಸಿಬ್ಬಂದಿಗೆ ಹಣ ಪಾವತಿಸಿ ಕೊರಿಯರ್ ಮೂಲಕ ಆಮದು ಮಾಡಿಕೊಂಡು ಕೃತ್ಯ ಎಸಗುತ್ತಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸದ್ಯ ಸಿಮ್ ಕಾರ್ಡ್ ಮೂಲದ ಬಗ್ಗೆ ಎಟಿಸಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಓದಿ: ಐಎಸ್ಡಿ ಕರೆ ಲೋಕಲ್ ಕಾಲ್ ಆಗಿ ಪರಿವರ್ತನೆ: 960 ಸಿಮ್ ಸಹಿತ ಇಬ್ಬರು ಖತರ್ನಾಕ್ಗಳ ಬಂಧನ