ಬೆಂಗಳೂರು : ರಾಜ್ಯದಲ್ಲಿ 60 ಸಾವಿರಕ್ಕೂ ಹೆಚ್ಚು ಬೀದಿ ದನಗಳಿವೆ. ಅವು ಅವುಗಳಿಗೆ ಸೇರಿದ ಸಾರ್ವಜನಿಕ ಪ್ರದೇಶದಲ್ಲಿವೆ ಎಂಬ ಸರ್ಕಾರದ ಬೇಜವಾಬ್ದಾರಿ ಹೇಳಿಕೆಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಮುಂದಿನ ವಿಚಾರಣೆ ವೇಳೆ ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ತಾಕೀತು ಮಾಡಿದೆ.
ಜಾನುವಾರುಗಳಿಗೆ ಮೇವು ಪೂರೈಕೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನ ಎ. ಮಲ್ಲಿಕಾರ್ಜುನ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ಲಿಖಿತ ಹೇಳಿಕೆ ಸಲ್ಲಿಸಿ, ರಾಜ್ಯದಲ್ಲಿ 64,758 ಬೀದಿ ಬದಿ ದನಗಳನ್ನು ಗುರುತಿಸಲಾಗಿದೆ. ಅವುಗಳು ತಮಗೆ ಸೇರಿದ ಸಾರ್ವಜನಿಕ ಜಾಗಗಳಲ್ಲಿ ವಾಸ ಮಾಡುತ್ತಿವೆ. ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಅವುಗಳಿಗೆ ಮೇವು, ಆಹಾರ ನೀಡುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ಅವುಗಳಿಗೆ ಮೇವಿನ ಅಗತ್ಯವಿಲ್ಲ ಎಂದು ತಿಳಿಸಿದರು.
ಸರ್ಕಾರಿ ವಕೀಲರ ಲಿಖಿತ ವಾದ ಗಮನಿಸಿದ ಪೀಠ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಸರ್ಕಾರದ ಹೇಳಿಕೆ ಅತ್ಯಂತ ಆಶ್ಚರ್ಯಕರವಾಗಿದೆ. ಬೀದಿ ಬದಿ ದನಗಳಿಗೂ ಅವುಗಳದ್ದೇ ಆದ ಸಾರ್ವಜನಿಕ ಜಾಗ ಇರುತ್ತದೆ ಎಂದು ಕೇಳಿದ್ದು ಇದೇ ಮೊದಲು ಎಂದಿತು.
ಸಾಲದ್ದಕ್ಕೆ ಅಷ್ಟೊಂದು ದನಗಳಿಗೆ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಮೇವು, ಆಹಾರ ನೀಡುತ್ತಾರೆ ಎಂಬ ಹೇಳಿಕೆಯೂ ಅಚ್ಚರಿ ಉಂಟುಮಾಡುತ್ತಿದೆ. ಅಷ್ಟಕ್ಕೂ ಈ ವಿವರಗಳು ಸಿಕ್ಕಿದ್ದು ಹೇಗೆ, ಯಾವ ಆಧಾರದಲ್ಲಿ ಇಂತಹ ವರದಿ ಸಿದ್ದಪಡಿಸಲಾಗಿದೆ ಎಂಬ ಬಗ್ಗೆ ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಸ್ಪಷ್ಟಪಡಿಸಬೇಕು ಎಂದು ತಾಕೀತು ಮಾಡಿತು.
ಅಲ್ಲದೇ, ಬೀದಿ ಬದಿ ದನಗಳ ನಿರ್ವಹಣೆಗೆ 64 ಲಕ್ಷ ರೂಪಾಯಿ ಹಣ ನೀಡಿದ್ದೇವೆಂದು ಸರ್ಕಾರವೇ ಹಿಂದಿನ ವಿಚಾರಣೆ ವೇಳೆ ಹೇಳಿದೆ. ಅದೇ ರೀತಿ ಗೋಶಾಲೆಗಳನ್ನು ನಿರ್ವಹಿಸುತ್ತಿರುವ 76 ಎನ್‍ಜಿಒಗಳಿಗೆ 2019-20ರಲ್ಲಿ 4.25 ಕೋಟಿ ಹಾಗೂ 2020-21ನೇ ಸಾಲಿನಲ್ಲಿ 3.84 ಕೋಟಿ ಹಣ ನಿಗದಿಪಡಿಸಲಾಗಿದೆ ಎಂದೂ ಹೇಳಿದೆ.
ಇದು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವ ಸ್ಪಷ್ಟ ನಿದರ್ಶನ. ಆದ್ದರಿಂದ ಈ ಬಗ್ಗೆ ವಿವರಣೆ ನೀಡಲು ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಜುಲೈ 9ರಂದು ಬೆಳಗ್ಗೆ ವಿಡಿಯೋ ಕಾನ್ಫರೆನ್ಸ್ ವಿಚಾಣೆಗೆ ಖುದ್ದು ಹಾಜರಾಗಬೇಕು ಎಂದು ಹೈಕೋರ್ಟ್ ಆದೇಶಿಸಿದೆ.